ಬೆಂಗಳೂರು
ಯಲಚೇನಹಳ್ಳಿಯ ನಮ್ಮ ಮೆಟ್ರೋ ನಿಲ್ದಾಣದ ಬಳಿ ವ್ಯಕ್ತಿಯೊಬ್ಬರಿಗೆ ಮಾರಕಾಸ್ತ್ರದಿಂದ ಹೊಡೆದು ಕೊಲೆಯತ್ನ ನಡೆಸಿ ಪುಂಡಾಡಿಕೆ ನಡೆಸಿ ಸ್ಥಳೀಯರಲ್ಲಿ ನಡುಕ ಉಂಟುಮಾಡಿದ್ದ ಇಬ್ಬರು ಆರೋಪಿಗಳನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ್ದಾರೆ.
ರಘುವನಹಳ್ಳಿಯ ಹರ್ಷಿತ್‍ಗೌಡ (20) ಮತ್ತು ಕನಕಪುರ ಮುಖ್ಯರಸ್ತೆ ನಿವಾಸಿ ಶರಣ್ (20) ಬಂಧಿತ ಆರೋಪಿಗಳಾಗಿದ್ದಾರೆ .ಬುಧವಾರ ಸಂಜೆ 6.30ರ ವೇಳೆ ಕನಕಪುರ ಮುಖ್ಯರಸ್ತೆಯ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದ ಬಳಿಗೆ ಬೈಕ್‍ನಲ್ಲಿ ಬಂದಿದ್ದ ಆರೋಪಿಗಳು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಸಾರ್ವಜನಿಕರಿಗೆ ಬೆದರಿಕೆ ಹಾಕುತ್ತಿದ್ದರು.
ಈ ವೇಳೆ ವ್ಯಕ್ತಿಯೊಬ್ಬರಿಗೆ ಲಾಂಗ್‍ನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿ ಬೆದರಿಸಿದ್ದಲ್ಲದೆ, ಸಾರ್ವಜನಿಕರ ವಾಹನದ ಗಾಜುಗಳನ್ನು ಒಡೆದು ಚಾಲಕರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಸ್ವರೂಪ್‍ಕೃಷ್ಣ ಮತ್ತು ಮಿಥುನ್ ಎಂಬುವರಿಗೆ ಲಾಂಗ್‍ನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿ ಭಯವನ್ನುಂಟು ಮಾಡಿದ್ದರು.
ಕೃತ್ಯವನ್ನು ಮೊಬೈಲ್‍ನಲ್ಲಿ ವಿಡಿಯೋ ಮಾಡುತ್ತಿದ್ದ ಶ್ರೀಕಾಂತ್ ಎಂಬುವರಿಗೂ ಕೂಡ ಲಾಂಗ್‍ನಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾರೆ. ತದನಂತರ ಸುಬ್ರಹ್ಮಣ್ಯಪುರ ವ್ಯಾಪ್ತಿಯ ಕೋಣನಕುಂಟೆ ಮುಖ್ಯರಸ್ತೆಯ ಡಿ.ಕೆ.ಚಿಕನ್ ಸಮೀಪ ಸಂಜೆ 6.45ರಿಂದ 7 ಗಂಟೆ ಸಮಯದಲ್ಲಿ ಬೊಲೆರೋ ಮ್ಯಾಕ್ಸಿ ಟ್ರಕ್ ವಾಹನ ಚಾಲಕನನ್ನು ಅಡ್ಡಗಟ್ಟಿ ಗಾಜನ್ನು ಜಖಂಗೊಳಿಸಿ ಚಾಲಕನ ಕೊಲೆಗೆ ಯತ್ನಿಸಿದ್ದಾರೆ.
ಈ ಸ್ಥಳದಲ್ಲಿಯೂ ಸಹ ಸಾರ್ವಜನಿಕರಿಗೆ ಮಾರಕಾಸ್ತ್ರಗಳನ್ನು ತೋರಿಸಿ ಭಯವನ್ನುಂಟು ಮಾಡಿ ಸಾರ್ವಜನಿಕರಿಗೆ ಭೀತಿ ಹುಟ್ಟಿಸಿದ್ದಾರೆ. ಈ ಸಂಬಂಧ ಸುಬ್ರಹ್ಮಣ್ಯಪುರ ಮತ್ತು ಕೋಣನಕುಂಟೆ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಹಲ್ಲೆ, ಕೊಲೆ ಯತ್ನ, ದಾಂಧಲೆ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡು ಸಿಸಿ ಕ್ಯಾಮಾರ ಪರಿಶೀಲಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಡಿಸಿಪಿ ಅಣ್ಣಾಮಲೈ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ