ಚಳ್ಳಕೆರೆ
ಕೂಲಿಗಾಗಿ ಬೆಂಗಳೂರಿನತ್ತ ಹೊರಟ ಕ್ರೂಸರ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಹೊಟ್ಟೆಪ್ಪನಹಳ್ಳಿ ಗ್ರಾಮದ ಬಳಿ ಪಲ್ಟಿಯಾದ ಪರಿಣಾಮವಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟು ಇನ್ನೂ ಆರು ಜನರು ಗಾಯಗೊಂಡು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ಧಾರೆ.
ರಾಯಚೂರು ಜಿಲ್ಲೆಯ ಮಸ್ಕಿ ಗ್ರಾಮದವರಾದ ಪೊನ್ನಪ್ಪ ಸ್ಥಳದಲ್ಲೇ ಮೃತಪಟ್ಟರೆ ಲಿಂಗಸೂರು ತಾಲ್ಲೂಕಿನ ತೀರ್ಥಬಾದೆಹಳ್ಳಿ ಗ್ರಾಮದ ಪವಿತ್ರ(20), ದುರುಗೇಶ್(28), ಸಣ್ಣ(40), ಅಂಬರೀಶ್(21), ಅಯ್ಯಪ್ಪ(40) ಮತ್ತು ಅಂಬರೀಶ್(24) ಇವರು ಗಾಯಗೊಂಡು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಅಪಘಾತದ ಬಗ್ಗೆ ಮಾಹಿತಿ ನೀಡಿದ ಗಾಯಾಳು ದುರುಗೇಶ್ ನಮ್ಮಲ್ಲಿ ಬರಗಾಲವಿದ್ದು, ಕೂಲಿ ಕೆಲಸವೂ ಇಲ್ಲದ ಪ್ರಯುಕ್ತ ಕೂಲಿ ಮಾಡಲು ಬೆಂಗಳೂರಿಗೆ ನಮ್ಮ ಸುತ್ತಮುತ್ತಲ ಗ್ರಾಮದ ಸುಮಾರು 14 ಕ್ಕೂ ಹೆಚ್ಚು ಜನರು ದಿನಸಿ ಪದಾರ್ಥಗಳು, ಬಟ್ಟೆ ಬರೆ ಹಾಗೂ ಸಾಂಬರ್ ಪದಾರ್ಥಗಳೊಂದಿಗೆ ಶನಿವಾರ ಸಂಜೆ ನಮ್ಮ ಗ್ರಾಮಗಳನ್ನು ಬಿಟ್ಟು, ಭಾನುವಾರ ಬೆಳಗಿನ ಜಾವ ಸುಮಾರು 4ರ ಸಮಯದಲ್ಲಿ ಚಳ್ಳಕೆರೆ ನಗರದಿಂದ ಸುಮಾರು 5 ಕಿ.ಮೀ ದೂರದಲ್ಲಿ ನಮ್ಮ ವಾಹನ ಪಲ್ಟಿಯಾಗಿದ್ದು, ಸಾರ್ವಜನಿಕರ ನೆರವಿನಿಂದ ಆಸ್ಪತ್ರೆಗೆ ದಾಖಲಾಗಿದ್ದೇವೆ.
ಈ ಪೈಕಿ ಇನ್ನಿಬ್ಬರು ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕ್ರೂಸರ್ ಚಾಲಕ ಅಪಘಾತವೆಸಗಿದ ಕೂಡಲೇ ನಾಪತ್ತೆಯಾಗಿದ್ದಾನೆ. ಬಡವರಾದ ನಮಗೆ ಇಂತಹ ಸ್ಥಿತಿ ಬಂದಿದೆ ಎಂದು ನೋವು ವ್ಯಕ್ತ ಪಡಿಸಿದ್ದಾನೆ. ಚಳ್ಳಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ಧಾರೆ.