ದಾವಣಗೆರೆ:
ರೈತರಿಗೆ ಸಕಾಲದಲ್ಲಿ ಬೆಳೆ ವಿಮೆ ಹಣ ತಲುಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಾಸಕ ಎಸ್.ಎ.ರವೀಂದ್ರನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾ.ಪಂ. ಅಧ್ಯಕ್ಷೆ ಮಮತಾ ಮಲ್ಲೇಶಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ರೈತರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಿ, ಬೆಳೆವಿಮೆಯು ಸರಿಯಾದ ಸಮಯಕ್ಕೆ ರೈತರ ಕೈಸೇರುವಂತೆ ಜಾಗೃತಿ ವಹಿಸಬೇಕೆಂದು ಕೃಷಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ ತಾ.ಪಂ. ಸದಸ್ಯ ಸಂಗಜ್ಜಗೌಡ, ಕಳೆದ ಎರಡು ವರ್ಷಗಳಿಂದಲೂ ರೈತರಿಗೆ ಬೆಳೆ ವಿಮೆ ಹಣ ಸರಿಯಾಗಿ ಸಿಗುತ್ತಿಲ್ಲ. 2016-17ರಲ್ಲಿ 7 ಸಾವಿರ ರೈತರಿಗೆ ಮಾತ್ರ ಬೆಳೆವಿಮೆ ತಲುಪಿದೆ. ಆದರೆ, ಕಳೆದ ಸಾಲಿನಲ್ಲಿ 10 ಸಾವಿರ ರೈತರಿಗೆ ಇನ್ನೂ ಬೆಳೆ ವಿಮೆ ಹಣ ತಲುಪಿಲ್ಲ. ರೈತರು ವಿಮೆ ಹೆಸರಿನಲ್ಲಿ ಹಣ ಕಟ್ಟಿ, ಮೋಸಕ್ಕೆ ತುತ್ತಾಗುತ್ತಿದ್ದಾರೆ. ಬೆಳೆ ವಿಮೆ ರೈತರಿಗೆ ತಲುಪುತ್ತಿಲ್ಲ ಎಂದಾದಾಗ ವಿಮೆ ಹಣ ಪಾವತಿಸಿ ಪ್ರಯೋಜನವಿಲ್ಲ, ಬೆಳೆವಿಮೆ ಎಂಬುದು ಇದೊಂದು ಬೋಗಸ್ ಯೋಜನೆ. ಈ ಯೋಜನೆಯಿಂದ ರೈತರಿಗೆ ಏನೂ ಉಪಯೋಗವಿಲ್ಲ. ವಿಮಾ ಕಂಪೆನಿಗೆ ಉಪಯೋಗವಿದೆ ಎಂದು ಆರೋಪಿಸಿದರು.
ಇದಕ್ಕೆ ದನಿ ಗೂಡಿಸಿದ ಸದಸ್ಯ ಎ.ಬಿ. ಹನುಮಂತಪ್ಪ, ಸರ್ಕಾರ ಶೇ.75 ರಷ್ಟು ಮತ್ತು ರೈತರು ಶೇ.25 ರಷ್ಟು ವಿಮೆಯ ಕಂತು ಭರಿಸುತ್ತಾರೆ. ಆದರೆ, ರೈತರಿಗೆ ವಿಮೆಯ ಹಣ ತಲುಪದೆ ನಷ್ಟವಾಗುತ್ತಿದೆ ಎಂದು ದೂರಿದರು.
ಇದಕ್ಕೆ ಉತ್ತರಿಸಿದ ಸಹಾಯಕ ಕೃಷಿ ಅಧಿಕಾರಿ ರೇವಣಸಿದ್ದಪ್ಪ, ಸರ್ಕಾರ 5 ವರ್ಷಗಳ ಇಳುವರಿಯನ್ನು ಪರಿಗಣಿಸಿ, ಬರಗಾಲ ಪೀಡಿತ ಅಥವಾ ಬೆಳೆನಷ್ಟ ಎಂಬುದನ್ನು ಘೋಷಣೆ ಮಾಡಿದ ಆಧಾರದ ಮೇಲೆ ಬೆಳೆ ವಿಮೆ ನೀಡಲಿದೆ. ದಾವಣಗೆರೆ ತಾಲ್ಲೂಕನ್ನು ಬರ ಪೀಡಿತ ತಾಲೂಕು ಎಂಬುದಾಗಿ ಘೋಷಿಸಿದ್ದಲ್ಲಿ. ಈ ಭಾಗದ ರೈತರಿಗೂ ಬೆಳೆ ವಿಮೆ ಹಣ ತಲುಪಲಿದೆ ಎನ್ನುತ್ತಿದ್ದಂತೆ, ಕೆಂಡಮಂಡಲರಾದ ಸದಸ್ಯರು 5 ವರ್ಷದ ಇಳುವರಿ ಪರಿಗಣಿಸುವುದು ಅವೈಜ್ಞಾನಿಕವಾಗಿದೆ. ಆ ವರ್ಷದ್ದು ಮಾತ್ರ ಪರಿಗಣಿಸಬೇಕು.
ಈ ಬಗ್ಗೆ ಸೂಕ್ತ ಪ್ರಸ್ತಾವನೆ ಸಲ್ಲಿಸಬೇಕೆಂದು ಆಗ್ರಹಿಸಿದರು. ಆಗ ಕೃಷಿ ಅಧಿಕಾರಿ ರೇವಣಸಿದ್ದಪ್ಪ ತಮ್ಮ ಕೈಲಾದಷ್ಟು ರೈತರಿಗೆ ಸಹಕಾರ ನೀಡುತ್ತೇನೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇನೆ ಎಂದು ಭರವಸೆ ನೀಡಿದರು.ಬೆಸ್ಕಾಂ ಇಲಾಖೆಯ ದಾವಣಗೆರೆ ಉಪವಿಭಾಗದ ಎಇಇ ಲೋಹಿತ್ ಕುಮಾರ್ ಮಾತನಾಡಿ, ನಿರಂತರ ಜ್ಯೋತಿ ಯೋಜನೆಯು ಲೋಕಿಕೆರೆ ಗ್ರಾಪಂ ಹೊರತುಪಡಿಸಿ ಎಲ್ಲಾ ಗ್ರಾಮಗಳಲ್ಲು ಒದಗಿಸಲಾಗಿದೆ. ಲೋಕಿಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ತಾಂತ್ರಿಕ ಕಾರಣದಿಂದ ಒದಗಿಸಲಾಗಿಲ್ಲ. ದೀನದಯಾಳು ಉಪಧ್ಯಾಯ ಯೋಜನೆಯಲ್ಲಿ ಬಿಪಿಎಲ್ ಪಡಿತರದಾರರಿಗೆ ಉಚಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲಾಗುತ್ತದೆ.
ತಮ್ಮ ತಾಲ್ಲೂಕಿನಲ್ಲಿ ಒಟ್ಟು 1115 ಫಲಾನುಭವಿಗಳಿಗೆ ಈ ಯೋಜನೆಯ ಲಭ್ಯತೆಯಿದೆ. ಆದರೆ ತಮ್ಮ ವ್ಯಾಪ್ತಿಯಲ್ಲಿ 527 ಫಲಾನುಭವಿಗಳಿಗೆ ಮಾತ್ರ ಈ ಸಂಪರ್ಕ ವ್ಯವಸ್ಥೆಯಿದೆ. ಅದರಲ್ಲಿ 396 ಜನ ಮಾತ್ರ ಅರ್ಜಿ ಹಾಕಿದ್ದರು. ಅವರೆಲ್ಲರಿಗೂ ಸಂಪರ್ಕ ಕಲ್ಪಿಸಿಕೊಡಲಾಗಿದೆ ಎಂದು ವಿವರಣೆ ನೀಡಿದರು.ಸಭೆಯಲ್ಲಿ ಉಪಾಧ್ಯಕ್ಷ ಮರುಳಸಿದ್ದಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಎನ್. ನಾಗರಾಜ್ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
