ನವೆಂಬರ್ 1ರಿಂದ ರೈತರ ಸಾಲಮನ್ನಾ

ಬೆಂಗಳೂರು

      ರಾಜ್ಯದ ಮೂರು ಲೋಕಸಭಾ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ನಾಮಪತ್ರ ಸಲ್ಲಿಕೆ ಪೂರ್ಣಗೊಂಡಿದ್ದು, ಪ್ರತಿಷ್ಠಿತ ಬಳ್ಳಾರಿಯಲ್ಲಿ ಕಾಂಗ್ರೆಸ್‍ನ ವಿ.ಎಸ್. ಉಗ್ರಪ್ಪ, ಬಿಜೆಪಿಯಿಂದ ಜೆ. ಶಾಂತಾ, ಶಿವಮೊಗದಲ್ಲಿ ಜೆಡಿಎಸ್‍ನ ಮಧು ಬಂಗಾರಪ್ಪ ನಾಮಪತ್ರ ಸಲ್ಲಿಸಿದರು.

       ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ನಾಮಪತ್ರ ಸಲ್ಲಿಕೆ ವೇಳೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಡಿ.ಕೆ. ಶಿವಕುಮಾರ್ ಸೇರಿದಂತೆ ಬಳ್ಳಾರಿ ಜಿಲ್ಲೆಯ ಎಲ್ಲ ಕಾಂಗ್ರೆಸ್ ಮುಖಂಡರು ಹಾಜರಿದ್ದರು. ಜೆ.ಶಾಂತಾ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದಾಗ ಶಾಸಕ ಶ್ರೀರಾಮುಲು ಮತ್ತಿತರರು ಉಪಸ್ಥಿತರಿದ್ದರು.

       ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ, ಹಿರಿಯ ಕಾಂಗ್ರೆಸ್ ನಾಯಕರಾದ ಕಾಗೋಡು ತಿಮ್ಮಪ್ಪ, ಸಚಿವರಾದ ಆರ್.ವಿ ದೇಶಪಾಂಡೆ, ಡಿ.ಸಿ. ತಮ್ಮಣ್ಣ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು.

      ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ, ನವೆಂಬರ್ 1ರಿಂದ ರೈತರ ಸಾಲಮನ್ನಾ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ರಾಷ್ಟ್ರೀಯ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ತಿಳಿಸಿದರು.

      2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಸೋಲಿಸುವ ಉದ್ದೇಶದಿಂದ ಉಪಚುನಾವಣೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

      ಬಳ್ಳಾರಿಯಲ್ಲಿ ವಿ.ಎಸ್. ಉಗ್ರಪ್ಪ ಮಾತನಾಡಿ, ನನ್ನ ಸ್ಪರ್ಧೆಗೆ ಯಾರ ವಿರೋಧವಿಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಾರೆ. ನನ್ನ ಗೆಲುವು ಖಚಿತ ಎಂದು ಹೇಳಿದರು.

      2 ತಿಂಗಳ ಹಿಂದೆ ಸ್ಥಳೀಯ ಶಾಸಕರೇ ಚುನಾವಣೆಗೆ ನಿಲ್ಲುವಂತೆ ಮನವಿ ಮಾಡಿದ್ದರು. ಸ್ಥಳೀಯ ಮುಖಂಡರ ಅಭಿಪ್ರಾಯ ಪಡೆದು ಪಕ್ಷದ ಅಭ್ಯರ್ಥಿಯನ್ನಾಗಿ ನನ್ನನ್ನು ಆಯ್ಕೆ ಮಾಡಲಾಗಿದೆ ಎಂದರು.

      ಹೊರಗಿನವರು ಅಭ್ಯರ್ಥಿ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದರ ಅವರು, ನಾನು ಹೊರಗಿನವನು ಎಂದಾದರೇ, ಹಿಂದೆ ರಾಯಚೂರಿನಲ್ಲಿ ಯಾರು ನಿಂತಿದ್ದರು?, ಬಾದಾಮಿಯಲ್ಲಿ ಮೊಳಕಾಲ್ಮೂರಿನಲ್ಲಿ ಯಾರು ನಿಂತಿದ್ದರು? ಎಂದು ಬಿಜೆಪಿ ನಾಯಕರಿಗೆ ವಿ.ಎಸ್ ಉಗ್ರಪ್ಪ ತಿರುಗೇಟು ನೀಡಿದರು.

     ಪ್ರತ್ಯೇಕವಾಗಿ ಮಾತನಾಡಿದ ಸಚಿವ ಡಿಕೆ ಶಿವಕುಮಾರ್, ನಾನು ಯುದ್ದ ಮಾಡಲು ಇಲ್ಲಿಗೆ ಬಂದಿಲ್ಲ. ನನ್ನ ವಿರುದ್ದ ಮಾತನಾಡುವ ಶ್ರೀರಾಮುಲು ದೊಡ್ಡ ವ್ಯಕ್ತಿ. ತಮ್ಮ ನಾಯಕರನ್ನು ಮೆಚ್ಚಿಸಲು ಶ್ರೀರಾಮುಲು ನನ್ನ ವಿರುದ್ದ ಹೇಳಿಕೆಗಳನ್ನ ನೀಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap