ಚಿಕ್ಕನಾಯಕನಹಳ್ಳಿ
ಪಟ್ಟಣದ ತಾಲ್ಲೂಕು ಆಫೀಸಿನ ಆವರಣದಲ್ಲಿರುವ ಕಸಬಾ ನಾಡ ಕಚೇರಿಯಲ್ಲಿ ಕೊರೊನಾದ ಭಯವಿಲ್ಲದೆ, ದೈಹಿಕ ಅಂತರ ಕಾಪಾಡಿಕೊಳ್ಳದೆ ಗುಂಪು ಗುಂಪಾಗಿ ತಮಗೆ ಬೇಕಾದ ದಾಖಲೆಗಳನ್ನು ಪಡೆಯಲು ಜನತೆ ಮುಗಿ ಬೀಳುವುದು ನಿತ್ಯ ಕಾಣ ಸಿಗುವ ಚಿತ್ರಣ.
ಕೋವಿಡ್ 19 ನಿಯಮಗಳು ಕಡತದಲ್ಲಷ್ಟೇ, ಅನುಷ್ಠಾನಕ್ಕೆ ಇಲ್ಲ ಎನ್ನುವಂತಾಗಿರುವುದರಿಂದ ರೋಗ ಹಬ್ಬುತ್ತಿರುವುದು ಹೆಚ್ಚಾಗಿದೆ.
ಈ ಸಮಯದಲ್ಲಿ ನಿಯಮಗಳನ್ನು ಅನುಷ್ಠಾನಕ್ಕೆ ತರುವ ಅನುಷ್ಠಾನಾಧಿಕಾರಿಗಳು ಈ ದೃಶ್ಯವನ್ನು ನೋಡಿಯೂ ನೋಡದವರಂತೆ ಹೋಗುವುದು ಸಾಮಾನ್ಯವಾಗಿ ಬಿಟ್ಟಿದೆ. ಇಡೀ ತಾಲ್ಲೂಕಿನ ಜನಕ್ಕೆ ಕಾನೂನು ಕಟ್ಟಳೆಗಳನ್ನು ಹೇಳುವ ಸ್ಥಳದಲ್ಲೇ ಅದರ ಪಾಲನೆ ಆಗದಿರುವುದಕ್ಕೆ ಸಾರ್ವಜನಿಕರು ಆಕ್ಷೇಪಿಸುತ್ತಿದ್ದಾರೆ.
ತಾಲ್ಲೂಕಿಗೆ ಈಗಾಗಲೇ ಸೋಂಕು ಹರಡಿದೆ. ಎಲ್ಲೆಡೆ ಸಾಮಾಜಿಕ ಅಂತರ ಕಾಪಾಡಲು ಅಧಿಕಾರಿಗಳು ಮುಂದಾಗಬೇಕು ಎಂಬ ಒತ್ತಾಯ ಜನರಿಂದಲೂ ಕೇಳಿ ಬರುತ್ತಿದೆ.ನನಗೆ ಸಾಮಾಜಿಕ ಅಂತರ ಕಾಪಾಡಲು ಇಷ್ಟ. ಆದರೆ ಹಾಗೆ ನಿಂತರೆ ಬೇರೆಯವರು ನನ್ನ ಮುಂದೆ ಬರುತ್ತಾರೆ. ಅನಿವಾರ್ಯವಾಗಿ ನಾನು ಅವರೊಂದಿಗೆ ಗುಂಪುಗೂಡಿದ್ದೇನೆ ಎಂದು ರೈತರೊಬ್ಬರು ಹೇಳಿದರು.ನಮ್ಮ ತಾಲ್ಲೂಕಿನಲ್ಲಿ ಕೋವಿಡ್ ಹರಡದಂತೆ ತಡೆಯುವ ಜವಾಬ್ದಾರಿ ಜನರ ಮೇಲೂ ಇದೆ. ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು.