ಹೊಸ ಸದಸ್ಯರಿಗೆ ಬೆಳೆ ಸಾಲ ವಿತರಿಸಲು ಆದ್ಯತೆ : ಬಿ.ಎಚ್. ಬಸವರಾಜಪ್ಪ

ಹೊನ್ನಾಳಿ:

    ಹೊಸ ಸದಸ್ಯರಿಗೆ ಬೆಳೆ ಸಾಲ ವಿತರಿಸಲು ಆದ್ಯತೆ ನೀಡಲಾಗುವುದು ಎಂದು ಯರೇಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎಚ್. ಬಸವರಾಜಪ್ಪ ಹೇಳಿದರು.

     ಭಾನುವಾರ ನಡೆದ ತಾಲೂಕಿನ ಯರೇಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

     ಎಲ್ಲಾ ರೈತರೂ ಹೆಚ್ಚುವರಿ ಸಾಲ ವಿತರಿಸಲು ಒತ್ತಾಯಿಸುತ್ತಿದ್ದಾರೆ. ನಾವು ಕೂಡ ಈ ಬಗ್ಗೆ ಮೇಲಧಿಕಾರಿಗಳಿಗೆ ಒತ್ತಾಯಿಸುತ್ತಲೇ ಇದ್ದೇವೆ. ಆದರೆ, ಹೆಚ್ಚುವರಿ ಮೊತ್ತ ಸಂಘಕ್ಕೆ ಲಭಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಮೇಲಧಿಕಾರಿಗಳಿಗೆ ರೈತರ ಸಮಸ್ಯೆಯನ್ನು ಮನವರಿಕೆ ಮಾಡಿಕೊಡಲಾಗುವುದು. ಹೆಚ್ಚುವರಿ ಮೊತ್ತ ದೊರೆತ ತಕ್ಷಣ ರೈತರಿಗೆ ಹೆಚ್ಚುವರಿ ಬೆಳೆ ಸಾಲ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

      ಈ ಹಿಂದೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿದ 50 ಸಾವಿರ ರೂ.ಗಳವರೆಗಿನ ಸಾಲ ಮನ್ನಾ ಹಾಗೂ ನಂತರದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ 1 ಲಕ್ಷ ರೂ.ಗಳವರೆಗಿನ ಸಾಲ ಮನ್ನಾ ಸೌಲಭ್ಯವನ್ನು ಎಲ್ಲಾ ಸದಸ್ಯರಿಗೂ ಸಮರ್ಪಕವಾಗಿ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಸರಕಾರ ನೀಡುವ ಎಲ್ಲಾ ಸವಲತ್ತುಗಳನ್ನು ಪ್ರಾಮಾಣಿಕವಾಗಿ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ಭರವಸೆ ನೀಡಿದರು. ಶೀಘ್ರದಲ್ಲೇ ಸಂಘದ ಎಲ್ಲಾ ಸದಸ್ಯರಿಗೂ ಬ್ಯಾಂಕ್ ಪಾಸ್‍ಬುಕ್‍ಗಳನ್ನು ನೀಡಲಾಗುವುದು ಎಂದು ಹೇಳಿದರು.

      ಸಂಘದ ಸದಸ್ಯರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾ, ಸರಕಾರ ರೈತರಿಗೆ 3 ಲಕ್ಷ ರೂ.ಗಳ ಬಡ್ಡಿ ರಹಿತ ಸಾಲ ವಿತರಿಸುವುದಾಗಿ ಪ್ರಚಾರ ಪಡೆದುಕೊಳ್ಳುತ್ತದೆ. ಆದರೆ, ವಾಸ್ತವವಾಗಿ ಸಹಕಾರ ಸಂಘಗಳಲ್ಲಿ ರೈತರಿಗೆ 5ರಿಂದ 15 ಸಾವಿರ ರೂ.ಗಳಷ್ಟು ಮಾತ್ರ ಸಾಲ ನೀಡಲಾಗುತ್ತಿದೆ. ಆದ್ದರಿಂದ, ಎಲ್ಲಾ ಸದಸ್ಯರಿಗೂ ಹೆಚ್ಚಿನ ಪ್ರಮಾಣದ ಸಾಲ ವಿತರಿಸಬೇಕು ಎಂದು ಒತ್ತಾಯಿಸಿದರು.
ಸಂಘದ ನಿರ್ದೇಶಕರಾದ ಎಂ.ಬಿ. ಕರಿಬಸಪ್ಪ, ಎಲ್. ರುದ್ರಾನಾಯ್ಕ, ಬಿ.ಎಂ. ಕರಿಬಸಪ್ಪ, ಮುಖಂಡ ವಿರೂಪಾಕ್ಷಪ್ಪ ಇತರರು ಮಾತನಾಡಿದರು.

       ಸಂಘದ ಉಪಾಧ್ಯಕ್ಷ ತಂತಿ ಕರಿಬಸಪ್ಪ, ನಿರ್ದೇಶಕರಾದ ಸಿ. ಪರಮೇಶ್ವರಪ್ಪ, ಜಿ.ಎಸ್. ಶಿವಕುಮಾರ್, ಯು.ಆರ್. ಶಾಂತಪ್ಪ, ಬಿ. ನಾಗಮ್ಮ, ವೈ.ಪಿ. ನಾಗೇಶ್, ಸಿಇಒ ಬಿ.ಎಸ್. ಹರೀಶ್, ಸಿಬ್ಬಂದಿ ವೈ.ಡಿ. ಬಸವರಾಜ್, ಸಂಘದ ಎಲ್ಲಾ ಸದಸ್ಯರು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

                       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link