ಸ್ವಚ್ಛತೆ ಜತೆಗೆ ನಿರ್ಭೀತ ವಾತವರಣವೂ ಸೃಷ್ಟಿಸಿ

ದಾವಣಗೆರೆ

    ನಗರದ ಹಲವೆಡೆ ಸ್ವಚ್ಛತೆ ಇಲ್ಲವಾಗಿದೆ. ಅಲ್ಲದೇ, ಖಾಲಿ ನಿವೇಶನಗಳಲ್ಲಿ ಜಾಲಿ ಗಿಡಗಳು ಬೆಳೆದಿರುವುದರಿಂದ ಸಾರ್ವಜನಿಕರು ಭಯದ ವಾತಾವರಣದಲ್ಲಿ ಓಡಾಡಬೇಕಾದ ಪರಿಸ್ಥಿತಿ ಇದೆ. ಆದ್ದರಿಂದ ಸ್ವಚ್ಛತೆಗೆ ಆದ್ಯತೆ ನೀಡುವುದರ ಜೊತೆಗೆ ಖಾಲಿ ನಿವೇಶನಗಲ್ಲಿ ಬೆಳೆದಿರುವ ಜಾಲಿ ಗಿಡ ಸೇರಿದಂತೆ ಇತರೆ ಗಿಡಗಂಟೆಗಳನ್ನು ತೆಗಿಸಿ ನಿರ್ಭೀತ ವಾತಾವರಣ ಸೃಷ್ಟಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿಗೆ ಸೂಚನೆ ನೀಡಿದರು.

     ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಇಲ್ಲಿನ ದೇವರಾಜ್ ಅರಸ್ ಬಡಾವಣೆಯ ನಿವಾಸಿಯೊಬ್ಬರು, ಕೋರ್ಟ್‍ನ ಹಿಂಭಾಗ ಮತ್ತು ಸುತ್ತ ಮುತ್ತ ಪ್ರದೇಶಗಳಲ್ಲಿ ಸ್ವಚ್ಚತೆ ಇಲ್ಲವಾಗಿದೆ. ಅಲ್ಲದೇ, ಇಲ್ಲಿರುವ ಖಾಲಿ ನಿವೇಶನಗಳಲ್ಲಿ ಜಾಲಿಗಿಡ ಸೇರಿದಂತೆ ಇತರೆ ಗಿಡಗಳು ಬೆಳೆದಿವೆ. ಆದ್ದರಿಂದ ಇಲ್ಲಿಯ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಮತ್ತು ರಿಂಗ್ ರಸ್ತೆ ಹಾಗೂ ಕೋರ್ಟ್ ಹಿಂಭಾಗದ ರಸ್ತೆಗಳಲ್ಲಿ ಓಡಾಡಲು ಸಾರ್ವಜನಿಕರಿಗೆ ಭಯದ ವಾತವರಣವಿದೆ ಎಂದು ಅಳಲು ತೋಡಿಕೊಂಡರು.

     ಇದಕ್ಕೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ನಗರದ ಹಲವಾರು ಸ್ಥಳಗಳಲ್ಲಿ ಇದೇ ರೀತಿಯ ಸಮಸ್ಯೆಗಳಿದ್ದು, ಅದರ ಬಗ್ಗೆ ಗಮನ ಹರಿಸಿ ಸ್ವಚ್ಚತೆಗೆ ಆದ್ಯತೆ ನೀಡಿ, ನಗರದಲ್ಲಿ ನಿರ್ಭೀತ ವಾತಾವರಣ ಸೃಷ್ಟಿಸಬೇಕೆಂದು ಆಯುಕ್ತರಿಗೆ ಸೂಚಿಸಿದರು.ಇಲ್ಲಿನ ಎಸ್‍ಪಿಎಸ್ ನಗರದ ನಿವಾಸಿ ಮಂಜುಳಾ ಎಸ್ ಹಿರೇಮಠ್ ಅರ್ಜಿ ಸಲ್ಲಿಸಿ, ತಾವು ಬಿ.ಎ ಪದವೀಧರಳಾಗಿದ್ದು, ಅಂಗವಿಕಲರ ಅಧಿನಿಯಮದಡಿ ಅಂಗವಿಕಲರ ಸಹಾಯವಾಣಿಯ ಸಲಹೆಗಾರ ಹುದ್ದೆಗೆ ಅರ್ಜಿ ಸಲ್ಲಿಸಿದ್ದು, ಅರ್ಜಿಯನ್ನು ತಿರಸ್ಕರಿಸಲಾಗಿದೆ. ಆದ್ದರಿಂದ ಪರಿಶೀಲಿಸಿ ನನಗೆ ಉದ್ಯೋಗ ಕೊಡಿಸಬೇಕೆಂದು ಮನವಿ ಮಾಡಿದರು.

      ಇದಕ್ಕೆ ಪ್ರತಿಕ್ರಯಿಸಿದ ಡಿಸಿ, ಈ ಹುದ್ದೆಯು ವಿಕಲಚೇತನದಡಿ ಇದ್ದು, ಬೇರೆಯವರು ಕಾರ್ಯ ನಿರ್ವಹಿಸುತ್ತಿದ್ದರೆ ಅವರನ್ನು ತೆಗೆದು ಹಾಕಿ ಇವರಿಗೆ ಉದ್ಯೋಗ ನೀಡಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.ದೇವರಾಜ್ ಅರಸ್ ಬಡಾವಣೆಯ ನಿವಾಸಿ ಸುನಂದ ಅರ್ಜಿ ಸಲ್ಲಿಸಿ, ಲಕ್ಷೀ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಹಿರಿಯ ನಾಗರಿಕ ಠೇವಣಿ ಯೋಜನೆಯಡಿ ಒಂದು ಲಕ್ಷ ಹಣವನ್ನು ಠೇವಣಿ ಇಡಲಾಗಿತ್ತು. ನಮ್ಮ ಠೇವಣಿ ಅವಧಿ ಮುಗಿದು, ಬಾಂಡ್ ಮೆಚ್ಯುರಿಟಿ ಆಗಿದ್ದರೂ ನಮಗೆ ಹಣ ನೀಡದೇ ಸತಾಯಿಸುತ್ತಿದ್ದಾರೆ. ಆದ್ದರಿಂದ ನಮಗೆ ನ್ಯಾಯ ಕೊಡಿಸಬೇಕೆಂದು ಮನವಿ ಮಾಡಿದರು.

      ಈ ಬಗ್ಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಸೊಸೈಟಿಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿದಾಗ ಈ ರೀತಿಯ ಒಟ್ಟು 1200 ಘಟನೆಗಳು ನಡೆದಿವೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗೆ ನೋಟಿಸ್ ನೀಡಲಾಗಿದ್ದು, ಆ ವ್ಯಕ್ತಿ 15 ದಿನಗಳಿಂದ ಕಚೇರಿಗೆ ಬಂದಿಲ್ಲ. ಇದಕ್ಕೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

     ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜಿನ್ ಇಂಗಳೇಶ್ವರ ಅರ್ಜಿ ಸಲ್ಲಿಸಿ, ಪುಷ್ಪ ಮಹಾಲಿಂಗಪ್ಪ ಶಾಲೆಯವರ ಜಾಗ ಎಷ್ಟಿದೆ ಎಂಬುದು ತಿಳಿದಿಲ್ಲ. ಶಾಲೆಯ ಸುತ್ತ ಮುತ್ತ ದೊಡ್ಡ ಬಿಲ್ಡಂಗ್ ಅನುಮತಿಯಿಲ್ಲದೇ ನಿರ್ಮಾಣವಾಗುತ್ತಿವೆ. ಇದರ ಬಗ್ಗೆ ತನಿಖೆ ನಡೆಸಸಬೇಕೆಂದು ಒತ್ತಾಯಿಸಿದರು.

    ವಾಕ್ ಮತ್ತು ಶ್ರವಣ ದೋಷವುಳ್ಳ ಅನೇಕ ಜನ ವಿಕಲಚೇತನರು ನಮಗೆ ಸ್ವಯಂ ಉದ್ಯೋಗ ಯೋಜನೆಯಡಿ ಸಾಲ ಸೌಲಭ್ಯಗಳನ್ನು ಒದಗಿಸಿಕೊಡಿ ಎಂದು ಮನವಿ ಮಾಡಿದರು.ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ನಿಮಗೆ ಅವಶ್ಯವಿರುವ ಸಹಾಯ ಮಾಡಲು ನಾನು ಸಿದ್ಧನಿದ್ದೇನೆ. ನಿಮ್ಮ ಅನುಕೂಲಕ್ಕಾಗಿ ಸಂಬಂಧಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

    ನಗರದ ಎಂ.ಬಿ ಕೇರಿಯ ಲಕ್ಕಮ್ಮ ಎಂಬುವವರು ತಾವು ಕಸಬಾ ಹೋಬಳಿಯ 2.12 ಗುಂಟೆ ಜಮೀನು ಇದ್ದು, ಜಮೀನು ಪೋಡಿಗಾಗಿ ಈಗಾಗಲೇ ಅರ್ಜಿ ಸಲ್ಲಸಿ ಹಲವು ವರ್ಷ ಕಳೆದರೂ ತಮ್ಮ ಹೆಸರಿಗೆ ಇನ್ನು ಪೋಡಿಯಾಗಿರುವುದಿಲ್ಲ ಎಂದು ಮನವಿ ಸಲ್ಲಿಸಿ, ಪೋಡಿ ಮಾಡಿಸಿಕೋಡಲು ಮನವಿ ಸಲ್ಲಿಸಿದರು.

     ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಜಿಲ್ಲಾ ಪಂಚಾಯತ್‍ನ ಉಪ ಕಾರ್ಯದರ್ಶಿಗಳಿಗೆ ಈ ಸಮಸ್ಯೆಯ ಬಗ್ಗೆ ಪತ್ರ ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.ಕೊನೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಲ್ಲಾ ಇಲಾಖೆಯವರು ನಿಮ್ಮ ಕಚೇರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಅಲ್ಲೇ ಬಗೆಹರಿಸಿದರೆ, ಜನರು ಇಲ್ಲಿ ಬರಲು ಅವಕಾಶ ವಿರುವುದಿಲ್ಲ. ಇಲ್ಲಿರುವ ಎಲ್ಲಾ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳಬೇಕು.

     ಕಾನೂನುನ್ನು ಹೊರತು ಪಡಿಸಿ ಸಾರ್ವಜನಿಕರ ಕಾಳಜಿ ವಹಿಸಿ ಕೆಲಸ ಮಾಡಬೇಕು. ಕಚೇರಿಗೆ ಆಗಮಿಸುವ ಸಾರ್ವಜನಿಕ ರೊಂದಿಗೆ ಅಧಿಕಾರಿಗಳು ನಡೆದುಕೊಳ್ಳುವ ರೀತಿಯಿಂದ ನಮ್ಮ ಕಚೇರಿಯ ವರ್ಚಸ್ಸುನ್ನು ಹೆಚ್ಚಿಸುತ್ತದೆ. ಆದ್ದರಿಂದ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಪ್ರೀತಿ ಮತ್ತು ಕಾಳಜಿಯಿಂದ ವರ್ತಿಸುವ ಗುಣ ಬೆಳೆಸಿಕೊಳ್ಳಿ. ಸಾರ್ವಜನಿಕರ ಮನವಿಯನ್ನು ಆಲಿಸಿಕೊಂಡು ಅವರ ಸಮಸ್ಯಗೆ ಪರಿಹಾರ ಒದಗಿಸುವ ಆಗಬೇಕೆಂದು ಸುಚಿಸಿದರು.

     ಕಾರ್ಯಕ್ರಮದಲ್ಲಿ ಜಿ.ಪಂ. ಉಪ ಕಾರ್ಯದರ್ಶಿ ಆನಂದಪ್ಪ, ಪ್ರಭಾರ ಅಪರ ಜಿಲ್ಲಾಧಿಕಾರಿ ನಜ್ಮಾ, ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಹೆಚ್ ವಿಜಯ್‍ಕುಮಾರ್ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link