ಹೊನ್ನಾಳಿ:
ಫಾಲ್ಸ್ ಆರ್ಮಿ ವರ್ಮ್ ಮೆಕ್ಕೆಜೋಳದ ಬೆಳೆಯನ್ನು ಬಾಧಿಸುತ್ತಿದ್ದು, ರೈತರು ಸಾಮೂಹಿಕವಾಗಿ ಈ ಕೀಟ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಡಾ. ಶರಣಪ್ಪ ಮುದಗಲ್ ಹೇಳಿದರು.
ತಾಲೂಕಿನ ಬೇಲಿಮಲ್ಲೂರು ಗ್ರಾಮದ ಗಂಗಾಧರಪ್ಪ, ಹನುಮಂತಪ್ಪ ಮತ್ತು ಇತರ ರೈತರ ಮೆಕ್ಕೆಜೋಳದ ಜಮೀನುಗಳಿಗೆ ಶನಿವಾರ ಭೇಟಿ ನೀಡಿ ಬೆಳೆ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.
ಫಾಲ್ಸ್ ಆರ್ಮಿ ವರ್ಮ್(ಸ್ಪೋಡೋಪ್ಟರ್ ಪ್ರಜಿಫೆರ್ಡ್) ಎಂಬ ಈ ಕೀಟ ಮುಖ್ಯವಾಗಿ ಮೆಕ್ಕೆಜೋಳದ ಬೆಳೆಯ ಎಲೆ, ಕಾಂಡ, ತೆನೆಯ ಭಾಗವನ್ನು ಕೆರೆದು ತಿನ್ನುತ್ತದೆ. ಅಲ್ಲದೇ ಎಲೆಯ ಭಾಗದಲ್ಲಿ ಸರಣಿ ತೂತುಗಳನ್ನು ಕೊರೆಯುತ್ತದೆ. ಒಂದು ಚಿಟ್ಟೆಯು 1500ರಷ್ಟು ಮೊಟ್ಟೆಗಳನ್ನು ಇಟ್ಟು ಶೀಘ್ರ ಗತಿಯಲ್ಲಿ ಸಂತಾನ ವೃದ್ಧಿಸಿಕೊಳ್ಳುತ್ತದೆ. ತನ್ಮೂಲಕ ಬೆಳೆಗಳಿಗೆ ತೀವ್ರ ಹಾನಿ ಮಾಡುತ್ತದೆ. ಆದ್ದರಿಂದ, ರೈತರು ಕೀಟ ನಿಯಂತ್ರಣಕ್ಕೆ ಸಾಮೂಹಿಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿವರಿಸಿದರು.
ತಾಲೂಕಿನಲ್ಲಷ್ಟೇ ಅಲ್ಲದೆ ರಾಜ್ಯಾದ್ಯಂತ ತಡವಾಗಿ ಬಿತ್ತಿದ ಮೆಕ್ಕೆಜೋಳದ ಬೆಳೆಯಲ್ಲಿ ಫಾಲ್ಸ್ ಆರ್ಮಿ ವರ್ಮ್ ಎಂಬ ಈ ಕೀಟ ಕಂಡುಬಂದಿದ್ದು, ರೈತರು ನಿರ್ಲಕ್ಷ ಮಾಡದೇ ತಕ್ಷಣ ಸಸ್ಯ ಸಂರಕ್ಷಣ ಕ್ರಮಕ್ಕೆ ಮುಂದಾಗಬೇಕು ಎಂದು ಅವರು ರೈತರಲ್ಲಿ ಮನವಿ ಮಾಡಿದರು.
ಕೃಷಿ ಇಲಾಖೆಯ ಉಪ ನಿರ್ದೇಶಕಿ ಸ್ಫೂರ್ತಿ ಮಾತನಾಡಿ, ಮೆಕ್ಕೆಜೋಳದ ಬೆಳೆಗಳಲ್ಲಿ ಫಾಲ್ಸ್ ಆರ್ಮಿ ವರ್ಮ್ ಕೀಟ ಅತೀ ಹೆಚ್ಚಾಗಿ ಕಂಡುಬಂದಿದೆ. ಈಗಾಗಲೇ ಕೃಷಿ ಇಲಾಖೆ ವತಿಯಿಂದ ತಾಲೂಕಿನ ಪ್ರತಿ ಹಳ್ಳಿಗಳಲ್ಲೂ “ಆತ್ಮ” ಯೋಜನೆಯಡಿ ಆಂದೋಲನದ ಮೂಲಕ ಕೀಟದ ಹಾವಳಿಯ ತಕ್ಷಣ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲಾಗಿದೆ. ಇನ್ನು ರೈತರು, ಈ ಕೀಟದ ಹತೋಟಿಗೆ ತುರ್ತಾಗಿ ಸಸ್ಯ ಸಂರಕ್ಷಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರೈತರಲ್ಲಿ ಮನವಿ ಮಾಡಿದರು.
ಹೊನ್ನಾಳಿಯ ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಡಾ.ಎಚ್.ಕೆ. ರೇವಣಸಿದ್ಧನಗೌಡ ಮಾತನಾಡಿ, ಈ ಕೀಟವು ಮೆಕ್ಕೆಜೋಳವಲ್ಲದೇ ಭತ್ತ, ಹೈಬ್ರಿಡ್‍ಜೋಳ, ರಾಗಿ ಮುಂತಾದ ಬೆಳೆಗಳಲ್ಲಿ ಸಹ ಕಾಣಿಸಿಕೊಳ್ಳುತ್ತಿದೆ. ಕೀಟದ ಹಾವಳಿ ಸ್ವಲ್ಪ ಪ್ರಮಾಣದಲ್ಲಿದ್ದರೆ 2ಮಿ.ಲೀ.ಗಳಷ್ಟು ಕ್ಲೋರೋಫೈರಿಫಾಸ್ ಮತ್ತು ಕ್ವಿನಾಲ್ ಫಾಸ್‍ಅನ್ನು ಪ್ರತೀ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು.
ಕೀಟದ ಹಾವಳಿ ಹೆಚ್ಚಿನ ಪ್ರಮಾಣದಲ್ಲಿದ್ದರೆ 0.4ಗ್ರಾಮ್‍ಗಳಷ್ಟು ಇಮಾಮೆಕ್ಟಿನ್ ಬೆಂಜೋಯೇಟ್‍ನ್ನು ಪ್ರತಿ ಲೀಟರ್ ನೀರಿಗೆ ಅಥವಾ 2ಮಿ.ಲೀ.ಗಳಷ್ಟು ಲ್ಯಾಂಬ್ಡಾ ಸೈಕ್ಲೋಹೆತ್ರಿನ್ ಕೀಟನಾಶಕವನ್ನು ಪ್ರತೀ ಲೀಟರ್ ನೀರಿಗೆ ಅಥವಾ 3ಮಿ.ಲೀ.ಗಳಷ್ಟು ಸ್ಪಿನೋಸ್ಯಾಡ್‍ನ್ನು ಪ್ರತೀ ಲೀಟರ್ ನೀರಿಗೆ ಬೆರೆಸಿ ಬೆಳೆಯ ಸುಳಿಯಲ್ಲಿ ಪೂರ್ಣವಾಗಿ ನೆನೆಯುವ ಹಾಗೆ ಸಿಂಪರಣೆ ಮಾಡಬೇಕು ಎಂದು ವಿವರಿಸಿದರು.
ಹೊನ್ನಾಳಿ ಕೃಷಿ ಇಲಾಖೆಯ ಕೃಷಿ ಅಧಿಕಾರಿ ಶಂಷೀರ್ ಅಹಮ್ಮದ್, ಬೇಲಿಮಲ್ಲೂರು ಗ್ರಾಮದ ರೈತರು ಉಪಸ್ಥಿತರಿದ್ದರು.
ಒತ್ತಾಯ:
ಕೀಟ ಬಾಧೆಯಿಂದ ಮೆಕ್ಕೆಜೋಳ ಬೆಳೆದಿರುವ ರೈತರು ಕಂಗಾಲಾಗಿದ್ದಾರೆ. ಅಧಿಕಾರಿಗಳ ಮಾತಿನಂತೆ ಎಷ್ಟೇ ಕೀಟನಾಶಕ ಸಿಂಪರಣೆ ಮಾಡಿದರೂ ಕೀಟ ಬಾಧೆ ಕಡಿಮೆಯಾಗುತ್ತಿಲ್ಲ. ಕೀಟ ನಾಶಕಗಳಿಗೆ ಹಣ ಖರ್ಚು ಮಾಡಿ ರೈತರ ಜೇಬು ಖಾಲಿ ಆಗುತ್ತಿದೆ. ತಾಲೂಕಿನ ಎಲ್ಲಾ ಭಾಗಗಳಲ್ಲೂ ಮೆಕ್ಕೆಜೋಳದ ಬೆಳೆ ನಾಶದಿಂದ ರೈತರು ತೀವ್ರ ನಷ್ಟ ಅನುಭವಿಸುಂತಾಗಿದೆ. ಎಲೆ ಬಳ್ಳಿ ತೋಟಗಳಿಗೂ ಈ ಕೀಟ ಬಾಧೆ ವ್ಯಾಪಿಸಿದ್ದು, ರೈತರು ದಿಕ್ಕುತೋಚದಂತಾಗಿದ್ದಾರೆ. ತಕ್ಷಣ, ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ಒದಗಿಸಬೇಕು. ಈ ನಿಟ್ಟಿನಲ್ಲಿ ಕಂದಾಯ ಮತ್ತು ಕೃಷಿ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು. ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಎಚ್. ಕಡದಕಟ್ಟೆ ಎಂ.ಎಸ್. ಜಗದೀಶ್ ಒತ್ತಾಯಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ