ವಾಲ್ಮೀಕಿ ಜಯಂತಿ;ಕಲಾತಂಡಗಳ ಮೆರವಣಿಗೆ

ಚಿತ್ರದುರ್ಗ:

       ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಬುಧವಾರ ನಡೆದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ವಿವಿಧ ಜಾನಪದ ಕಲಾ ತಂಡಗಳ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ನಡೆಯಿತು.

      ಹೊಳಲ್ಕೆರೆ ರಸ್ತೆಯಲ್ಲಿರುವ ಕನಕ ವೃತ್ತದಿಂದ ಹೊರಟ ಮೆರವಣಿಗೆಯಲ್ಲಿ ಗೊಂಬೆ ಕುಣಿತ, ಸೋಮನ ಕುಣಿತ, ಕೀಲುಕುದುರೆ, ಖಾಸಾಬೇಡರ ಪಡೆ, ಡೊಳ್ಳು, ತಮಟೆ, ಉರುಮೆ ವಾದ್ಯಗಳು ಮೇಳೈಸಿದವು. ವಾಲ್ಮೀಕಿ ಭಾವಚಿತ್ರವುಳ್ಳ ಕೇಸರಿ ಭಾವುಟಗಳನ್ನು ಕೈಯಲ್ಲಿ ಹಿಡಿದಿದ್ದ ಯುವಕರು ಗುಂಪು ಗುಂಪಾಗಿ ಕುಣಿದು ಮೆರವಣಿಗೆಯಲ್ಲಿ ಕುಪ್ಪಳಿಸಿದರು. ಮೆರವಣಿಗೆ ಮಧ್ಯದಲ್ಲಿ ಅಲ್ಲಲ್ಲಿ ಮಂಗಳಮುಖಿಯರು ಯುವಕರ ಜೊತೆಗೂಡಿ ಡೊಳ್ಳಿನ ಸದ್ದಿಗೆ ಹೆಜ್ಜೆ ಹಾಕಿದರು.

       ವಾಲ್ಮೀಕಿ ಪ್ರತಿಮೆ ಹಾಗೂ ಬೃಹತ್ ಭಾವಚಿತ್ರ ಮೆರವಣಿಗೆಯಲ್ಲಿ ಆಕರ್ಷಣೀಯವಾಗಿತ್ತು. ನೂರಾರು ವಿದ್ಯಾರ್ಥಿಗಳು, ಯುವಕರು, ಗ್ರಾಮೀಣ ಪ್ರದೇಶದವರು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

      ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ತಾಲೂಕು ನಾಯಕ ಸಮಾಜದ ಅಧ್ಯಕ್ಷ ಬಿ.ಕಾಂತರಾಜ್, ಚಿತ್ರದುರ್ಗ ನಾಯಕ ಸಮಾಜದ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ನಗರಸಭೆ ಸದಸ್ಯ ದೀಪಕ್, ಮಾಜಿ ಸದಸ್ಯರುಗಳಾದ ಸಿ.ಟಿ.ರಾಜೇಶ್, ತಿಪ್ಪೇಸ್ವಾಮಿ, ಮಲ್ಲಿಕಾರ್ಜುನ್ ಸೇರಿದಂತೆ ನಾಯಕ ಸಮಾಜದ ಅನೇಕ ಮುಖಂಡರುಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link