ತುಮಕೂರು
ತುಮಕೂರು ನಗರದಲ್ಲಿ ಏರಿಕೆಯಾಗುತ್ತಿರುವ ಕೊರೊನಾ ಸೋಂಕು ಹಾಗೂ ಸಾವಿನ ಪ್ರಕರಣಗಳಿಂದ ಜನ ಭಯಭೀತರಾಗಿದ್ದಾರೆ. ಸಾಲದಕ್ಕೆ, ಕೊರೊನಾ ಸೋಂಕಿತರ ಆರೋಗ್ಯ ಸೇವೆಯೂ ದುಬಾರಿಯಾಗುತ್ತಿದೆ. ಖಾಸಗಿ ಆಸ್ಪತ್ರೆಗಳು ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಲಕ್ಷಾಂತರ ರೂ. ಬಿಲ್ ಮಾಡುತ್ತಿರುವುದರಿಂದ ಜನ ದಿಕ್ಕು ತೋಚದಂತಾಗಿ ಕಂಗಾಲಾಗುತ್ತಿದ್ದಾರೆ. ಇಂತಹ ಸಮಯದಲ್ಲಿ ಸರ್ಕಾರ, ಇಲಾಖೆಗಳು ಜನರ ನೆರವಿಗೆ ಬರಬೇಕು. ಜನರ ಆರೋಗ್ಯ ಸೇವೆ ಸುಲಭವಾಗುವಂತೆ ಮಾಡಬೇಕು. ಆದರೆ, ಅಂತಹ ಪರಿಸ್ಥಿತಿ ಇಲ್ಲ.
ಇದರ ನಡುವೆ ತುಮಕೂರು ನಗರ ಪಾಲಿಕೆ ವಾರ್ಡ್‍ವಾರು ಕೋವಿಡ್ ವಾರ್ಡ್ ಸಮಿತಿ ರಚನೆ ಮಾಡಿದೆ. ಕೊರೊನಾ ನಿಯಂತ್ರಣದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ಸೋಂಕಿತರ ಚಿಕಿತ್ಸೆಗೆ ಸೂಕ್ತ ಮಾರ್ಗದರ್ಶನ ನೀಡಿ ನೆರವಾಗಲು ಈ ಸಮಿತಿಗಳು ಕಾಳಜಿಯಿಂದ ಕೆಲಸ ಮಾಡಬೇಕು. ತಮ್ಮ ವಾರ್ಡ್ ವ್ಯಾಪ್ತಿಯಲ್ಲಾದರೂ ಕೊರೊನಾಗೆ ಕಡಿವಾಣ ಹಾಕುವ ಪ್ರಯತ್ನ ಮಾಡಬೇಕು ಎಂಬುದು ಈ ಸಮಿತಿಗಳ ಆಶಯವಾಗಿದೆ.
ಆಯಾ ನಗರ ಪಾಲಿಕೆ ಸದಸ್ಯರ ನೇತೃತ್ವದಲ್ಲಿ ಪಾಲಿಕೆಯ ಹೆಲ್ತ್ ಇನ್ಸ್‍ಪೆಕ್ಟರ್, ಬಿಲ್ ಕಲೆಕ್ಟರ್, ಸ್ಥಾನಿಕ ವೈದ್ಯಾಧಿಕಾರಿ, ಸ್ಥಳೀಯ ಪೊಲೀಸರು, ಹಿರಿಯ ನಾಗರೀಕರು ಸೇರಿದಂತೆ 8ರಿಂದ 10 ಸದಸ್ಯರು ಒಳಗೊಂಡಂತೆ ವಾರ್ಡ್ ಸಮಿತಿ ರಚನೆಯಾಗಿದೆ.ಸಮಿತಿಗಳು ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಹರಡದಂತೆ ತಡೆಯಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಪ್ರಚಾರ ಮಾಡಿ ಜನರಲ್ಲಿ ಅರಿವು ಮೂಡಿಸಬೇಕು. ಸೋಂಕಿತ ಪ್ರಕರಣ ವರದಿಯಾದರೆ, ಅವರ ಆರೋಗ್ಯ ಸೇವೆ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ, ಅವರಿಗೆ ಅಗತ್ಯ ಮಾರ್ಗದರ್ಶನ ನೀಡಿ, ಚಿಕಿತ್ಸೆಗೆ ಅನುವು ಮಾಡಿಕೊಡಬೇಕು.
ಸೋಂಕಿತರು ಮನೆಯಲ್ಲೇ ಕ್ವಾರಂಟೈನ್ ಆದರೆ ಅವರ ಕುಟುಂಬದವರಿಗೆ ನಗರ ಪಾಲಿಕೆಯಿಂದ ನೀರು, ಸ್ವಚ್ಚತೆ ಸೇವೆ ನೀಡಬೇಕು ಹಾಗೂ ಅವರಿಗೆ ಅಗತ್ಯ ಆಹಾರ ಪದಾರ್ಥ ಪೂರೈಸಲು ಅವರು ಇಚ್ಚಿಸುವ ಅಂಗಡಿಗಳ ಸಂಪರ್ಕ ಒದಗಿಸಿ, ಮನೆ ಬಾಗಿಲಿಗೆ ಸಾಮಗ್ರಿ ಸರಬರಾಜು ಮಾಡಿಸುವ ವ್ಯವಸ್ಥೆಯನ್ನು ಕೋವಿಡ್ ವಾರ್ಡ್ ಸಮಿತಿ ಮಾಡಬೇಕು.
ಇದಲ್ಲದೆ, ನಾಗರೀಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಮುಂತಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಗಮನಹರಿಸಿ, ತಿಳುವಳಿಕೆ ನೀಡಬೇಕು. ಸಮಿತಿಗಳು ಇಷ್ಟೆಲ್ಲಾ ಕಾರ್ಯ ಮಾಡಬೇಕು, ಇಲ್ಲವಾದರೆ ನಗರದಲ್ಲಿ ಕೊರೊನಾ ನಿಯಂತ್ರಣ ಸಾಧ್ಯವಿಲ್ಲ ಎಂದು ಮಂಗಳವಾರ ನಡೆದ ಪಾಲಿಕೆಯ ತುರ್ತು ಸಭೆಯಲ್ಲಿ ಸದಸ್ಯರೇ ತೀರ್ಮಾನ ಮಾಡಿ, ಕೋವಿಡ್ ವಾರ್ಡ್ ಸಮಿತಿ ರಚನೆಗೆ ನಿರ್ಣಯ ಮಾಡಿದರು.
ಬುಧವಾರ 26ನೇ ವಾರ್ಡಿನಲ್ಲಿ ಸದಸ್ಯ ಮಲ್ಲಿಕಾರ್ಜುನ್ ನೇತೃತ್ವದ ಸಮಿತಿಗೆ ಮೇಯರ್ ಫರೀದಾ ಬೇಗಂ ಅವರು ಕೋವಿಡ್ ವಾರ್ಡ್ ಸಮಿತಿ ಚಟುವಟಿಕೆಗೆ ಅಧಿಕೃತ ಚಾಲನೆ ನೀಡಿದರು.ಜನರಲ್ಲಿ ಕೊರೊನಾ ಬಗ್ಗೆ ಅರಿವಿನ ಕೊರತೆ ಹಾಗೂ ನಿರ್ಲಕ್ಷತೆಯಿಂದಾಗಿ ಸೋಂಕು ವ್ಯಾಪಕಗೊಳ್ಳಲು ಕಾರಣವಾಗಿದೆ. ವಾರ್ಡ್ ಸಮಿತಿಗಳು ಮೊದಲು ಜನರಲ್ಲಿ ತಿಳುವಳಿಕೆ ಮೂಡಿಸಿ, ಜಾಗೃತರನ್ನಾಗಿ ಮಾಡಿದರೆ ಅರ್ಧ ಸಮಸ್ಯೆ ಬಗೆಹರಿದಂತಾಗುತ್ತದೆ ಎಂದು ಮೇಯರ್ ಹೇಳಿದರು.
ಪಾಲಿಕೆ ಸದಸ್ಯ ಮಲ್ಲಿಕಾರ್ಜುನ್ ಮಾತನಾಡಿ, ಸೋಂಕಿತರು ಪ್ರತ್ಯೇಕವಾಗಿರದೆ ಜನರ ಜೊತೆ ಬೆರೆಯುವುದು ಹೆಚ್ಚಾಗಿದೆ. ಹೀಗಾಗಿ, ಸೋಂಕಿತರು ಯಾರು ಎಂಬುದು ಜನರಿಗೆ ಗೊತ್ತಾಗಬೇಕಾದ ಅಗತ್ಯವಿದೆ. ಇದಕ್ಕಾಗಿ, ಸೋಂಕಿತರ ಮನೆ ಮುಂದೆ ನಗರ ಪಾಲಿಕೆ ರೆಡ್ ಅಲರ್ಟ್ ಬೋರ್ಡ್ ಹಾಕಬೇಕು. ಇದರಿಂದ ಸೋಂಕಿತರೂ ಜಾಗೃತರಾಗುತ್ತಾರೆ, ಇತರರೂ ಅವರ ಬಗ್ಗೆ ಎಚ್ಚರವಹಿಸಿ, ಅವರಿಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಆದರೆ, ಸರ್ಕಾರದ ನಿಯಮದಂತೆ, ಸೋಂಕಿತರ ಮನೆಯನ್ನು ಈಗ ಸೀಲ್‍ಡೌನ್ ಮಾಡುವಂತಿಲ್ಲ, ಸೋಂಕಿತರಿದ್ದಾರೆ ಎಂದು ಸೂಚಿಸುವ ಯಾವುದೇ ಫಲಕ ಹಾಕುವಂತಿಲ್ಲ. ಆದರೂ, ಸಾರ್ವಜನಿಕರ ಹಿತದೃಷ್ಟಿ ಹಾಗೂ ಕೊರೊನಾ ನಿಯಂತ್ರಣ ಕಾರಣಕ್ಕಾಗಿ ನಗರದಲ್ಲಿ ಸೋಂಕಿತರ ಮನೆ ಮುಂದೆ ರೆಡ್ ಅಲರ್ಟ್ ಬೋರ್ಡ್ ಹಾಕಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮೇಯರ್ ಹೇಳಿದರು.
ನಗರದ ಖಾಸಗಿ ಆಸ್ಪತ್ರೆಗಳು ಕೊರೊನಾ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಸುಲಿಗೆ ಮಾಡುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು, ಜಿಲ್ಲಾಡಳಿತ, ಸರ್ಕಾರದ ಗಮನಕ್ಕೆ ತಂದು ಸೂಕ್ತ ಕ್ರಮ ತೆಗೆದುಕೊಳ್ಳಬೇಕು, ಮೇಯರ್ ಹಾಗೂ ಆಯುಕ್ತರು ಆಸ್ಪತ್ರೆಗಳಿಗೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ಪರಿಶೀಲಿಸಬೇಕು ಎಂದು ಮಲ್ಲಿಕಾರ್ಜುನ್ ವಿನಂತಿಸಿ, ಪ್ರತಿ ವಾರ್ಡ್‍ನಲ್ಲಿ ಒಂದೊಂದು ಫೀವರ್ ಕ್ಲಿನಿಕ್ ತೆರೆದು, ಆರೋಗ್ಯ ಪರೀಕ್ಷೆಗೆ ಅನುವು ಮಾಡಬೇಕು ಎಂದು ಕೋರಿದರು.
ಖಾಸಗಿ ಆಸ್ಪತ್ರೆಗಳು ಹಣ ಸುಲಿಗೆ ಮಾಡುತ್ತಿರುವ ಬಗ್ಗೆ ದೂರುಗಳು ತಮ್ಮ ಗಮನದಲ್ಲೂ ಇವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇಲ್ಲ, ಹಾಗಾಗಿ ಜನ ಖಾಸಗಿ ಆಸ್ಪತ್ರೆಗೆ ಹೋಗುವ ಪರಿಸ್ಥಿತಿ ಬಂದಿದೆ, ಪ್ರತಿ ಪ್ರಕರಣದಲ್ಲೂ ಆಸ್ಪತ್ರೆಗಳು ಲಕ್ಷಗಟ್ಟಲೆ ಬಿಲ್ ಮಾಡುತ್ತವೆ, ಬಡವರು ಅಷ್ಟು ಹಣವನ್ನು ಹೇಗೆ ಹೊಂದಿಸುತ್ತಾರೆ? ಕೊರೊನಾ ಪ್ರಕರಣಗಳಲ್ಲಿ ಬಡವರಿಗೆ ನೆರವಾಗುವಂತಹ ಆರೋಗ್ಯ ಸೇವೆಯನ್ನು ಜಿಲ್ಲಾಡಳಿತ ಒದಗಿಸಬೇಕು ಎಂದು ಮೇಯರ್ ಫರೀದಾ ಬೇಗಂ ಹೇಳಿದರು.
ತಾವು ಜಿಲ್ಲಾ ಸಚಿವರು ಹಾಗೂ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ವಸ್ತುಸ್ಥಿತಿ ಮನವರಿಕೆ ಮಾಡಿಸಿ, ರೋಗ ಲಕ್ಷಣಗಳಿಲ್ಲದವರಿಗಾದರೂ ನಗರದ ಹಾಸ್ಟೆಲ್‍ಗಳಲ್ಲಿ ಕ್ವಾರಂಟೈನ್ ಮಾಡಲು ಅವಕಾಶ ಮಾಡಿಕೊಡಬೇಕು. ಅಲ್ಲಿಗೆ ವೈದ್ಯರು ನಿಯಮಿತವಾಗಿ ಭೇಟಿ ನೀಡಿ, ತಪಾಸಣೆ ಮಾಡಬೇಕು ಹಾಗೂ ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಮನವಿ ಮಾಡುವುದಾಗಿ ಹೇಳಿದರು. ಅಲ್ಲದೆ ಖಾಸಗಿ ಆಸ್ಪತ್ರೆಗಳ ಹಣ ಸುಲಿಗೆಗೆ ನಿಯಂತ್ರಣಕ್ಕೆ ಸರ್ಕಾರ ಕಟ್ಟುನಿಟ್ಟಿನ ನಿಯಮ ರೂಪಿಸಬೇಕು ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ