ಬೆಂಗಳೂರು :
ಕಳೆದ ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಾಯಕ ಡಿ.ಕೆ.ಶಿವಕುಮಾರ್ ನೇಮಕಗೊಂಡಿದ್ದಾರೆ.ಅದೇ ಕಾಲಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನೀಡಿದ್ದ ರಾಜೀನಾಮೆಯನ್ನು ಕಾಂಗ್ರೆಸ್ ಹೈಕಮಾಂಡ್ ತಿರಸ್ಕರಿಸಿದ್ದು,ಶಾಸಕಾಂಗ ಪಕ್ಷದ ನಾಯಕರಾಗಿ ಹಾಗೂ ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿ ಅವರನ್ನೇ ಮುಂದುವರಿಸಿದೆ.
ದಿನೇಶ್ ಗುಂಡೂರಾವ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ಆಯ್ಕೆ ಮಾಡುವ ಮೂಲಕ ಕಗ್ಗಂಟಾಗಿದ್ದ ಸಮಸ್ಯೆಯನ್ನು ಕಾಂಗ್ರೆಸ್ ಹೈಕಮಾಂಡ್ ಪರಿಹರಿಸಿದೆ.
ಹಾಗೆಯೇ ಪಕ್ಷದ ಶಾಸಕಾಂಗ ನಾಯಕನ ಸ್ಥಾನ ಮತ್ತು ವಿಧಾನಸಭೆಯ ಪ್ರತಿಪಕ್ಷ ನಾಯಕ ಸ್ಥಾನವನ್ನು ವಿಭಜಿಸಬೇಕು ಎಂಬ ಕೂಗಿಗೆ ಮನ್ನಣೆ ನೀಡದೆ ಇರುವ ಮೂಲಕ ಪಕ್ಷದಲ್ಲಿ ಉಂಟಾಗಬಹುದಾಗಿದ್ದ ದೊಡ್ಡ ಬಿಕ್ಕಟ್ಟನ್ನು ಅದು ಪರಿಹರಿಸಿಕೊಂಡಿದೆ.
ಈ ಮಧ್ಯೆ ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ಈಶ್ವರ ಖಂಡ್ರೆ,ಸತೀಶ್ ಜಾರಕಿಹೊಳಿ ಮತ್ತು ಸಲೀಂ ಅಹ್ಮದ್ ಅವರನ್ನು ನೇಮಕ ಮಾಡಿದೆ.ವಿಧಾನಸಭೆಯ ಮುಖ್ಯ ಸಚೇತಕ ಹುದ್ದೆಗೆ ಮಾಜಿ ಮುಖ್ಯಮಂತ್ರಿ,ದಿವಂಗತ ಧರ್ಮಸಿಂಗ್ ಅವರ ಪುತ್ರ,ಶಾಸಕ ಅಜಯ್‍ಸಿಂಗ್ ಅವರನ್ನು ನೇಮಕ ಮಾಡಿರುವ ಹೈಕಮಾಂಡ್,ವಿಧಾನಪರಿಷತ್ತಿನ ಮುಖ್ಯ ಸಚೇತಕ ಹುದ್ದೆಗೆ ಎಂ.ನಾರಾಯಣ ಸ್ವಾಮಿ ಅವರನ್ನು ನೇಮಕ ಮಾಡಿದೆ.
ಅಲ್ಲಿಗೆ ಜಾತಿವಾರು ಲೆಕ್ಕಾಚಾರಗಳ ಮೂಲಕ ಪಕ್ಷದ ಪ್ರಮುಖ ಹುದ್ದೆಗಳನ್ನು ಹಂಚಿರುವ ಅದು ಮುಂದಿನ ರಾಜಕೀಯ ಬೆಳವಣಿಗೆಗಳಿಗೆ ರಾಜ್ಯ ಕಾಂಗ್ರೆಸ್ ಪಕ್ಷವನ್ನು ಅಣಿಗೊಳಿಸಿದೆ.ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಒಕ್ಕಲಿಗರು,ಶಾಸಕಾಂಗ ನಾಯಕ ಹಾಗೂ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಹಿಂದುಳಿದವರು,ಕಾರ್ಯಾಧ್ಯಕ್ಷ ಹುದ್ದೆಗಳಿಗೆ ಲಿಂಗಾಯತ,ನಾಯಕ,ಮುಸ್ಲಿಮರನ್ನು ತಂದು ಕೂರಿಸಿರುವ ಅದು,ವಿಧಾನಸಭೆಯ ಮುಖ್ಯಸಚೇತಕ ಹುದ್ದೆಗೆ ಹಿಂದುಳಿದ ಸಮುದಾಯದವರನ್ನು ತಂದು ಕೂರಿಸಿದೆ.
ವಿಧಾನಪರಿಷತ್ತಿನ ಮುಖ್ಯ ಸಚೇತಕ ಹುದ್ದೆಗೆ ಒಕ್ಕಲಿಗ ಸಮುದಾಯದವರನ್ನು ತಂದು ಕೂರಿಸಿರುವುದು ಕೂಡಾ ಅದರ ಜಾತಿವಾರು ಲೆಕ್ಕಾಚಾರಕ್ಕೆ ಪೂರಕವಾಗಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆಶಿ ಅವರನ್ನು ತಂದು ಕೂರಿಸಲು ಹೈಕಮಾಂಡ್ ಮತ್ತು ರಾಜ್ಯ ಕಾಂಗ್ರೆಸ್‍ನ ಒಂದು ಗುಂಪು ಬಯಸಿದ್ದರೆ,ಎಂ.ಬಿ.ಪಾಟೀಲರನ್ನು ಆ ಜಾಗಕ್ಕೆ ತಂದು ಕೂರಿಸಿದರೆ ಲಾಭ ಹೆಚ್ಚು ಎಂದು ಸಿದ್ಧರಾಮಯ್ಯ ಬಣ ವಾದಿಸಿತ್ತು.
ಇದೇ ಕಾರಣಕ್ಕಾಗಿ ಸಿದ್ಧರಾಮಯ್ಯ ವಿರುದ್ಧ ಕನಲಿದ್ದ ಪಕ್ಷದಲ್ಲಿದ್ದ ಒಂದು ಗುಂಪು ಪಕ್ಷದ ಶಾಸಕಾಂಗ ನಾಯಕನ ಸ್ಥಾನ ಹಾಗೂ ವಿಧಾನಸಭೆಯ ಅಧ್ಯಕ್ಷ ಸ್ಥಾನವನ್ನು ವಿಭಜಿಸಬೇಕು ಎಂದು ಹೈಕಮಾಂಡ್ ವರಿಷ್ಟರ ಮೇಲೆ ಒತ್ತಡ ಹೇರಿತ್ತು.
ಆದರೆ ಇಂತಹ ವಿಭಜನೆ ನಡೆದರೆ ಪರಿಣಾಮ ವ್ಯತಿರಿಕ್ತವಾಗಬಹುದು ಎಂಬ ಸಂದೇಶ ಸಿದ್ಧರಾಮಯ್ಯ ಗ್ಯಾಂಗಿನಿಂದ ರವಾನೆಯಾಗುತ್ತಿದ್ದಂತೆಯೇ ಈ ಪ್ರಸ್ತಾಪಕ್ಕೆ ತಡೆ ಒಡ್ಡಿರುವ ವರಿಷ್ಟರು ಏಕಕಾಲಕ್ಕೆ ಡಿಕೆಶಿ ಹಾಗೂ ಸಿದ್ಧರಾಮಯ್ಯ ಅವರನ್ನು ಫ್ರಂಟ್‍ಲೈನಿಗೆ ತಂದು ನಿಲ್ಲಿಸಿದ್ದಾರೆ.
ಶ್ರಮಿಸುತ್ತೇನೆ:ಡಿಕೆಶಿ
ಈ ಮಧ್ಯೆ ತಾವು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡ ವಿಷಯ ಪ್ರಕಟವಾಗುತ್ತಿದ್ದಂತೆಯೇ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್,ಪಕ್ಷದ ವರಿಷ್ಟರು ನನ್ನ ಮೇಲೆ ವಿಶ್ವಾಸವಿಟ್ಟು ಈ ಜಾಗಕ್ಕೆ ನೇಮಕಗೊಳಿಸಿದ್ದಾರೆ.ಅವರ ವಿಶ್ವಾಸಕ್ಕೆ ಪೂರಕವಾಗಿ ಕೆಲಸ ಮಾಡುತ್ತೇನೆ ಎಂದು ನುಡಿದರು.
ರಾಜ್ಯದಲ್ಲಿ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದ ಅವರು,ಈ ಜಾಗದಲ್ಲಿ ಕುಳಿತು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯುತ್ತೇನೆ.ಜನವಿರೋಧಿ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಅಣಿಯಾಗುತ್ತೇನೆ ಎಂದರು.
ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ.ಆದರೆ ನನ್ನನ್ನು ಗುರುತಿಸಿ ಪಕ್ಷ ಹಲವು ಅಧಿಕಾರಗಳನ್ನು ನೀಡಿದೆ.ಈಗ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ನೀಡಿದೆ.ಹೀಗೆ ನನಗೆ ಗುರುತರ ಜವಾಬ್ದಾರಿ ನೀಡಿದ ಪಕ್ಷದ ನಂಬಿಕೆಯನ್ನು ಹುಸಿಗೊಳಿಸುವುದಿಲ್ಲ ಎಂದರು.
ಸಿದ್ಧರಾಮಯ್ಯ ಅವರೂ ಸುದ್ದಿಗಾರರೊಂದಿಗೆ ಮಾತನಾಡಿ,ಪಕ್ಷದ ನಿರೀಕ್ಷೆಯಂತೆ ಕೆಲಸ ಮಾಡುತ್ತೇನೆ.ಯಡಿಯೂರಪ್ಪ ನೇತೃತ್ವದ ಸರ್ಕಾರ ಸಂಪೂರ್ಣ ವಿಫಲವಾಗಿದ್ದು ಈ ಹಿನ್ನೆಲೆಯಲ್ಲಿ ಅದರ ವಿರುದ್ದ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೇನೆಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
