ಬಾಲೇನಹಳ್ಳಿ : ಕಡ್ಲೆ ಗಿಡಕ್ಕೆ ಸೊರಗು ರೋಗ

ಚಳ್ಳಕೆರೆ

    ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಕಡ್ಲೆ ಬೆಳೆಗೆ ಸೊರಗರೋಗ ಕಂಡು ಬಂದ ಹಿನ್ನೆಲೆಯಲ್ಲಿ ಆತಂಕಗೊಂಡ ರೈತರು ಇಲ್ಲಿನ ಹಾಯಕ ಕೃಷಿ ನಿರ್ದೇಶಕರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಮೋಹನ್ ಕುಮಾರ್ ಜಮೀನುಗಳಿಗೆ ಭೇಟಿ ನೀಡಿ ಕಡ್ಲೆ ಬೆಳೆಯ ರೋಗದ ಬಗ್ಗೆ ಪರಿಶೀಲನೆ ನಡೆಸಿದರು.

     ಅವರು ಮಂಗಳವಾರ ಬಾಲೇನಹಳ್ಳಿ ಗ್ರಾಮದ ರೈತರಾದ ತಿಪ್ಪೇಸ್ವಾಮಿ, ರಾಮಣ್ಣ ಮುಂತಾದವರ ಜಮೀನುಗಳಿಗೆ ಭೇಟಿ ನೀಡಿ ಕಡ್ಲೆ ಗಿಡಕ್ಕೆ ಹರಡಿರುವ ಸೊರಗ ರೋಗದ ಬಗ್ಗೆ ಪರಿಶೀಲನೆ ನಡೆಸಿದರು. ಸೊರಗ ರೋಗ ವ್ಯಾಪಿಸಿರುವುದು ನಿಜವಿದ್ದು, ಈ ಬಗ್ಗೆ ಇದರ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ, ಶೀಘ್ರದಲ್ಲೇ ರೋಗ ನಿಯಂತ್ರಕ ಔಷಧಗಳನ್ನು ರೈತರಿಗೆ ನೀಡಿ ಈ ರೋಗವನ್ನು ನಿಯಂತ್ರಿಸಲಾಗುವುದು ಎಂದು ರೈತರಿಗೆ ಭರವಸೆ ನೀಡಿದ್ಧಾರೆ.

     ಈ ಭಾಗದಲ್ಲಿ ಸುಮಾರು 40 ಎಕರೆ ಪ್ರದೇಶದಲ್ಲಿ ಈ ರೋಗ ಕಾಣಿಸಿಕೊಂಡಿದ್ದು, ಇದಕ್ಕೆ ಹೊರತು ಪಡಿಸಿದಂತೆ ತಳಕು, ಪರಶುರಾಮಪುರ ಹೋಬಳಿಗಳಲ್ಲಿ ಕಡ್ಲೆ ಬೆಳೆ ಇದ್ದು, ಆ ಪ್ರದೇಶದಲ್ಲಿ ಈ ರೋಗದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೂ ಸಹ ಮುಂಜಾಗ್ರತಾ ಕ್ರಮವಾಗಿ ರೋಗ ನಿಯಂತ್ರಕ ಔಷಧಗಳನ್ನು ತರಿಸಿ ರೈತರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಕಳೆದ 15 ದಿನಗಳಿಂದ ಹವಮಾನ ವೈಪರಿತ್ಯ ಮಳೆ, ಇಬ್ಬನಿ ಹೆಚ್ಚಾಗಿರುವುದರಿಂದ ತೇವಾಂಶ ಹೆಚ್ಚಿ ಈ ರೋಗ ಕಾಣಿಸಿಕೊಂಡಿದೆ ಎಂದು ಅಭಿಪ್ರಾಯಪಡಲಾಗಿದೆ.

     ರೈತ ತಿಪ್ಪೇಸ್ವಾಮಿ ಮಾತನಾಡಿ, ಇತ್ತೀಚೆಗೆ ತಾನೇ ನಮ್ಮ ಬಾಬ್ತು ಸುಮಾರು 9 ಎಕರೆ ಪ್ರದೇಶದಲ್ಲಿ ಕಡ್ಲೆ ಬಿತ್ತನೆ ಮಾಡಿದ್ದು, ಪ್ರಾರಂಭದ ಹಂತದಲ್ಲಿ ಯಾವುದೇ ರೋಗದ ಬೀತಿ ಇರಲಿಲ್ಲ. ಕಳೆದ ಸುಮಾರು ಎಂಟ್ಹತ್ತು ದಿನಗಳಿಂದ ಕಡ್ಲೆ ಗಿಡ ಕಪ್ಪಾಗಿ ಬಾಡುತ್ತಿರುವುದು ಕಂಡು ಬಂತು. ಕೂಡಲೇ ನಾವು ಗ್ರಾಮದ ಇತರೆ ಜಮೀನುಗಳಲ್ಲೂ ಸಹ ಈ ರೋಗ ಇರುವ ಬಗ್ಗೆ ಕೃಷಿ ಇಲಾಖೆ ಗಮನಕ್ಕೆ ತಂದಿದ್ದು, ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಭರವಸೆ ನೀಡಿದ್ದಾರೆ. ತುಂಬಾ ಕಷ್ಟಪಟ್ಟು ನೂರಾರು ಎಕರೆಯಲ್ಲಿ ಕಡ್ಲೆ ಬೆಳೆಯಲಿದ್ದು, ಕೃಷಿ ಅಧಿಕಾರಿಗಳು ನಮ್ಮ ಬೆಳೆಯನ್ನು ಪರಿಶೀಲಿಸಿದ್ದು, ನಾವು ಸರ್ಕಾರದಿಂದ ಪರಿಹಾರ ದೊರಕಿಸಿಕೊಡುವಂತೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.

    ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಜಯಶೀಲರೆಡ್ಡಿ, ಓ.ಟಿ.ತಿಪ್ಪೇಸ್ವಾಮಿ, ಜಯರಾಂರೆಡ್ಡಿ, ಕಾಂತರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap