ತುಮಕೂರು
ವಿಶೇಷ ವರದಿ : ರಾಕೇಶ್.ವಿ.
ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ತುಮಕೂರು ನಗರ ಸ್ಮಾರ್ಟ್ ಆಗುತ್ತದೆಯೇ ಇಲ್ಲವೋ, ಹಣವಂತೂ ಸ್ಮಾರ್ಟ್ ಆಗಿಯೇ ಪೋಲಾಗುತ್ತಿದೆ. ಅದು ಕೂಡ ಒಂದಲ್ಲಾ ಎರಡಲ್ಲ ಬರೊಬ್ಬರಿ 1819.73 ಕೋಟಿ ರೂಗಳು. ಇಷ್ಟು ಹಣ ಖರ್ಚು ಮಾಡುತ್ತಿದ್ದರೂ ಅಭಿವೃದ್ಧಿಯಂತೂ ಕಾಣುತ್ತಲೇ ಇಲ್ಲ..
ತುಮಕೂರು ನಗರವನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆ ಮಾಡಿಕೊಂಡು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತಿದೆ. ಈಗಾಗಲೇ ಕಳೆದ ಎರಡು ವರ್ಷದಿಂದ ಕಾಮಗಾರಿಗಳನ್ನು ಮಾಡುತ್ತಲೇ ಇದ್ದಾರೆ. ಆದರೂ ಎಲ್ಲಿಯೂ ಪೂರ್ಣಗೊಂಡಿರುವ ಉದಾಹರಣೆಗಳೇ ಕಾಣಸಿಗುತ್ತಿಲ್ಲ. ಕೇವಲ ಬೆರಳೆಣಿಕೆಯಷ್ಟು ಕಾಮಗಾರಿಗಳನ್ನು ಮಾತ್ರ ನೋಡಬಹುದಾಗಿದ್ದು, ಅವು ಕೂಡ ಸರಿಯಾದ ನಿರ್ವಹಣೆ ಇಲ್ಲದೆ ಸೊರಗುತ್ತಿವೆ.
ನಿರ್ವಹಣೆಯಿಲ್ಲದ ಸ್ಮಾರ್ಟ್ ಲಾಂಜ್
ಉದಾಹರಣೆಗೆ ಸ್ಮಾರ್ಟ್ ಲಾಂಜ್ ನೋಡುವುದಾದರೆ 10 ಕೋಟಿ ರೂಗಳ ಯೋಜನೆ ಇದಾಗಿದ್ದು, ಮೊದಲು ಪ್ರಾಯೋಗಿಕವಾಗಿ 2 ಕೋಟಿ ರೂಗಳಲ್ಲಿ ಅಮಾನಿಕೆರೆಯ ಗಾಜಿನ ಮನೆ ಆವರಣದಲ್ಲಿ ಒಂದನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ, ಸಾರ್ವಜನಿಕರು ಬಂದು ತಮ್ಮ ಅವಶ್ಯಕತೆಗನುಗುಣವಾಗಿ ಸೇವೆಯನ್ನು ಪಡೆಯಬಹುದಾಗಿದೆ. ಆದರೆ ಈ ಬಗ್ಗೆ ಯಾರಿಗೂ ಮಾಹಿತಿಯೇ ಇಲ್ಲ. ಸಂಬಂಧಪಟ್ಟ ಎಂಜಿನಿಯರ್ಗಳು ಎಲ್ಲಾ ಶಾಲಾ ಕಾಲೇಜುಗಳಿಗೆ ಸರ್ಕುಲರ್ ಮೂಲಕ ಮಾಹಿತಿ ನೀಡಿದ್ದೇವೆ ಎನ್ನುತ್ತಾರೆ. ಆದರೆ ಶಾಲೆಗಳಿಗೆ ತಲುಪಿಸಿದ ಸರ್ಕುಲರ್ ತೋರಿಸಿ ಎಂದಾಗ ಅದಕ್ಕೆ ದಾಖಲೆಗಳಿಲ್ಲ.
ಸ್ಮಾರ್ಟ್ ಲಾಂಜ್ನ್ನು 130 ರಿಂದ 150 ಚದರ ಮೀಟರ್ ಅಳತೆಯ ಜಾಗದಲ್ಲಿ ನಿರ್ಮಾಣ ಮಾಡಲಾಗಿದೆ. ಕೇವಲ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ನಿರ್ವಹಣೆ ಮಾಡಲಾಗುತ್ತಿದೆಯೇ ಹೊರತು ನಿಜಕ್ಕೂ ಸ್ಮಾರ್ಟ್ ಲಾಂಜ್ನ ನಿರ್ವಹಣೆ ಆಗುತ್ತಿಲ್ಲ. ಕಟ್ಟಡದ ಮುಂದೆಯೇ ತಗ್ಗು ಪ್ರದೇಶ, ಗಿಡಗಂಟೆಗಳು ಬೆಳೆದುಕೊಂಡು ಹುಳಹುಪಪ್ಪಡಿಗಳು ಸೇರಿಕೊಂಡರೆ ಯಾರಿಗೂ ಗೊತ್ತಾಗುವುದೇ ಇಲ್ಲ. ಒಂದು ವೇಳೆ ಜೋರಾದ ಮಳೆ ಬಂದರೆ ನೀರು ನಿಂತುಕೊಳ್ಳುತ್ತದೆ. ಈ ಸಮಸ್ಯೆಯ ನಡುವೆ ಸಾರ್ವಜನಿಕರು ಅದೇಗೆ ಸ್ಮಾರ್ಟ್ ಲಾಂಜ್ನ್ನು ಬಳಕೆ ಮಾಡಿಕೊಳ್ಳಲು ಸಾಧ್ಯ..?
ವಿವಿಧ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆಯಬೇಕಾದರೆ ಕಚೇರಿಗೆ ತೆರಳಬೇಕು. ಇಲ್ಲವಾದಲ್ಲಿ ಇತ್ತೀಚೆಗೆ ಹಾಕಲಾದ ಮಾಹಿತಿ ಫಲಕಗಳನ್ನು ನೋಡಬೇಕಿದೆ. ಆದರೆ ಮಾಹಿತಿ ಫಲಕಗಳಲ್ಲಿಯೂ ಸಹ ಪೂರ್ಣ ಮಾಹಿತಿ ದೊರೆಯವುದಿಲ್ಲ. ಈ ಬಗ್ಗೆ ಮಾಹಿತಿ ಬೇಕಾದರೆ ಸ್ಮಾರ್ಟ್ ಸಿಟಿಯ ವೆಬ್ಸೈಟ್ನ್ನು ಗಮನಿಸಿದರೆ ಅದರಲ್ಲಿ ಎಲ್ಲ ಮಾಹಿತಿ ಸಿಗುತ್ತದೆ. ಪ್ರತಿದಿನವೂ ಕಾಮಗಾರಿಯ ಬಗ್ಗೆ ಅಭಿವೃದ್ಧಿಯ ಬಗ್ಗೆ ಮಾಹಿತಿ ಅಪ್ಲೋಡ್ ಮಾಡಲಾಗುತ್ತದೆ ಎಂದು ಹೇಳುತ್ತಾರೆ. ನಿಜಕ್ಕೂ ವೆಬ್ಸೈಟ್ನ ಒಳಹೊಕ್ಕು ನೋಡಿದರೆ ಅಲ್ಲಿಯೂ ಮಾಹಿತಿ ಅಪೂರ್ಣ.
ವ್ಯರ್ಥವಾದ ತುಮಕೂರು ವಿವಿ ಸ್ಮಾರ್ಟ್ ಪಾರ್ಕ್
ವೆಬ್ಸೈಟ್ನಲ್ಲಿರುವಂತೆ ತುಮಕೂರು ವಿಶ್ವವಿದ್ಯಾಲಯದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಮಾಡಿರುವಂತಹ ಸ್ಮಾರ್ಟ್ ಪಾರ್ಕ್ ಕಾಮಗಾರಿಗೆ 61.60 ಲಕ್ಷ ಅಂದಾಜು ವೆಚ್ಚ. ಕಾಮಗಾರಿ ಮಾಡಲು ಆಡಳಿತ ವಿಭಾಗ ಹಾಗೂ ತಾಂತ್ರಿಕ ವಿಭಾಗ ಎರಡೂ ಕಡೆಯಿಂದಲೂ 2017ರ ಸೆಪ್ಟಂಬರ್ 1ಕ್ಕೆ ಅನುಮತಿ ದೊರೆತಿದೆ. 2018ರ ಫೆಬ್ರುವರಿಯಲ್ಲಿ ಕಾಮಗಾರಿ ಪ್ರಾರಂಭ ಮಾಡಿ ಅಕ್ಟೋಬರ್ ವೇಳೆಗೆ ಪೂರ್ಣಗೊಳಿಸಲಾಯಿತು.
ಆರಂಭದಲ್ಲಿ ನೋಡಲು ಅಂದವಾಗಿ ಕಂಡರೂ ಆ ಅಂದ ಬಹಳ ದಿನಗಳ ಕಾಲ ಉಳಿಯಲಿಲ್ಲ. ಕೇವಲ ಕೆಲವೇ ತಿಂಗಳಲ್ಲಿ ನಿರ್ವಹಣೆ ಇಲ್ಲದೆ ಹಾಳುಕೊಂಪೆಯಂತಾಗಿದೆ. ಇದಕ್ಕೆ 56 ಲಕ್ಷ ಹಣ ಬಿಲ್ ಮಾಡಲಾಗಿದೆ ಎಂದು ಸ್ಮಾರ್ಟ್ ಸಿಟಿ ಕಚೇರಿಯ ಮೂಲಗಳು ತಿಳಿಸುತ್ತಿವೆ. ಆದರೆ ವೆಬ್ಸೈಟ್ನಲ್ಲಿ ಮಾತ್ರ 31,57,553 ರೂಗಳ ಬಿಲ್ನ್ನು ನೀಡಲಾಗಿದೆ ಎಂದು ತೋರಿಸಲಾಗುತ್ತಿದೆ. ಅದರಲ್ಲಿ ಬಿಲ್ ನಂಬರ್ ಆಗಲಿ, ಬಿಲ್ ದಿನಾಂಕವಾಗಲಿ ನಮುದಾಗಿಲ್ಲ. ಬದಲಿಗೆ ಬ್ಯಾಂಕ್ನ ಚೆಕ್ ಮೂಲಕ ಬಿಲ್ ಮೊತ್ತವನ್ನು ನೀಡಲಾಗಿದೆ ಎಂದು ತೋರಿಸಲಾಗುತ್ತಿದೆ.
ಹಾಗಾದರೆ ಉಳಿದ ಹಣ ಎಲ್ಲಿಗೆ ಹೋಯಿತು..?
ವೆಬ್ಸೈಟ್ನಲ್ಲಿ ಸೇರಿಸಲಾದ ಮಾಹಿತಿಯಂತೆ ತುಮಕೂರು ವಿವಿಯಲ್ಲಿನ ಸ್ಮಾರ್ಟ್ ಪಾರ್ಕ್ನ ಅಭಿವೃದ್ಧಿ ಕಾಮಗಾರಿಯು ನಡೆಯುತ್ತಿರುವ ವೇಳೆ ಅಂದರೆ ಜೂನ್ ತಿಂಗಳ 28ರಂದು ತೆಗೆದ ಚಿತ್ರಗಳನ್ನು ಆಗಸ್ಟ್ ತಿಂಗಳ 22ರಂದು ಅಪ್ಲೋಡ್ ಮಾಡಲಾಗಿದೆ. ಅದು ಕೇವಲ ಕಾಮಗಾರಿ ನಡೆಯುತ್ತಿರುವ ಬಗ್ಗೆ ಹಾಕಲಾದ ಚಿತ್ರಗಳೇ ಹೊರತು ಕಾಮಗಾರಿ ಪೂರ್ಣವಾದ ನಂತರ ಯಾವುದೇ ಚಿತ್ರಗಳನ್ನು ಅಪ್ಲೋಡ್ ಮಾಡಿಲ್ಲ. ಅಷ್ಟೇ ಅಲ್ಲದೆ ಸ್ಮಾರ್ಟ್ ಪಾರ್ಕ್ ಸರಿಯಾದ ನಿರ್ವಹಣೆ ಇಲ್ಲದೆ ವ್ಯರ್ಥವಾಗಿರುವುದು ನಮ್ಮ ಕಣ್ಣಮುಂದೆಯೇ ಕಂಡು ಬರುತ್ತಿದೆ.
ಪಾರದರ್ಶಕವಾಗಿ ನಡೆಯುತ್ತಿರುವ ಕಾಮಗಾರಿಗಳು, ಈ ಬಗ್ಗೆ ಸಂಪೂರ್ಣ ಮಾಹಿತಿ ವೆಬ್ಸೈಟ್ನಲ್ಲಿ ಸಿಗುತ್ತದೆ ಎಂದು ಪ್ರಚಾರ ಮಾಡುವ ಸ್ಮಾರ್ಟ್ ಸಿಟಿ ಎಂಜಿನಿಯರ್ಗಳೇ ಇದಕ್ಕೆ ಉತ್ತರ ನೀಡಬೇಕಿದೆ. ವ್ಯರ್ಥಗೊಂಡ ಸ್ಮಾರ್ಟ್ ಪಾರ್ಕ್ನ್ನು ವೀಕ್ಷಣೆ ಮಾಡಲಾಗಿದೆಯೇ..? ಸಂಬಂಧಪಟ್ಟ ಎಂಜಿನಿಯರ್ಗಳಾಗಲಿ, ಗುತ್ತಿಗೆದಾರರಾಗಲಿ ಅದನ್ನು ಸರಿಪಡಿಸುವ ಗೋಜಿಗೆ ಹೋಗಿದ್ದಾರೆಯೇ..? ಕಾಮಗಾರಿ ಪೂರ್ಣಗೊಂಡ ನಂತರ ತುಮಕೂರು ವಿವಿಗೆ ಹಸ್ತಾಂತರ ಮಾಡಲಾಗುವುದು ಎನ್ನಲಾಗಿತ್ತು. ಆದರೆ ಇಷ್ಟೆಲ್ಲಾ ಸಮಸ್ಯೆಗಳಿರುವ ಪಾರ್ಕ್ನ್ನು ತುಮಕೂರು ವಿವಿಯು ಅದೇಗೆ ತೆಗೆದುಕೊಳ್ಳುತ್ತದೆ ಎಂಬ ಆಲೋಚನೆಯಾದರೂ ಬೇಡವೇ..?
ಬಳಕೆಯಾಗದ ಬಸ್ ಶೆಲ್ಟರ್
ಸ್ಮಾರ್ಟ್ ಸಿಟಿಯಡಿಯಲ್ಲಿ 18 ಲಕ್ಷ ವೆಚ್ಚದಲ್ಲಿ ಅತ್ಯಂತ ವಿನೂತನ ಮಾದರಿಯಲ್ಲಿ ಪ್ರಯಾಣಿಕ ತಂಗುದಾಣ ನಿರ್ಮಿಸಲಾಯಿತು. ಈಗಾಗಲೆ ಟೂಡಾ ವತಿಯಿಂದ ನಿರ್ಮಾಣ ಮಾಡಲಾದ ತಂಗುದಾಣ ಇದೆ. ಅದನ್ನೇ ಜನರು ಬಳಸುತ್ತಿಲ್ಲ ಇದರ ಜೊತಗೆ ವಿವಿಧ ಸ್ಮಾರ್ಟ್ ಪರಿಕರಗಳೊಂದಿಗೆ ಒಂದು ತಂಗುದಾಣ ನಿರ್ಮಾಣ ಮಾಡಲಾಯಿತು. ಜೊತೆಗೆ ಆಗಸ್ಟ್ 15ರಂದು ಉದ್ಘಾಟನೆಯೂ ಸಹ ಆಯಿತು. ಆದರೆ ಇಲ್ಲಿಯವರೆಗೆ ಹೇಳಲಾದಂತ ಯಾವ ಸೌಲಭ್ಯಗಳು ಅಲ್ಲಿ ಅಳವಡಿಕೆ ಮಾಡಿಲ್ಲ. ಈ ಬಗ್ಗೆ ದಿನಂಪ್ರತಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳೇ ಆರೋಪಿಸುತ್ತಿದ್ದಾರೆ.
ಈ ಬಗ್ಗೆ ವೆಬ್ಸೈಟಿನಲ್ಲಿ 5 ಬಸ್ ಶೇಲ್ಟರ್ ನಿರ್ಮಾಣಕ್ಕೆ ಅಂದಾಜು ವೆಚ್ಚ 36 ಲಕ್ಷ, ಕಾಮಗಾರಿ ಮಾಡಲು ಅನುಮತಿ ನೀಡಿರುವ ದಿನಾಂಕ 06.11.2018 ಎಂದು ನಮೂದು ಮಾಡಲಾಗಿದೆ ಹೊರತು ಮುಂದಿನ ಮಾಹಿತಿ ಇಲ್ಲವೇ ಇಲ್ಲ. ಈ ರೀತಿ ಜನರ ತೆರಿಗೆ ಹಣ ಪೋಲು ಮಾಡುವುದರ ಹಿಂದೆ ಇರುವುದು ಕಮೀಷನ್, ಪರ್ಸಂಟೇಜ್ ಹೊಡೆಯುವ ದಂಧೆ ಇದೆ ಎಂಬ ಮಾತುಗಳು ಇದೀಗ ಸಾರ್ವಜನಿಕರ ವಲಯದಲ್ಲಿ ಘಂಟಾಘೋಷವಾಗಿ ಕೇಳಿ ಬರುತ್ತಿವೆ.
ಇನ್ನೊಂದು ಕಡೆ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆಯುವ ಅಧಿಕಾರಿಗಳು ಬೆಂಗಳೂರಿನಲ್ಲೇ ಕುಳಿತು ತಾವೇ ಅನುಮತಿ ನೀಡಿ ಕಾಮಗಾರಿ ಆಗಿದೆ ಎಂಬುದನ್ನು ಘೋಷಣೆ ಮಾಡುವುದಾದರೆ ಸ್ಥಳೀಯ ಜನಪ್ರತಿನಿಧಿಗಳ ಪಾತ್ರವೇನಿಲ್ಲವೇ..? ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದ ಜನರಿಗೆ ಅನುಕೂಲವಾಗುತ್ತದೆಯೇ ಅಥವಾ ಸುಖಾಸುಮ್ಮನೆ ಹಣ ಪೋಲಾಗುತ್ತಿದೆಯೇ ಎಂಬುದರ ಗಮನ ಹರಿಸಬೇಕಾದ ಜವಾಬ್ದಾರಿ ಜನಪ್ರತಿನಿಧಿಗಳ ಮೇಲೆ ಇದೆಯಲ್ಲವೇ..?
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ