ಸಿ.ಟಿ.ರವಿ ಕ್ಷಮೆಯಾಚಿಸಬೇಕು : ಯಾದವರೆಡ್ಡಿ

ಚಿತ್ರದುರ್ಗ:

    ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ ನಡೆಯುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜನಪರ ಬರಹಗಾರ, ಹೋರಾಟಗಾರ, ಪರಿಸರವಾದಿ ಕಲ್ಕುಳಿ ವಿಠಲಹೆಗಡೆ ಮೇಲೆ ನಕ್ಸಲ್ ಪಟ್ಟ ಕಟ್ಟಿ ಸಮ್ಮೇಳನದಲ್ಲಿ ಭಾಗವಹಿಸುವುದಿಲ್ಲವೆಂದು ಹೇಳಿರುವ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸಿ.ಟಿ.ರವಿ ಕನ್ನಡ ಸಾರಸ್ವತ ಲೋಕಕ್ಕೆ ಅವಮಾನ ಮಾಡಿದ್ದಾರೆ. ಕೂಡಲೆ ಅವರು ಕನ್ನಡ ನಾಡಿನ ಜನತೆ ಕ್ಷಮೆ ಯಾಚಿಸಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಸ್ವರಾಜ್ ಇಂಡಿಯಾ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಒತ್ತಾಯಿಸಿದರು.

    ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಕಲ್ಕುಳಿ ವಿಠಲಹೆಗಡೆ ನಕ್ಸಲ್ ಸಂಪರ್ಕ ಹೊಂದಿದ್ದರೆ ಶಿಕ್ಷೆ ವಿಧಿಸಲು ಕಾನೂನಿದೆ. ಹೋರಾಟಗಾರರ ಮೇಲೆ ನಕ್ಸಲ್ ಪಟ್ಟ ಕಟ್ಟುವುದು ಎಷ್ಟು ಸರಿ. ನೀವು ಚುನಾವಣೆಯಲ್ಲಿ ಗೆದ್ದ ಮೇಲೆ ವಿಧಾನಸೌಧದಲ್ಲಿ ಪ್ರಮಾಣ ವಚನ ಸ್ವೀಕರಿಸಿದಂತೆಯೇ ದಿನನಿತ್ಯದ ಜೀವನದಲ್ಲಿ ನಡೆದುಕೊಳ್ಳುತ್ತೀರ ಎಂದು ಸಿ.ಟಿ.ರವಿಯನ್ನು ಪ್ರಶ್ನಿಸಿದ ಜೆ.ಯಾದವರೆಡ್ಡಿ ಕನ್ನಡಿಗರ ಆತ್ಮಾಭಿಮಾನದ ಶಕ್ತಿಯಾಗಿ ಕೆಲಸ ಮಾಡುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇದೊಂದು ದೊಡ್ಡ ಅಪಚಾರ. ಕನ್ನಡದ ಕೆಲಸಕ್ಕೆ ನೀವೆ ಅಡ್ಡ ಬಂದರೆ ಪೋಷಿಸಿ ಬೆಳೆಸಬೇಕಾದವರು ಯಾರು ಎಂದು ಕುಟುಕಿದರು.

    ಕಲ್ಕುಳಿ ವಿಠಲ ಹೆಗಡೆಯವರನ್ನು ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ನೇಮಕ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ ಸರ್ಕಾರದ ಅಧೀನದಲ್ಲಿಲ್ಲ. ವೈಯಕ್ತಿಕ ವಿಚಾರಕ್ಕಾಗಿ ಸಚಿವ ಸಿ.ಟಿ.ರವಿ ಶೃಂಗೇರಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕತ್ತಲಲ್ಲಿಡುವುದು ಎಷ್ಟು ಸರಿ. ವಿಚಾರವಾದಿಗಳಿಗೆ ಬೇರೆ ಬೇರೆ ಪಟ್ಟ ಕಟ್ಟುವುದು ಯಾವ ನ್ಯಾಯ. ಬುದ್ದ, ಬಸವ, ಪಂಪ, ರನ್ನ, ಇವರುಗಳ ನಡುವೆ ಎಷ್ಟೆ ಭಿನ್ನಾಭಿಪ್ರಾಯಗಳಿದ್ದರು. ಪರಸ್ಪರರನ್ನು ಗೌರವಿಸುತ್ತಿದ್ದರು. ಹಿಂದೆಂದು ಕೇಳಿ ಕಂಡರಿಯದಂತ ಘಟನೆ ಇದು. ಕನ್ನಡಿಗರು ತಲೆತಗ್ಗಿಸುವಂತೆ ಮಾಡಿರುವ ಸಿ.ಟಿ.ರವಿ ವಿರುದ್ದ ಯಾವ ಸಾಹಿತಿಗಳು ಮಾತನಾಡದೆ ಬಾಯಿಮುಚ್ಚಿಕೊಂಡು ಕುಳಿತಿರುವುದು ದೊಡ್ಡ ದುರಂತ. ಇಂತಹ ಘಟನೆ ಇನ್ನು ಮುಂದೆ ಮರುಕಳಿಸಬಾರದು ಎಂದು ಖಾರವಾಗಿ ಎಚ್ಚರಿಸಿದರು.

    ಸಚಿವ ಸಿ.ಟಿ.ರವಿ ನಿಜವಾಗಿಯೂ ಕನ್ನಡ ಸಾಹಿತ್ಯ ಪರಂಪರೆ ಮೇಲೆ ಭಯೋತ್ಪಾದನೆ ನಡೆಸುವಂತಿದೆ. ಜನರನ್ನು ಎತ್ತಿಕಟ್ಟುವ ಕೆಲಸ ಅವರಿಗೆ ಶೋಭೆ ತರುವಂತದ್ದಲ್ಲ. ಯಾವುದೆ ಪಕ್ಷವಾಗಲಿ, ಸರ್ಕಾರವಾಗಲಿ ಇಂದು ಇರುತ್ತೆ ನಾಳೆ ಹೋಗುತ್ತೆ. ಆದರೆ ಕನ್ನಡ ಭಾಷೆ ಶಾಶ್ವತ. ಸಚಿವರ ಈ ವರ್ತನೆ ನೋಡಿದರೆ ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರುಗಳನ್ನಾಗಿ ಅವರ ಪಕ್ಷದವರನ್ನು ಮಾಡಿದರೂ ಆಶ್ಚರ್ಯವಿಲ್ಲ.

    ರಾಜ್ಯ ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ಎಂಬತ್ತು ಸಾವಿರ ಸದಸ್ಯರಿದ್ದಾರೆ. ಶೃಂಗೇರಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಷ್ಟೆಲ್ಲಾ ಅವಮಾನವಾಗಿದ್ದರೂ ಪರಿಷತ್‍ನ ರಾಜ್ಯಾಧ್ಯಕ್ಷ ಮನುಬಳಿಗಾರ್ ಪಂಚೇಂದ್ರಿಯಗಳನ್ನು ಮುಚ್ಚಿಕೊಂಡು ಸುಮ್ಮನೆ ಕುಳಿತಿರುವುದು ಯಾವ ಪುರುಷಾರ್ಥಕ್ಕಾಗಿ. ಸಾಹಿತ್ಯ ಪರಿಷತ್‍ನ್ನು ಸರ್ಕಾರಕ್ಕೆ ಒತ್ತೆಯಿಟ್ಟಿರುವ ಅವರು ಒಂದು ಕ್ಷಣವೂ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಬಾರದು. ಶೃಂಗೇರಿಯಲ್ಲಿ ನಡೆಯುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ಅನುದಾನ ಕೊಡಬಾರದೆಂದು ಸಿ.ಟಿ.ರವಿ ಹೇಳಿರುವುದು ಕನ್ನಡ ಸಾರಸ್ವತ ಲೋಕಕ್ಕೆ ಕಪ್ಪುಚುಕ್ಕೆಯಿಟ್ಟಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

     ಕನ್ನಡ ಸಾಹಿತ್ಯ ಲೋಕಕ್ಕೆ ತನ್ನದೆ ಆದ ಅಸ್ಮಿತೆಯಿರುವುದರಿಂದ ಸಾಹಿತ್ಯ ಪರಿಷತ್‍ನ್ನು ಗೌರವದಿಂದ ಕಾಣಿ. ಸದಸ್ಯರಿಗೆ ಮನ್ನಣೆ ಕೊಡಿ, ಸಂಸ್ಕøತಿಯೇ ಗೊತ್ತಿಲ್ಲದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸಿ.ಟಿ.ರವಿ ವರ್ತನೆಯಿಂದ ಸೃಜನಶೀಲತೆ ನಾಶವಾಗಿದೆ, ನಾಡಿನ ಹೆಸರಾಂತ ಸಾಹಿತಿಗಳು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವವರು ಬಾಯಿ ಮುಚ್ಚಿಕೊಂಡಿರು ವುದು ಆತಂಕಕಾರಿ ಬೆಳವಣಿಗೆ.

     ಇನ್ನಾದರೂ ಸಿ.ಟಿ.ರವಿ ವಿರುದ್ದ ಪ್ರತಿರೋಧ ತೋರಿಸಲಿ ಎಂದು ಛೇಡಿಸಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ದಾಸೇಗೌಡ ಮಾತನಾಡಿ ಸಿ.ಟಿ.ರವಿಯವರ ಇಂತಹ ಉದ್ದಟತನದ ವರ್ತನೆ ಸರಿಯಲ್ಲ. ನಿರಂಕುಶಮತಿಯಾಗಿದ್ದರೆ ಮಾತ್ರ ಭಾಷೆ ಬೆಳೆಯಲು ಸಾಧ್ಯ. ಕಲ್ಕುಳಿ ವಿಠಲ ಹೆಗಡೆಯವರ ನೇಮಕಕ್ಕೆ ವಿರೋಧವಾಗಿ ನಡೆದುಕೊಳ್ಳುತ್ತಿರುವ ಸಿ.ಟಿ.ರವಿ ಮೊದಲು ಕನ್ನಡಿಗರ ಕ್ಷಮೆ ಕೇಳಲಿ ಎಂದರು.

    ರೈತ ಮುಖಂಡ ಬಸ್ತಿಹಳ್ಳಿ ಸುರೇಶ್‍ಬಾಬು ಮಾತನಾಡುತ್ತ ಶೃಂಗೇರಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನೇಮಕಗೊಂಡಿರುವ ಕಲ್ಕುಳಿ ವಿಠಲ ಹೆಗಡೆಗೆ ನಕ್ಸಲ್ ಸಂಪರ್ಕವಿರುವುದಾಗಿ ಹೇಳಿರುವ ಸಚಿವ ಸಿ.ಟಿ.ರವಿ ಕನ್ನಡ ಸಾಹಿತ್ಯವನ್ನು ಧಮನ ಮಾಡುವ ಕೆಲಸಕ್ಕೆ ಕೈಹಾಕಿದ್ದಾರೆ. ಎಲ್ಲಾ ಸಾಹಿತಿ, ಚಿಂತಕರು, ಜನಸಾಮಾನ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿರುವ ಸಚಿವರು ಪ್ರಜಾಪ್ರಭುತ್ವವನ್ನು ಅವಮಾನಿಸಬಾರದು ಎಂದು ಹೇಳಿದರು.ರವಿಕುಮಾರ್, ರೈತ ಕಾಂತರಾಜ್ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap