ಗ್ರಾಮೀಣ ಭಾಗದ ಕಲಾತಂಡಗಳು ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆಯುವಂತಾಗಬೇಕು

ಹುಳಿಯಾರು

     ಗ್ರಾಮೀಣ ಪ್ರದೇಶದಲ್ಲಿ ಕಲೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ ಭಾಗದಲ್ಲಿ ರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಕರ್ನಾಟಕದ ಸದಸ್ಯ ನಂಜುಂಡಸ್ವಾಮಿ ತೊಟ್ಟವಾಡಿ ಹೇಳಿದರು.

        ಹುಳಿಯಾರಿನಲ್ಲಿ ಮಾತಾ ಚಾರಿಟಬಲ್ ಟ್ರಸ್ಟ್ ಹಾಗೂ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರು ಇವರ ಸಹಯೋಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಧ್ಯಾನ ನಗರಿಯ ಸೇವಾಲಾಲ್ ಸಾಂಸ್ಕೃತಿಕ ಸದನದಲ್ಲಿ ರಾಷ್ಟ್ರೀಯ ನವರಾತ್ರಿ ಸಾಂಸ್ಕೃತಿಕ ಉತ್ಸವ-2018 ರಲ್ಲಿ ಮಾತನಾಡಿದ ಅವರು ರಾಷ್ಟ್ರದಲ್ಲಿ ಪ್ರಖ್ಯಾತಿ ಪಡೆದಂತಹ ಕಲಾವಿದರುಗಳು, ಕಲಾ ತಂಡಗಳು ಹುಳಿಯಾರಿಗೆ ಬರುತ್ತಿದ್ದು ಅದೇ ರೀತಿ ಇಲ್ಲಿನ ಕಲಾವಿದರು ರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮ ಕೊಡುವಂತಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.

      ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಜನಪದ ಕಲೆಗಳಿದ್ದು ಇಲ್ಲಿನ ಹೆಸರುವಾಸಿಯಾಗಿರುವ ಕಲಾವಿದರು ಕಲಾತಂಡಗಳು ಬಹಳಷ್ಟಿದ್ದು ಅವುಗಳು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವ ನಿಟ್ಟಿನಲ್ಲಿ ಇವರನ್ನು ಪರಿಚಯಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

       ಪ್ರಖ್ಯಾತ ಕಲಾ ತಂಡಗಳಾದ ಕೇರಳದ ಅನುಪಮಾ ಮೆನನ್, ಸಾಣೇಹಳ್ಳಿಯ ಬಿದನೂರು ಸಹೊದರಿಯರು,ತಮಿಳುನಾಡಿನ ಟಿ.ಶಾಂತಿ, ಬೆಂಗಳೂರಿನ ಅಪರ್ಣಾ ಮೆನನ್, ಸುಮಾ ರಾಜೇಶ್, ಕೇರಳದ ಅನುಪಮಾ ಮೆನನ್ ಮತ್ತಿತರ ತಂಡಗಳಿಂದ ಭರತನಾಟ್ಯ, ಮೋಹಿನಿ ಅಟ್ಟಂ, ಕರಗಂ, ಕೀಲು ಕುದುರೆ ಮುಂತಾದ ವಿಭಿನ್ನವಾದ ಕಾರ್ಯಕ್ರಮಗಳು ಉತ್ಸವದಲ್ಲಿ ನಡೆಯಲಿವೆ ಎಂದರು. ಹುಳಿಯಾರಿನ ಭಜನಾ ತಂಡಗಳು ವಿಶಿಷ್ಟವಾಗಿದ್ದು ರಾಜ್ಯದಲ್ಲಿ ಹೆಸರುವಾಸಿಯಾಗಿದೆ ಎಂದರು.

         ಹುಳಿಯಾರಿನ ಸಾಮಾಜಿಕ ಹೋರಾಟಗಾರ್ತಿ ಜಯಲಕ್ಷ್ಮೀ ಮಾತನಾಡಿ ಮಹಿಳೆಯರಿಗೆ ವೇದಿಕೆಯೇ ಸಿಗದಿದ್ದ ವೇಳೆಯಲ್ಲಿ ಇಲ್ಲಿ ವೇದಿಕೆ ನೀಡಿ ಆದ್ಯತೆ ಕೊಡುತ್ತಿರುವುದು ಶ್ಲಾಘನೀಯ ಎಂದರು. ಎಲ್ಲರೂ ಮೊಬೈಲ್ ಪ್ರಪಂಚಕ್ಕೆ ಮಾರುಹೋಗುತ್ತಿದ್ದು ಭಜನೆಯಂತಹ ಕಲೆಗಳು ಅಪರೂಪವಾಗುತ್ತಿದೆ ಎಂದರು.

        ಸಾಣೆಹಳ್ಳಿ ಮಠದ ಡಾ.ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ, ವರ್ತಕ ನಟರಾಜು ಮಾತನಾಡಿ ಹುಟ್ಟೂರು ಅನ್ನುವ ಅಭಿಮಾನದಿಂದ ಗಂಗಾಧರ್ ಅವರು ರಾಷ್ಟ್ರೀಯ ಮಟ್ಟದಲ್ಲಿ ನಡೆಯುವಂತಹ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶವಾದ ಹುಳಿಯಾರಿನಲ್ಲಿ ಆಯೋಜಿಸುತ್ತಿದ್ದು ಅವರ ಶ್ರಮ ಸಾರ್ಥಕವಾಗಿ ಎಂದರು.

       ಈ ಸಂದರ್ಭದಲ್ಲಿ ಕೊಬ್ಬರಿ ವ್ಯಾಪಾರಿ ಮರಳಪ್ಪ, ಹುಳಿಯಾರು ಪಿಎಸ್‍ಐ ಕೆ.ಸಿ.ವಿಜಯ ಕುಮಾರ್, ವ್ಯವಸ್ಥಾಪಕ ಧರ್ಮದರ್ಶಿ ಗಂಗಾಧರ್, ರಮೇಶ್ ಪೂಜಾರಿ, ಸುಕನ್ಯಾ ಬಾಯಿ, ಸಾಹಿತ್ಯ ಪೂಜಾರಿ ಮತ್ತಿತರರು ಪಾಲ್ಗೊಂಡಿದ್ದರು. ಮಲ್ಲಿಕಾರ್ಜುನ ಕೆಂಕೆರೆ ಅವರ ಸ್ವರ ಸಿಂಚನ ತಂಡದಿಂದ ಸುಗಮ ಸಂಗೀತ ನಡೆಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link