ನೀಲಮಣಿ ರಾಜು ವಿರುದ್ದದ ಪ್ರಕರಣ ಕೈಬಿಟ್ಟ ಹೈಕೋರ್ಟ್..!

ಬೆಂಗಳೂರು
     ಸಾರ್ವಜನಿಕರು ನೀಡುವ ದೂರುಗಳನ್ನು ಆಧರಿಸಿ ಎಫ್‍ಐಆರ್ ದಾಖಲಿಸುವಾಗ ಪೊಲೀಸ್ ಠಾಣೆ ವ್ಯಾಪ್ತಿ ಕೇಳದಂತೆ (ಝೀರೋ ಎಫ್ ಐ ಆರ್) ಹಾಗೂ ನಿರ್ಲಕ್ಷ್ಯವಹಿಸದಂತೆ ಎಲ್ಲ ಪೊಲೀಸ್ ಠಾಣೆಗಳಿಗೆ ನಿರ್ದೇಶಿಸುವಂತೆ ನೀಡಿದ್ದ ಆದೇಶ ಪಾಲಿಸದ ಪೊಲೀಸ್ ಮಹಾ ನಿರ್ದೇಶಕರಾದ ನೀಲಮಣಿ ರಾಜು ವಿರುದ್ಧ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಹೈಕೋರ್ಟ್ ಕೈಬಿಟ್ಟಿದೆ. 
  
     ವಕೀಲರಾದ ಉಮಾಪತಿ ಎಸ್ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ವೇಳೆ ಪ್ರಮಾಣಪತ್ರ ಸಲ್ಲಿಸಿದ ನೀಲಮಣಿ ರಾಜು,  ಈ ಸಂಬಂಧ ನ. 26ರಂದೇ ಸುತ್ತೋಲೆ ಹೊರಡಿಸಲಾಗಿದೆ ಎಂದು ವಿವರಿಸಿದರು. ಇದನ್ನು ಪರಿಗಣಿಸಿದ ನ್ಯಾಯಮೂರ್ತಿ ಅರವಿಂದ ಕುಮಾರ್ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿದಂರಾಜು ನೇತೃತ್ವದ ವಿಭಾಗೀಯ ಪೀಠ  ಪ್ರಕರಣವನ್ನು ಕೈಬಿಟ್ಟಿತು. 
  
     ಎಲ್ಲಾ ಪೊಲೀಸ್ ಠಾಣೆಗಳಿಗೆ ಸುತ್ತೋಲೆ ಹೊರಡಿಸುವಂತೆ ಹೈಕೋರ್ಟ್ ನೀಡಿದ್ದ ಆದೇಶದ ಪ್ರತಿ ತಮಗೆ  ನ. 19 ರಂದು ದೊರಕಿತ್ತು. ಅದರಂತೆ ನಾವು ನ.26ರಂದು ಸುತ್ತೊಲೆ ಹೊರಡಿಸಲಾಗಿದೆ ಎಂದು ಪ್ರಮಾಣಪತ್ರದಲ್ಲಿ ವಿವರಿಸಿದ್ದಾರೆ.   ಪ್ರತಿ ಪೊಲೀಸ್ ಠಾಣೆಯಲ್ಲೂ ತಮ್ಮ ವ್ಯಾಪ್ತಿಯನ್ನು ಮೀರಿದ ಪ್ರಕರಣಗಳ ಎಫ್ ಐಆರ್ ಕೂಡ ದಾಖಲಿಸಿಕೊಳ್ಳಬೇಕು ಮತ್ತು ನಂತರ ಅದನ್ನು ಸೂಕ್ತ ಪೊಲೀಸ್ ನಿಲ್ದಾಣಗಳಿಗೆ ವರ್ಗಾಯಿಸಬೇಕು. ಪೊಲೀಸ್ ಅಧಿಕಾರಿಗಳು ಈ ಸುತ್ತೋಲೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು . ಅದನ್ನು ಪಾಲಿಸದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.
 
     ಯಾವುದೇ ಒಂದು ಕಾಗ್‍ನಿಜಬಲ್ ಅಪರಾಧ ಪ್ರಕರಣ ಘಟಿಸಿದಾಗ ಕೂಡಲೇ ಆ ಮಾಹಿತಿ ಪೋಲಿಸ್ ಠಾಣೆಯಲ್ಲಿ ದಾಖಲಾಗಬೇಕು. ಇದು ಮುಂದಿನ ತನಿಖಾ ಪ್ರಕ್ರಿಯೆಗೆ ಸುಲಭವಾದ ದಾರಿ ಮಾರ್ಗ. ತಡವಾಗಿ ಅಪರಾಧ ಪ್ರಕರಣಗಳು ದಾಖಲಾದರೆ ಅದರ ಗಂಭೀರತೆ ಕಳೆದುಕೊಳ್ಳುವ ಜೊತೆಗೆ ಸಾಕ್ಷ್ಯಾದಾರಗಳು ನಾಶವಾಗುವ ಸಂಭವವೇ ಹೆಚ್ಚು. ಈ ಕಾರಣಕ್ಕಾಗಿಯೇ ಅಪರಾಧ ಪ್ರಕರಣಗಳನ್ನು ಕೂಡಲೇ ವಿಳಂಬ ಮಾಡದೇ ದಾಖಲಿಸಬೇಕು ಎಂದು ಕಾನೂನು ಹೇಳುತ್ತದೆ. ಸಿ ಆರ್ ಪಿ ಸಿ 154 ನೇ ಕಲಂ ಪ್ರಕಾರ ದೂರು ದಾಖಲಿಸಿ ಮುಂದಿನ ಪ್ರಕ್ರಿಯೆಗಳನ್ನು ಪೋಲಿಸರು ಕೈಗೊಳ್ಳಬೇಕು. 
      ಪ್ರಥಮ ವರ್ತಮಾನ ವರದಿ ದಾಖಲಾದ ನಂತರ ಪೋಲಿಸರು ತನಿಖೆ ಕೈಗೊಂಡು ನಿಗಧಿತ ಅವಧಿಯೊಳಗೆ ನ್ಯಾಯಾಲಯಕ್ಕೆ ದೋಷರೋಪಣ ಪತ್ರ ಸಲ್ಲಿಸಬೇಕು. ಇದು ಕಾನೂನಿನ ಪ್ರಕಾರವೇ ನಡೆಯಬೇಕು. ಆದರೆ ಬಹಳಷ್ಟು ಪ್ರಕರಣಗಳಲ್ಲಿ ಪೋಲಿಸರು ನಿರ್ಲಕ್ಷ್ಯ ವಹಿಸುವುದರಿಂದ ದೂರು ದಾಖಲಿಸಲು ವಿಳಂಬಮಾಡುವುದರಿಂದ ಆರೋಪಿಗಳು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇದರಿಂದ ನ್ಯಾಯ ದೊರಕಿಸಿ ಕೊಡುವುದು ಕಷ್ಟವಾಗುತ್ತದೆ. ಈ ವಿಚಾರದಲ್ಲಿ ಕಾನೂನು ಕ್ಷೇತ್ರದ ಪರಿಣಿತರು ನ್ಯಾಯಾಲಯಗಳ ಮೊರೆ ಹೋಗುತ್ತ ಬಂದಿದ್ದಾರೆ. 
     ವಿಶೇಷವಾಗಿ ತಕ್ಷಣಕ್ಕೆ ಘಟಿಸುವ ಅಪರಾಧ ಪ್ರಕರಣಗಳ ಸಂಬಂಧ ವ್ಯಾಪ್ತಿಯ ನೆಪವೊಡ್ಡಿ ದೂರು ದಾಖಲಿಸಿಕೊಳ್ಳದೆ ಇರುವುದರ ಬಗ್ಗೆ ಸುಪ್ರೀಂ ಕೋರ್ಟ್‍ವರೆಗೂ ದೂರುಗಳು ದಾಖಲಾಗಿವೆ. ಇಂತದೇ ಒಂದು ಪ್ರಕರಣ ಸೆಪ್ಟೆಂಬರ್ 9 ರಂದು ರಾಜ್ಯ ಹೈಕೋರ್ಟ್‍ನಲ್ಲಿ ದಾಖಲಾಗಿತ್ತು. ವಕೀಲರಾದ ಉಮಾಪತಿ ಎಂಬುವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ರಾಜ್ಯ ಹೈಕೋರ್ಟ್ ಕೈಗೆತ್ತಿಕೊಂಡು ಪೊಲೀಸ್ ಇಲಾಖೆಗೆ ನೋಟೀಸ್ ಜಾರಿ ಮಾಡಿತ್ತು.
 
     2012 ರಲ್ಲಿ ನಡೆದ ನಿರ್ಭಯ ಪ್ರಕರಣದ ನಂತರ ದೇಶವ್ಯಾಪಿ ಪ್ರತಿಭಟನೆಗಳು ನಡೆದಾಗ ಸರ್ಕಾರ ಜಸ್ಟೀಸ್ ವರ್ಮ ಕಮಿಟಿ ರಚನೆ ಮಾಡಿತ್ತು. ಈ ಸಮಿತಿಯು ಮಹಿಳೆ ಮತ್ತು ಮಕ್ಕಳ ಪ್ರಕರಣಗಳಿಗೆ ಸಂಬಂಧಿಸಿದಂತೆ ಠಾಣೆಗಳಲ್ಲಿ ನಿರ್ಲಕ್ಷ್ಯ ವಹಿಸುವುದು ಕಂಡು ಬಂದರೆ ಅಂತಹ ವಿಚಾರಗಳ ಬಗ್ಗೆಯೂ ಕ್ರಮದ ಬಗ್ಗೆ ಸೂಚಿಸಿತ್ತು. ಪ್ರಸ್ತುತ ಕಾನೂನಿನ ಪ್ರಕಾರ ಪೋಲಿಸರು ನಿಯಮಾನುಸಾರ ನಡೆದುಕೊಳ್ಳಲು ವಿಫಲರಾದರೆ ಕಲಂ 166 ಎ ಅನ್ವಯ ಕ್ರಮಕೈಗೊಳ್ಳಬಹುದು ಹಾಗೂ ಇಲಾಖಾ ವಿಚಾರಣೆಗೂ ಆದೇಶಿಸಬಹುದು. 
    ಪ್ರಸ್ತುತ ರಾಜ್ಯ ಹೈಕೋರ್ಟ್‍ನಲ್ಲಿ ದಾಖಲಾಗಿದ್ದ ರಿಟ್ ಅರ್ಜಿಯನ್ನು ಇತ್ಯರ್ಥಗೊಳಿಸಿರುವ ನ್ಯಾಯಾಲಯವು ಎಲ್ಲ ಪೋಲೀಸ್ ಅಧಿಕಾರಿಗಳು ಸುತ್ತೋಲೆಯನ್ನು ಪಾಲಿಸಬೇಕು ಇಲ್ಲವೇ ಕಟ್ಟುನಿಟ್ಟಿನ ಕ್ರಮಕ್ಕೆ ಸಿದ್ದರಾಗಬೇಕು ಎಂದು ತಿಳಿಸಿರುವುದರಿಂದ ಹಾಗೂ ಸದರಿ ಸುತ್ತೋಲೆಯನ್ನು ಎಲ್ಲ ಠಾಣೆಗಳಿಗೆ ರವಾನಿಸಿರುವುದರಿಂದ ಈ ಪ್ರಕರಣ ಇತ್ಯರ್ಥಗೊಂಡಿದೆ.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap