ಮತ ಎಣಿಕೆ : ಬೆಳಗ್ಗೆ ನೀರಸ ವಾತಾವರಣ, ಮಧ್ಯಾಹ್ನ ಸಂಭ್ರಮ

ತುಮಕೂರು

    ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸ್ಪರ್ಧೆಯಿಂದಾಗಿ ತುಮಕೂರು ಲೋಕಸಭಾ ಕ್ಷೇತ್ರವು “ಹೈ ವೋಲ್ಟೇಜ್” ಕ್ಷೇತ್ರವಾಗಿ ಪರಿಣಮಿಸಿ ದೇಶದ ಗಮನ ಸೆಳೆದಿದ್ದರೂ, ಮತ ಎಣಿಕೆ ಕೇಂದ್ರವಾಗಿದ್ದ ತುಮಕೂರು ನಗರದ ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಮುಂಭಾಗ ಗುರುವಾರ ಬೆಳಗಿನಿಂದ ಮಧ್ಯಾಹ್ನದವರೆಗೂ ನೀರಸ ವಾತಾವರಣವಿತ್ತು. ಆದರೆ ಮಧ್ಯಾಹ್ನದ ಹೊತ್ತಿಗೆ ಬಿಜೆಪಿ ಅಭ್ಯ ರ್ಥಿ ಜಿ.ಎಸ್.ಬಸವರಾಜು ಅವರ ಮುನ್ನಡೆಯ ವಿಷಯ ಬಹಿರಂಗವಾಗುತ್ತಿದ್ದಂತೆ ಬಿಜೆಪಿಯವರು ಸುಡುಬಿಸಿಲಲ್ಲೂ ಅಲ್ಲಿ ಜಮಾಯಿಸಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರಿಂದ ಆ ಪ್ರದೇಶದಲ್ಲಿ ಕಲರವ ಕಾಣಿಸತೊಡಗಿತು.

     ನಗರದ ಬಿ.ಎಚ್.ರಸ್ತೆಯಲ್ಲಿರುವ ಇವೆರಡು ಕಟ್ಟಡಗಳಲ್ಲಿ ಮತ ಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆಯಿಂದ ಆರಂಭವಾಯಿತು. ಕಟ್ಟಡದ ಒಳಗೆ ಮತ್ತು ಹೊರಗೆ ಬಿಗಿ ಪೊಲೀಸ್ ಭದ್ರತೆಯಿತ್ತು. ಹೊರಗೆ ಬಿ.ಎಚ್.ರಸ್ತೆಯಲ್ಲಿ ಇವೆರಡು ಕಟ್ಟಡಗಳ ಮುಂದೆ ವಾಹನ ಸಂಚಾರವನ್ನು ಮತ್ತು ಜನ ಸಂಚಾರವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿತ್ತು. ಬಿ.ಎಚ್.ರಸ್ತೆಗೆ ಮತ್ತು ಹೊಂದಿಕೊಂಡ ಎಲ್ಲ ಅಡ್ಡರಸ್ತೆಗಳಿಗೂ ಬ್ಯಾರಿಕೇಡ್‍ಗಳನ್ನಿಟ್ಟು / ಅಡ್ಡಗಂಬಗಳನ್ನಿಟ್ಟು ಸಂಚಾರವನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿತ್ತು. ಎಲ್ಲೆಲ್ಲೂ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದು, ಅವರು ಸಂಚಾರ ನಿಯಂತ್ರಣ ಮಾಡಿದರು. ಮತಎಣಿಕೆ ಕೇಂದ್ರದ ಮುಂದಿನ ರಸ್ತೆಯು ಅಕ್ಷರಶಃ “ಶೂನ್ಯ ಸಂಚಾರ” (ಜಿರೋ ಟ್ರಾಫಿಕ್) ಆಗಿತ್ತು.

      ಮತ ಎಣಿಕೆ ಕೇಂದ್ರದ ಎದುರು ಬಿ.ಎಚ್.ರಸ್ತೆಯ ಒಂದು ಬದಿಯ ಸರ್ವೀಸ್ ರಸ್ತೆಯಲ್ಲಿ ಸಾರ್ವಜನಿಕ ಸಂಚಾರಕ್ಕೆ/ ಸಾರ್ವಜನಿಕರ ಹಾಜರಿಗೆ ಸ್ಥಳಾವಕಾಶ ಮಾಡಲಾಗಿತ್ತಾದರೂ, ಬೆಳಗ್ಗೆ 11 ಗಂಟೆಯಲ್ಲೂ ಇಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪಕ್ಷಗಳ ಕಾರ್ಯಕರ್ತರ/ ಸಾರ್ವಜನಿಕರ ಹಾಜರಿಯೇ ಇರಲಿಲ್ಲ.

       ಎದುರು ಬದಿಯ ಅಂಗಡಿ ಮುಂಗಟ್ಟುಗಳ ನೆರಳಲ್ಲಿ, ಗಿಡಮರಗಳ ನೆರಳಲ್ಲಿ ಕೆಲವರು ಕುತೂಹಲದಿಂದ ಕಾಯುತ್ತ ನಿಂತಿದ್ದರು. ಮಜ್ಜಿಗೆ ಮತ್ತಿತರ ತಂಪು ಪಾನೀಯಗಳ ಸಣ್ಣಪುಟ್ಟ ಮಾರಾಟಗಾರರ ಬಳಿ, ತಂಪುಪಾನೀಯ ಮಾರಾಟ ಮಳಿಗೆಗಳಲ್ಲಿ ಜನರು ಗುಂಪುಗೂಡಿದ್ದರು. ಇಲ್ಲಿರುವ ದೊಡ್ಡ ಹಾಗೂ ಸಣ್ಣಪುಟ್ಟ ಹೋಟೆಲ್‍ಗಳಲ್ಲಿ ಕಾಫಿ/ಟೀ ಸೇವಿಸುತ್ತ ಜನರು ಗುಂಪುಗೂಡಿ ಚರ್ಚಿಸುತ್ತಿದ್ದುದೂ ಕಂಡುಬಂದಿತು.

        ಅಷ್ಟರ ವಿನಃ ಮಿಕ್ಕಂತೆ ಕಾಂಗ್ರೆಸ್,ಜೆಡಿಎಸ್, ಬಿಜೆಪಿ ಪಕ್ಷಗಳ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಕಾಣಿಸಲಿಲ್ಲ. ವಿಪರೀತ ಬಿಸಿಲಿನ ಧಗೆ ಇದ್ದುದು ಒಂದೆಡೆಯಾದರೆ, ಬಹುತೇಕ ಜನರು ಟಿ.ವಿ.ಗಳ ಮುಂದೆ ದೇಶದ ಫಲಿತಾಂಶದತ್ತ ತಲ್ಲೀನರಾಗಿದ್ದುದೂ ಮತ್ತೊಂದು ಕಾರಣವಾಗಿತ್ತು.

     ಈ ಭಾಗದಲ್ಲಿದ್ದ ಜನರಷ್ಟೇ ಅಲ್ಲದೆ, ಭದ್ರತೆಗಾಗಿ ನಿಯೋಜಿತರಾಗಿದ್ದ ಪೊಲೀಸರು ಸಹ ಕುತೂಹಲದಿಂದ ಮೊಬೈಲ್ ಫೋನ್‍ಗಳಲ್ಲಿ ಚುನಾವಣಾ ಫಲಿತಾಂಶವನ್ನು ವೀಕ್ಷಿಸುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು.

      ಹೊತ್ತೇರಿದಂತೆ -ಬಿಸಿಲಿನ ಧಗೆ ಏರಿದಂತೆ -ಇತ್ತ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರು ತಮ್ಮ ಪ್ರತಿಸ್ಪರ್ಧಿಯಾಗಿದ್ದ ಮಾಜಿ ಪ್ರಧಾನಿ ಮೈತ್ರಿ ಪಕ್ಷದ ಅಭ್ಯರ್ಥಿ ಎಚ್.ಡಿ.ದೇವೇಗೌಡರಿಗಿಂತ ಪ್ರತಿ ಸುತ್ತಿನಲ್ಲೂ ಸತತವಾಗಿ ಮುನ್ನಡೆ ಸಾಧಿಸುತ್ತಿದ್ದಾರೆಂಬುದು ಬಹಿರಂಗವಾಗುತ್ತಿದ್ದಂತೆ ಮಧ್ಯಹ್ನ ಸುಮಾರು 1-30 ರ ಹೊತ್ತಿನಲ್ಲಿ ನಗರದ ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಗುಂಪು ಗೂಡಿ ಸಂಭ್ರಮಾಚರಣೆಯಲ್ಲಿ ತೊಡಗಿದರು. ತಮಟೆ ಸದ್ದು ಮುಗಿಲು ಮುಟ್ಟತೊಡಗಿತು. ಬಿಜೆಪಿ ಬಾವುಟ ಹಿಡಿದು ಘೋಷಣೆ ಕೂಗುತ್ತ, ಕಾರ್ಯಕರ್ತರು ಕುಣಿದು ಕುಪ್ಪಳಿಸತೊಡಗಿದರು. ಕೇಸರಿ ಅಂಗವಸ್ತ್ರ ತೊಟ್ಟವರ ಸಂಖ್ಯೆ ಹೆಚ್ಚತೊಡಗಿತು. ಮತ ಎಣಿಕೆ ಕೇಂದ್ರದ ಎದುರು ಭಾಗದಲ್ಲೂ ಬಿಜೆಪಿಯವರು ಖುಷಿಯಿಂದ ಸೇರಿದರು. ಪರಸ್ಪರ ಸಂತಸದಿಂದ ಅಭಿನಂದಿಸಲಾರಂಭಿಸಿದರು. ಆವರೆಗೂ ನೀರಸವಾಗಿದ್ದ ಆ ಪ್ರದೇಶವೆಲ್ಲ ಬಿಜೆಪಿಯ ಸಂಭ್ರಮಾಚರಣೆಯ ಕೇಂದ್ರವಾಗಿ ಮಾರ್ಪಟ್ಟಿತು.

ಖಾಲಿಯಾಗಿದ್ದ ಬಸ್ ನಿಲ್ದಾಣ

       ತುಮಕೂರು ನಗರದ ವಿವಿಧ ಬಡಾವಣೆಗಳ ರಸ್ತೆಗಳಲ್ಲೂ ಬೆಳಗಿನಿಂದ ಜನ-ವಾಹನ ಸಂಚಾರ ಕ್ಷೀಣವಾಗಿಯೇ ಇತ್ತು. ಹೋಟೆಲ್ ಮತ್ತಿತರ ಜನಸೇರುವ ಕಡೆಗಳಲ್ಲಿ ಜನರು ಗುಂಪುಗೂಡಿದ್ದು, ಎಲ್ಲರೂ ಚುನಾವಣಾ ಫಲಿತಾಂಶದ ಬಗ್ಗೆ ಚರ್ಚಿಸುತ್ತಿದ್ದುದು ಕಂಡುಬಂದಿತು. ನಗರದ ಕಲ್ಯಾಣ ಮಂಟಪಗಳಲ್ಲಿ ಈ ದಿನವೇ ಇದ್ದ ವಿವಾಹಗಳಿಗೆ ಬಂದ ಜನರ ಸಂಖ್ಯೆಯೂ ಕ್ಷೀಣವಾಗಿತ್ತು. ನಗರದ ಅಶೋಕ ರಸ್ತೆಯಲ್ಲಿರುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಮತ್ತು ಖಾಸಗಿ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿದ್ದು, ಬಸ್ ನಿಲ್ದಾಣಗಳು ಖಾಲಿ-ಖಾಲಿಯಾದಂತಿದ್ದವು.

      ಬೆಳಗಿನಿಂದ ಮಧ್ಯಾಹ್ನದವರೆಗೂ ನಗರದಲ್ಲಿರುವ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಕಚೇರಿಗಳಲ್ಲೂ ನೀರಸವಾದ ವಾತಾವರಣವಿತ್ತು. ಯಾವುದೇ ಉತ್ಸಾಹದ ಚಟುವಟಿಕೆಗಳು ಕಾಣಿಸಲಿಲ್ಲ. ಆದರೆ ಮಧ್ಯಾಹ್ನದ ಬಳಿಕ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರ ಗೆಲುವು ಖಚಿತವಾಗುತ್ತಿದ್ದಂತೆಯೇ ನಗರದ ವಿವಿಧ ರಸ್ತೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಬಿಜೆಪಿ ಬಾವುಟ ಹಿಡಿದು ಘೋಷಣೆ ಕೂಗುತ್ತ ಸಂಭ್ರಮಾಚರಣೆಯಲ್ಲಿ ತೊಡಗಿದ್ದುದು ಕಂಡುಬಂದಿತು. ಮತ ಎಣಿಕೆ ಕೇಂದ್ರದ ಬಳಿಗೂ ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಅತ್ಯುತ್ಸಾಹದಿಂದ ಜಮಾಯಿಸಿದರು.

ತುದಿಗಾಲಲ್ಲಿ ನಿಂತ ಜನರು

     ತುಮಕೂರು ಕ್ಷೇತ್ರದ ಚುನಾವಣಾ ಫಲಿತಾಂಶದ ಬಗ್ಗೆ ತಿಳಿದುಕೊಳ್ಳಲು ತುಮಕೂರು ನಗರಾದ್ಯಂತ ಸಾರ್ವಜನಿಕರಲ್ಲಿ ತೀವ್ರ ಕುತೂಹಲವಿತ್ತು. ತುದಿಗಾಲಲ್ಲಿ ನಿಂತಂತೆ ಬೆಳಗಿನಿಂದಲೂ ಜನರು ಕಾತರರಾಗಿದ್ದರು. “ಏನಾಯಿತು? ಯಾರು ಮುನ್ನಡೆ ಸಾಧಿಸಿದ್ದಾರೆ? ಯಾವ ಸುತ್ತಿನಲ್ಲಿ ಯಾರಿಗೆಷ್ಟು ಮತಗಳು ಬಂದಿವೆ?” ಎಂದು ಮೊಬೈಲ್ ಫೋನ್ ಮೂಲಕ ತಿಳಿದುಕೊಳ್ಳುವಲ್ಲಿ ಜನರು ನಿರತರಾಗಿದ್ದರು. ಫಲಿತಾಂಶ ಪ್ರಚಾರಕ್ಕೆ ಸಾಮಾಜಿಕ ಜಾಲತಾಣಗಳೂ ಬಳಕೆಯಾದವು. ದೇವೇಗೌಡರ ಸೋಲು ಒಂದು ಗುಂಪಿಗೆ ನಿರಾಶೆ ತಂದರೆ, ಜಿ.ಎಸ್.ಬಸವರಾಜು ಅವರ ಗೆಲುವು ಮತ್ತೊಂದು ಗುಂಪಿಗೆ ಖುಷಿ ಕೊಟ್ಟಿತು. ಸೋಲು-ಗೆಲುವಿನ ಬಗೆಗೂ ಆಯಾ ಪಕ್ಷಗಳವರು ಹಾಗೂ ಸಾರ್ವಜನಿಕರು ತಮ್ಮದೇ ಆದ ವಿಶ್ಲೇಷಣೆಯಲ್ಲಿ ನಿರತರಾಗಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap