ಬೆಂಗಳೂರು
ಹಣಕಾಸಿನ ತೊಂದರೆಯಿಂದ ತೀವ್ರವಾಗಿ ಮನನೊಂದಿದ್ದ ಪತಿ-ಪತ್ನಿ ಇಬ್ಬರೂ ಶೌಚಾಲಯ ಸ್ವಚ್ಛಗೊಳಿಸುವ ಬ್ಲಿಚಿಂಗ್ ಆಸಿಡ್ ಕುಡಿದು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜುನಾಥ ನಗರದಲ್ಲಿ ಗುರುವಾರ ಮಧ್ಯರಾತ್ರಿ ನಡೆದಿದೆ.
ಮಂಜುನಾಥ ನಗರದ ಪುಷ್ಪಾಂಜಲಿ ಚಿತ್ರಮಂದಿರದ ಬಳಿ ವಾಸಿಸುತ್ತಿದ್ದ ಮೋಹನ್ (62) ಹಾಗೂ ಅವರ ಪತ್ನಿ ನಿರ್ಮಲಾ (50) ಎಂದು ಮೃತ ದಂಪತಿಯನ್ನು ಗುರುತಿಸಲಾಗಿದೆ.ಬೆಮೆಲ್‌ನ ನಿವೃತ್ತ ನೌಕರರಾಗಿದ್ದ ಮೋಹನ್ ಮಂಜುನಾಥ ನಗರದಲ್ಲಿ ಅಕ್ಕಪಕ್ಕ ಮನೆ ಕಟ್ಟಿಕೊಂಡಿದ್ದು ಅವರ ಒಂದು ಮನೆಯಲ್ಲಿ ಮೋಹನ್ ಹಾಗೂ ನಿರ್ಮಲಾ ದಂಪತಿ ವಾಸಿಸುತ್ತಿದ್ದರೆ, ಮತ್ತೊಂದು ಮನೆಯಲ್ಲಿ ಇದ್ದ ಒಬ್ಬನೇ ಮಗ ಹಾಗೂ ಸೊಸೆ ವಾಸಿಸುತ್ತಿದ್ದರು.
ನಿವೃತ್ತ ಜೀವನ ನಡೆಸುತ್ತಿದ್ದ ಮೋಹನ್, ಹಣಕಾಸಿನ ತೊಂದರೆಗೆ ಸಿಲುಕಿದ್ದರು ಅಲ್ಲದೇ ಕೌಟುಂಬಿಕ ಕಲಹವು ಅವರನ್ನು ಘಾಸಿಗೊಳಿಸಿತ್ತು ಅದೇ ನೋವಿನಲ್ಲಿ ರಾತ್ರಿ 11ರ ವೇಳೆ ಪತ್ನಿ ನಿರ್ಮಲಾ ಜತೆ ಶೌಚಾಲಯ ಸ್ವಚ್ಛಗೊಳಿಸುವ ಆಸಿಡ್ ಕುಡಿದಿದ್ದಾರೆ.ರಕ್ತ ಕಾರಿಕೊಂಡು ಅಸ್ವಸ್ಥರಾಗಿ ಇಬ್ಬರು ಮೃತಪಟ್ಟಿದ್ದು, ಬೆಳಿಗ್ಗೆ ಮಗ ಬಾಗಿಲು ಬಡಿದಿದ್ದು, ಎಷ್ಟು ಬಾರಿ ಬಡಿದರೂ ತೆಗೆಯದಿದ್ದರಿಂದ ಆತಂಕಗೊಂಡು ಬಾಗಿಲು ಒಡೆದು ನೋಡಿದಾಗ ಇಬ್ಬರು ಬಾಯಲ್ಲಿ ರಕ್ತ ಸುರಿದು ಮೃತಪಟ್ಟಿರುವುದು ಕಂಡು ಬಂದಿದ್ದು, ಕೂಡಲೇ ಆತ ಬಸವೇಶ್ವರ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆತ್ಮಹತ್ಯೆಗೆ ಮುನ್ನ ಮೋಹನ್ ಡೆತ್‌ನೋಟ್ ಬರೆದಿದ್ದು, ಅದು ತಮಿಳಿನಲ್ಲಿದೆ. ಹಣಕಾಸಿನ ತೊಂದರೆಯಿಂದ ಆತ್ಮಹತ್ಯೆಗೆ ಶರಣಾಗಿರಬಹುದೆಂದು ಶಂಕಿಸಲಾಗಿದೆ.ಸುದ್ದಿ ತಿಳಿದ ತಕ್ಷಣಕ್ಕೆ ಸ್ಥಳಕ್ಕೆ ಬಸವೇಶ್ವರ ನಗರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ರಮೇಶ್ ಮನೋತ್ ತಿಳಿಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
