60 ಕೋಟಿ ರೂ. ವೆಚ್ಚದಲ್ಲಿ ಸಿಆರ್‍ಸಿ ಕಟ್ಟಡ

ದಾವಣಗೆರೆ :

    ದಿವ್ಯಾಂಗ ಮತ್ತು ವಿಕಲಚೇತನರ ಪುನರ್ವಸತಿಗಾಗಿ ಆಧುನಿಕ ಮತ್ತು ಸಂಪೂರ್ಣ ವ್ಯವಸ್ಥೆಯನ್ನು ಹೊಂದಿರುವ ಸಂಯೋಜಿತ ಪ್ರಾದೇಶಿಕ ಕೇಂದ್ರ (ಸಿಆರ್‍ಸಿ) ಕಟ್ಟಡ ಹತ್ತು ಎಕರೆ ಜಮೀನಿನಲ್ಲಿ 60 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ತಿಳಿಸಿದರು.

     ನಗರದ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಶನಿವಾರ ದಿವ್ಯಾಂಗ ವ್ಯಕ್ತಿಗಳ ಕೌಶಲ್ಯಾಭಿವೃದ್ಧಿ, ಪುನರ್ವಸತಿ ಮತ್ತು ಸಬಲೀಕರಣಗಳ ಸಂಯುಕ್ತ ಪ್ರಾದೇಶಿಕ ಕೇಂದ್ರದ ವತಿಯಿಂದ ಏರ್ಪಡಿಸಿದ್ದ ವಿಶೇಷ ಚೇತನರಿಗೆ ಅಡಿಪ್ ಯೋಜನೆಯಲ್ಲಿ ಶ್ರವಣ ಯಂತ್ರ ಮತ್ತು ಟಿ.ಎಲ್.ಎಂ. ಕಿಟ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಸಿ.ಆರ್.ಸಿ ಕಟ್ಟಡ ನಿರ್ಮಾಣಕ್ಕಾಗಿ ಜಿಲ್ಲಾಡಳಿತ ತಾಲೂಕಿನ ಕೊಗ್ಗನೂರಿನಲ್ಲಿ 8 ಎಕರೆ ಮತ್ತು ವಡ್ಡನಹಳ್ಳಿಯಲ್ಲಿ 2 ಎಕರೆ ಸೇರಿ ಒಟ್ಟು 10 ಎಕರೆ ಜಮೀನು ಮಂಜೂರು ಮಾಡಿದ್ದು, ಇಲ್ಲಿ ಕೇಂದ್ರ ಸರ್ಕಾರದ 60 ಕೋಟಿ ರೂ. ವೆಚ್ಚದಲ್ಲಿ ದಿವ್ಯಾಂಗ ಮತ್ತು ವಿಕಲಚೇತನರ ಪುನರ್ವಸತಿಗಾಗಿ ಆಧುನಿಕ ಮತ್ತು ಸಂಪೂರ್ಣ ವ್ಯವಸ್ಥೆಯನ್ನು ಹೊಂದಿರುವ ಸುಸಜ್ಜಿತ ಸಂಯೋಜಿತ ಪ್ರಾದೇಶಿಕ ಕೇಂದ್ರ ನಿರ್ಮಾಣವಾಗಲಿದೆ ಎಂದು ಹೇಳಿದರು.

   ಗೋವಾ ಮತ್ತು ಕರ್ನಾಟಕದಲ್ಲಿನ ದಿವ್ಯಾಂಗ ಮಕ್ಕಳಿಗಾಗಿ ಈ ಸಿ.ಆರ್.ಸಿ ಕಟ್ಟಡವನ್ನು ಸ್ಥಾಪಿಸಲಾಗುತ್ತಿದೆ. ದಿವ್ಯಾಂಗ ಮಕ್ಕಳಿಗಾಗಿ ವಿಶೇಷ ಶಾಲೆ, ಆಸ್ಪತ್ರೆ, ಕಾಲೇಜು ಮತ್ತು ಉದ್ಯೋಗಾಧಾರಿತ ತರಬೇತಿ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಸಿ.ಆರ್.ಸಿ ಕಟ್ಟಡದಲ್ಲಿ ನೀಡಲಾಗುವುದು. ಜಿಲ್ಲಾಧಿಕಾರಿಗಳು ದಿವ್ಯಾಂಗ ವ್ಯಕ್ತಿಗಳ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದು, ಆದಷ್ಟು ಶೀಘ್ರವಾಗಿ ಸಿ.ಆರ್.ಸಿ ಕಟ್ಟಡ ಲೋಕಾರ್ಪಣೆ ಗೊಳ್ಳಲಿದೆ ಎಂದು ಹೇಳಿದರು.

   ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಜಿ.ಎಸ್.ಶಶಿಧರ್, ವಿಕಲಚೇತನರ ಶ್ರೇಯೋಭಿವೃದ್ದಿಗಾಗಿ ಕೌಶಲ್ಯ ಅಭಿವೃದ್ದಿ ತರಬೇತಿಗಳು, ಸ್ವಂತ ಉದ್ಯೋಗದ ತರಬೇತಿ, ಸಾಧನಾ ಸಲಕರಣೆಗಳು ಮತ್ತು ಸರ್ಕಾರಿ ಸೌಲಭ್ಯಗಳನ್ನು ಅವರಿಗೆ ತಲುಪಿಸುವುದು, ಮತ್ತು ಅವರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ನಮ್ಮ ಸಿಆರ್‍ಪಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ.

    ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಾಕ್ ಮತ್ತು ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಜಿಲ್ಲೆಯಲ್ಲಿರುವ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ಕೊಡಿಸುವಂತೆ ಚರ್ಚಿಸಿಲಾಗಿತ್ತು. ಅದರಂತೆ ಈ ವರ್ಷದಲ್ಲಿ ಸುಮಾರು 50 ಜನರಿಗೆ ಉದ್ಯೋಗ ಒದಗಿಸುವ ಗುರಿ ಹೊಂದಲಾಗಿದ್ದು, ಅರ್ಹ ವಿಕಲಚೇತನರು ಡಿ.20 ರೊಳಗೆ ಅರ್ಜಿ ಸಲ್ಲಿಸಬೇಕೆಂದು ಸಲಹೆ ನೀಡಿದರು.

     ಅಂಗವಿಕಲರ ಅನುಕೂಲಕ್ಕಾಗಿ ನಗರದ ಕಾವೇರಮ್ಮ ಶಾಲೆಯಲ್ಲಿ ಕೃತಕ ಅಂಗಾಂಗ ಜೋಡಣೆ ಕೇಂದ್ರವನ್ನು ಆರಂಭಿಸಲಾಗಿದ್ದು, ಕೆಲವೇ ದಿನಗಳಲ್ಲಿ ಆ ಕೇಂದ್ರ ಕಾರ್ಯಾರಂಭ ಮಾಡಲಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ 115 ಶ್ರವಣ ದೋಷವಿರುವ ವ್ಯಕ್ತಿಗಳಿಗೆ ಶ್ರವಣಯಂತ್ರ, 22 ಬೌದ್ಧಿಕ ನ್ಯೂನ್ಯತೆ ಇರುವ ವ್ಯಕ್ತಿಗಳಿಗೆ ಟಿ.ಎಲ್.ಎಮ್. ಕಿಟ್ ವಿತರಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮಹಂತೇಶ್ ಬೀಳಗಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವೀರೇಶ್ ಹನಗವಾಡಿ, ಸಿ.ಆರ್‍ಸಿ ಕೇಂದ್ರದ ನಿರ್ದೇಶಕ ಜ್ಞಾನವೇಲ್ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link