ಚಿತ್ರದುರ್ಗ:
ಪ್ರಧಾನಮಂತ್ರಿ ಶ್ರಮಯೋಗಿ ಮಾನ್‍ಧನ್ ಯೋಜನೆ ಪ್ರಾಮುಖ್ಯತೆ ಬಗ್ಗೆ ಸಾರ್ವಜನಿಕರಿಗೆ ಜಾಹೀರಾತಗಳ ಮುಖಾಂತರ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಪ್ರಧಾನಮಂತ್ರಿ ಶ್ರಮಯೋಗಿ ಮಾನ್‍ಧನ್ ಯೋಜನೆ’ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಶ್ರಮಯೋಗಿ ಮಾನ್‍ಧನ್ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಜಾಹೀರಾತುಗಳ ಮೂಲಕ ನೀಡಿ, ಜೊತೆಗೆ ಬಸ್‍ಸ್ಟಾಪ್, ಎಲ್ಲಾ ಇಲಾಖೆಗಳ ನೋಟೀಸ್ ಬೋರ್ಡ್‍ಗಳಲ್ಲಿ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಬಿತ್ತಿ ಪತ್ರ ಹಚ್ಚಿ ಪ್ರಚಾರ ಮಾಡಬೇಕು. ಕಾರ್ಮಿಕರು ಈ ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಸಭೆಗೆ ತಿಳಿಸಿದರು.
ಕಾರ್ಮಿಕ ಅಧಿಕಾರಿ ವಿನೂತ ಅವರು ಎಲ್ಲಾ ಅಸಂಘಟಿತ ವಲಯ ಕಾರ್ಮಿಕರಿಗೆ ಪಿಂಚಣಿ ನೀಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ. ಗೃಹ ಆಧಾರಿತ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಬಿಸಿಯೂಟ ಸಿದ್ಧಪಡಿಸುವವರು, ಹಮಾಲಿಗಳು, ಇಟ್ಟಿಗೆ ಭಟ್ಟಿಕಾರ್ಮಿಕರು, ಚಮ್ಮಾರರು, ಚಿಂದಿ ಆಯುವವರು, ಮನೆ ಕೆಲಸದವರು, ಅಗಸರು, ರಿಕ್ಷಾ ಚಾಲಕರು, ಭೂ ರಹಿತ ಕಾರ್ಮಿಕರು, ಸ್ವಯಂ ಉದ್ಯೋಗಿಗಳು, ಕೃಷಿ ಕಾರ್ಮಿಕರು, ಕಟ್ಟಡ, ಬೀಡಿ, ಕೈಮಗ್ಗ, ಚರ್ಮೋದ್ಯಮ, ಧ್ವನಿ ಮತ್ತು ದೃಶ್ಯ ಕಾರ್ಮಿಕರಿಗೆ ವಯೋವೃದ್ಧ ಸಮಯದಲ್ಲಿ ಸಾಮಾಜಿಕ ಭದ್ರತೆ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಮಾಹಿತಿ ನೀಡಿದರು
ಜಿಲ್ಲೆಯ ಎಲ್ಲಾ ಕಾಮನ್ ಸರ್ವಿಸ್ ಸೆಂಟರ್‍ಗಳಲ್ಲಿ ನೋಂದಾಯಿಸಿಕೊಳ್ಳಬಹುದು. ಚಂದಾದಾರರು ಪಾವತಿಸುವ ವಂತಿಕೆಗೆ ಸಮಾನಾಂತರ ವಂತಿಕೆಯನ್ನು ಪಿಂಚಣಿ ಖಾತೆಗೆ ಪಾವತಿಸುತ್ತದೆ. ಫಲಾನುಭವಿಯ ವಯಸ್ಸು 60 ವರ್ಷ ಪೂರ್ಣಗೊಂಡ ನಂತರ ತಿಂಗಳಿಗೆ 3000 ರೂ. ಮಾಸಿಕ ಪಿಂಚಣಿ ಪಡೆಯಬಹುದು. ಫಲಾನುಭವಿಗಳು ನಿರಂತರವಾಗಿ ವಂತಿಕೆ ಪಾವತಿಸಿದ್ದು, ಅವರು 60 ವರ್ಷದ ಒಳಗಾಗಿ ಮೃತಪಟ್ಟಲ್ಲಿ ಅಥವಾ ಶಾಶ್ವತ ಅಂಗ ನ್ಯೂನತೆಯಿಂದ ವಂತಿಗೆ ಪಾವತಿಸಲು ಸಾಧ್ಯವಾಗದಿದ್ದಲ್ಲಿ, ಅವರ ಪತ್ನಿ ಅಥವಾ ಪತಿ ವಂತಿಕೆಯನ್ನು ಬಡ್ಡಿಯೊಂದಿಗೆ ಪಡೆಯಬಹುದು ಎಂದು ಹೇಳಿದರು
ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ 60 ವರ್ಷ ಪೂರ್ಣಗೊಂಡ ನಂತರ ಮಾಸಿಕ 3000 ರೂ. ಪಿಂಚಣಿ ಸೌಲಭ್ಯ ಒದಗಿಸುವ ಮೂಲಕ ಆರ್ಥಿಕ ಭದ್ರತೆ ನೀಡುವ ಉದ್ದೇಶದಿಂದ ‘ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ’ ಯೋಜನೆಯನ್ನು ಜಾರಿಗೆ ತರಲಾಗಿದೆ.
ಈ ಯೋಜನೆಯಡಿ ಇಲಾಖೆ ಒಟ್ಟು ವಾರ್ಷಿಕ 20,800 ನೋಂದಣಿ ಗುರಿ ಹೊಂದಿದ್ದು, ಇಲ್ಲಿಯವರೆಗೆ ಕೇವಲ 2500 ನೋಂದಣಿ ಮಾತ್ರ ಆಗಿದೆ. ಡಿಸೆಂಬರ್ 21 ರಂದು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿಯಿರುವ ಯೂನಿಯನ್ ಪಾರ್ಕ್‍ನಲ್ಲಿ ನೋಂದಣಿ ಕಾರ್ಯ ಆರಂಭಿಸಿದ್ದು, ಅಂದು ಬೆಳಿಗ್ಗೆ 10 ರಿಂದ 5.30 ರವರೆಗೆ ನೋಂದಣಿ ನಡೆಸಲಾಗುತ್ತದೆ. ಅಂದು ಕಾರ್ಮಿಕರು ಬಂದು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ ಕಚೇರಿಗಳು, ಎಲ್.ಐ.ಸಿ ಯ ಶಾಖಾ ಕಚೇರಿಗಳು, ಕಾರ್ಮಿಕ ಇಲಾಖೆಯ ಸಹಾಯವಾಣಿ – 155214 ಗೆ ಸಂಪರ್ಕಿಸಬಹುದು ಎಂದು ಸಭೆಗೆ ತಿಳಿಸಿದರು.ಸಭೆಯಲ್ಲಿ ನಗರಸಭೆ ಪೌರಾಯುಕ್ತ ಜೆ.ಟಿ ಹನುಮಂತರಾಜ್, ಲೀಡ್‍ಬ್ಯಾಂಕ್ ಮ್ಯಾನೇಜರ್ ನಿಂಗೇಗೌಡ, ಜಂಟಿ ಕೃಷಿ ನಿರ್ದೇಶಕ ಸದಾಶಿವ.ವಿ ಸೇರಿದಂತೆ ಕಾರ್ಮಿಕ ಸಂಘದ ಅಧ್ಯಕ್ಷರುಗಳು ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
