ಹೊಸಪೇಟೆ :
ಕೋವಿಡ್-19 ಸಂಕಷ್ಟದ ಸಮಯದಲ್ಲೂ ಸರ್ಕಾರದ ಮಟ್ಟದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಕೋವಿಡ್ ಹೆಸರಿನಲ್ಲಿ ಹಣ ಲೂಟಿ ಮಾಡಲಾಗುತ್ತಿದೆ. ಕೇವಲ ಅಧಿಕಾರಕ್ಕಾಗಿ ಮತ್ತು ಅದರಿಂದ ಹಣ ಮಾಡುವುದರ ಬಗ್ಗೆಯಷ್ಟೇ ಜೆ.ಸಿ.ಬಿ. ಪಕ್ಷಗಳ ಗಮನವಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ “ಚಲಿಸು ಕರ್ನಾಟಕ “ಹೆಸರಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಇದೇ ಸೆ.14ರಂದು ಕೋಲಾರದಿಂದ ಪ್ರಾರಂಭವಾಗಿ ರಾಜ್ಯದಾದ್ಯಂತ 2,700 ಕಿ.ಮೀ. ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಬಳ್ಳಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ.ಯ. ಗಣೇಶ ಹೇಳಿದರು.
ಇಲ್ಲಿನ ಅಮರಾವತಿ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪಕ್ಷದ ಬಳ್ಳಾರಿ ಜಿಲ್ಲಾ ಘಟಕ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕರ್ನಾಟಕವು ಪ್ರಸ್ತುತ ಕೊರೋನಾ ವೈರಸ್‍ನಿಂದ ನಲುಗಿದಂತೆ, ಭ್ರಷ್ಟ ರಾಜಕೀಯ ಮತ್ತು ಆಡಳಿತ ವ್ಯವಸ್ಥೆ ಕಳೆದ ಕೆಲವು ದಶಕಗಳಿಂದ ನಿರಂತರವಾಗಿ ಸೊರಗಿದೆ. ಈ ಭ್ರಷ್ಟ ವ್ಯವಸ್ಥೆಯಿಂದ ನಾಡಿನ ಮತ್ತು ಜನರ ಸಂಪತ್ತು ಲೂಟಿಯಾಗುತ್ತಿದೆ. ಕೊರೋನಾ ವೈರಸ್ ಸೋಂಕು ನಮ್ಮಲ್ಲಿನ ಅವ್ಯವಸ್ಥೆ ಮತ್ತು ಅಕ್ರಮಗಳನ್ನು ಹೊರ ಹಾಕಿದೆ, ಅದರಲ್ಲೂ ಆರೋಗ್ಯ ಮತ್ತು ಆಡಳಿತ ವ್ಯವಸ್ಥೆಗಳು ಯಾವ ಮಟ್ಟದಲ್ಲಿ ಅಧೋಗತಿ ತಲುಪಿದೆ ಎಂದು ತೋರಿಸಿದೆ.
ಒಂದೆಡೆ ನಿರಂತರವಾಗಿ ಅಕ್ರಮ ಮರಳು, ಕಲ್ಲು, ಅದಿರು ಗಣಿಗಾರಿಕೆ ನಡೆಯುತ್ತಿದ್ದರೆ, ಜನಸಾಮಾನ್ಯರು ಮರಳು ಸಿಗದೆ ಪರದಾಡುತ್ತಿದ್ದಾರೆ. ರೈತರು ಬರ-ನೆರೆಯಿಂದ ಸಂಕಷ್ಟಕ್ಕೊಳಗಾಗಿದ್ದಾರೆ. ಈ ಎಲ್ಲಾ ಪರಿಸ್ಥಿತಿಗಳನ್ನು ಸುಧಾರಣೆಗೆ ತರಲು ಈ ಸೈಕಲ್ ಜಾಥಾ ಪ್ರಮುಖ ಪಾತ್ರ ವಹಿಸಲಿದೆ ಎಂದು ತಿಳಿಸಿದರು.
“ಚಲಿಸು ಕರ್ನಾಟಕ” ಸೈಕಲ್ ಯಾತ್ರೆಯು ಮೂರು ಹಂತಗಳಲ್ಲಿ ಇದೇ ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ನಡೆಯಲಿದೆ. ಮೊದಲ ಹಂತದ 15 ದಿನಗಳ ಯಾತ್ರೆಯು ಸೆಪ್ಟೆಂಬರ್ 14, 2020 ರಂದು ಕೋಲಾರದಲ್ಲಿ ಆರಂಭವಾಗಿ ಚಿಂತಾಮಣಿ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ (ಚಿಕ್ಕಬಳ್ಳಾಪುರ ಜಿಲ್ಲೆ), ದೇವನಹಳ್ಳಿ, ಹೊಸಕೋಟೆ (ಬೆಂಗಳೂರು ಗ್ರಾಮಾಂತರ ಜಿಲ್ಲೆ), ಸರ್ಜಾಪುರ, ಚಂದಾಪುರ ಮತ್ತು ಆನೇಕಲ್ (ಬೆಂಗಳೂರು ನಗರ ಜಿಲ್ಲೆ), ಹಾರೋಹಳ್ಳಿ, ರಾಮನಗರ ಮತ್ತು ಚನ್ನಪಟ್ಟಣ (ರಾಮನಗರ ಜಿಲ್ಲೆ), ಮದ್ದೂರು ಮತ್ತು ಮಂಡ್ಯ (ಮಂಡ್ಯ ಜಿಲ್ಲೆ), ಚಾಮರಾಜನಗರ, ನಂಜನಗೂಡು, ಮೈಸೂರು, ಹುಣಸೂರು ಮತ್ತು ಪಿರಿಯಾಪಟ್ಟಣ (ಮೈಸೂರು ಜಿಲ್ಲೆ), ಕುಶಾಲನಗರ, ಸೋಮವಾರಪೇಟೆ ಮತ್ತು ಶನಿವಾರಸಂತೆ (ಕೊಡಗು ಜಿಲ್ಲೆ), ಅರಕಲಗೂಡು, ಹಾಸನ ಮತ್ತು ಗಂಡಸಿ (ಹಾಸನ ಜಿಲ್ಲೆ), ತಿಪಟೂರು ಮತ್ತು ಹುಳಿಯಾರು (ತುಮಕೂರು ಜಿಲ್ಲೆ), ಹಿರಿಯೂರು (ಚಿತ್ರದುರ್ಗ ಜಿಲ್ಲೆ) ಮೂಲಕ ತುಮಕೂರು ಜಿಲ್ಲೆಯ ಶಿರಾದಲ್ಲಿ ಸೆಪ್ಟೆಂಬರ್ 28 ರಂದು ಸಮಾರೋಪಗೊಳ್ಳಲಿದೆ ಎಂದರು.
ತಾಲೂಕು ಉಪಾಧ್ಯಕ್ಷ ಪಿ. ಅಂಜಿನಿ ಮಾತನಾಡಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾತೈಲದ ಬೆಲೆ ಕುಸಿದಿದ್ದರೂ, ದೇಶದಲ್ಲಿ ಮತ್ತು ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಇಷ್ಟೊಂದು ಪ್ರಮಾಣದಲ್ಲಿ ತೆರಿಗೆ ಸಂಗ್ರಹಿಸುತ್ತಿದ್ದರೂ ಬೊಕ್ಕಸ ಮಾತ್ರ ಖಾಲಿ. ಕೋವಿಡ್‍ನಿಂದ ಜನರು ಮತ್ತಷ್ಟು ಸಂಕಷ್ಟಕ್ಕೆ ಈಡಾಗಿದ್ದರೆ, ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡಿದ್ದರೆ, ಉದ್ಯಮಗಳು, ವ್ಯಾಪಾರ-ವಹಿವಾಟು ಕುಂಠಿತವಾಗಿವೆ. ಈ ಸಂದರ್ಭದಲ್ಲಿ ಜನರಿಗೆ ಸ್ಪಂದಿಸಬೇಕಾದ ಸರ್ಕಾರ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದಾರೆ ಎಂದು ಹೊಸಪೇಟೆ ತಾಲೂಕು ಉಪಾಧ್ಯಕ್ಷ ಪಿ. ಅಂಜಿನಿ ಆಪಾದಿಸಿದರು.
ತಾಲೂಕು ಪ್ರಧಾನ ಕಾರ್ಯದರ್ಶಿ ದಲ್ಲಾಳಿ ಹುಸೇನ್ ಮೌಲ ಮಾತನಾಡಿ, ಎರಡನೇ ಹಂತದ “ಚಲಿಸು ಕರ್ನಾಟಕ” ಯಾತ್ರೆ ಅಕ್ಟೋಬರ್ 5 ರಿಂದ ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದ ಬಳ್ಳಾರಿ, ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರ್ಗಿ, ಬೀದರ್, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಯಾತ್ರೆಯನ್ನು ಕೈಗೊಳ್ಳಲಾಗುವುದು. ನವೆಂಬರ್ ತಿಂಗಳ 23 ರಿಂದ ಮೂರನೇ ಹಂತದ ಯಾತ್ರೆಯು ಉತ್ತರ ಕರ್ನಾಟಕ, ಮಲೆನಾಡು ಮತ್ತು ಕರಾವಳಿ ಭಾಗದ ಬೆಳಗಾವಿ, ಧಾರವಾಡ, ಹಾವೇರಿ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಯಾತ್ರೆಯನ್ನು ಕೈಗೊಳ್ಳಲಾಗುವುದು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕು ಅಧ್ಯಕ್ಷ ಹರಕುಣಿ ಗಣೇಶ, ಹೊಸಪೇಟೆ ತಾಲೂಕು ಸಂಘಟನಾ ಕಾರ್ಯದರ್ಶಿ ಚಲವಾದಿ ಆನಂದ್, ಕಾರ್ಯದರ್ಶಿ ಗುಜ್ಜಲ್ ಸುರೇಶ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
