ಚಿತ್ರದುರ್ಗ:
ಪಾಲಕರ ಪೋಷಣೆ ಸಂರಕ್ಷಣೆ, ಹಿರಿಯ ನಾಗರಿಕರ ರಕ್ಷಣೆ ಕಾಯ್ದೆ 2007 ಹಾಗೂ ಸರ್ಕಾರದಿಂದ ಹಿರಿಯ ನಾಗರಿಕರಿಗೆ ನೀಡುವ ಸೌಲಭ್ಯಗಳ ಕುರಿತು ಆಸ್ಪತ್ರೆ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ವ್ಯಾಪಕ ಪ್ರಚಾರ ನೀಡಿ ಸೌಲಭ್ಯಗಳ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿರಿಯ ನಾಗರಿಕರಿಗಾಗಿ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ವಾರ್ಡ್ ಸೌಲಭ್ಯ ನೀಡಲಾಗಿದೆ. ಹಿರಿಯ ನಾಗರಿಕರ ಸಹಾಯವಾಣಿ 1090, ಆರೋಗ್ಯ ಇಲಾಖೆಯಲ್ಲಿನ ಸೇವೆಗಳು, ಸಾರಿಗೆ ಇಲಾಖೆಯಲ್ಲಿನ ಸೇವೆಗಳು, ರೈಲ್ವೆ ಇಲಾಖೆಯಲ್ಲಿನ ಸೇವೆಗಳ ವಿವರಗಳನ್ನು ಒಳಗೊಂಡ ಮಾಹಿತಿ ಫಲಕವನ್ನು ಜಿಲ್ಲೆಯಲ್ಲಿ ಜನನಿಬಿಡ ಪ್ರದೇಶಗಳಲ್ಲಿ ಹಾಕುವುದರ ಮೂಲಕ ಇವುಗಳ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗೆ ಸೂಚನೆ ನೀಡಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಮಾತನಾಡಿ, ಹಿರಿಯ ನಾಗರಿಕರು ಕೌಟುಂಬಿಕ ಸಮಸ್ಯೆ, ಆಸ್ತಿ ಸಮಸ್ಯೆ ಇದ್ದಲ್ಲಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಕ್ಕೆ ದೂರು ನೀಡಬಹುದು. ಕೌಟುಂಬಿಕ ಸಮಸ್ಯೆ ಇತ್ಯರ್ಥಕ್ಕಾಗಿ ನಿರ್ವಹಣೆ ನ್ಯಾಯ ಮಂಡಳಿ ರಚಿಸಲಾಗಿದೆ. ಇದರಡಿ ಜಿಲ್ಲೆಯಲ್ಲಿ 7 ಪ್ರಕರಣಗಳು ದಾಖಲಾಗಿದ್ದು, ವಿಚಾರಣೆ ಹಂತದಲ್ಲಿದೆ.
ಹಿಂದೆ ಹಿರಿಯ ನಾಗರಿಕರ ಗುರುತಿನ ಚೀಟಿಗಳನ್ನು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನೀಡಲಾಗುತ್ತಿತ್ತು. ಇದೀಗ ಆನ್‍ಲೈನ್ ವೆಬ್‍ಸೈಟ್‍ನಲ್ಲಿ ಅರ್ಜಿ ಸಲ್ಲಿಸಿ ಗುರುತಿನ ಚೀಟಿ ಪಡೆಯಬಹುದು. ರಾಷ್ಟ್ರೀಯ ದತ್ತುನಿಧಿ ಕಾಯ್ದೆ 1999 ರಡಿ 18 ವರ್ಷ ಮೇಲ್ಪಟ್ಟ ಆಟಿಸಂ, ಸೆರಬ್ರಲ್ ಪಾಲಿಸಿ, ಬುದ್ದಿಮಾಂದ್ಯತೆ ಮತ್ತು ಬಹುವಿಧ ಅಂಗವಿಕಲತೆ ಹೊಂದಿದವರಿಗೆ ಪೋಷಕತ್ವ ಪ್ರಮಾಣ ಪತ್ರ ಒದಗಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಅವರು ಮದ್ಯ ಮತ್ತು ಮಾದಕ ವ್ಯಸನ ಮುಕ್ತ ಕೇಂದ್ರದ ಬಗ್ಗೆ ಗ್ರಾಮಗಳಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಮದ್ಯ ಮತ್ತು ಮಾದಕ ವ್ಯಸನಕ್ಕೆ ತುತ್ತಾದವರಿಗೆ ಪುನಶ್ಚೇತನ ಕಾರ್ಯಗಳನ್ನು ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ಕಡಿಮೆ ಮಾಡಲು ಗಮನ ಹರಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿ, ಜಿಲ್ಲೆಯಲ್ಲಿ ಮದ್ಯ ಮತ್ತು ಮಾದಕ ವ್ಯಸನ ನಿವಾರಣಾ ಚಿಕಿತ್ಸಾ ಕೇಂದ್ರವನ್ನು ಡೇಟ್ ಚಾರಿಟೇಬಲ್ ಸೊಸೈಟಿ ನಿರ್ವಹಿಸುತ್ತಿದೆ. ಈ ಕುರಿತು ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ಆಸ್ಪತ್ರೆ ಮುಂಭಾಗ, ಪ್ರಮುಖ ವೃತ್ತಗಳಲ್ಲಿ ಮಾಹಿತಿ ಫಲಕ ಹಾಕಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 2019ರ ಏಪ್ರಿಲ್ ನಿಂದ ಜನವರಿ 2020 ರವರೆಗೆ 176 ಮಾದಕ ವ್ಯಸನಿಗಳು ದಾಖಲಾಗಿದ್ದರು. ಅಲ್ಲದೆ 309 ವ್ಯಸನಿಗಳಿಗೆ ಪುನಶ್ಚೇತನ ಕಾರ್ಯ ನೀಡಲಾಗಿದೆ ಎಂದು ಸಭೆಗೆ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ರವಿಶಂಕರ್ ರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಾನಾಯ್ಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ