ಬೆಂಗಳೂರು-
ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತನ್ನ ಸ್ನೇಹಿತನ ವಿರುದ್ಧವೇ ದೂರು ನೀಡಿ ಪ್ರಕರಣದಿಂದ ದೂರ ಸರಿದಿದ್ದಾರೆ
ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಸ್ನೇಹಿತ ರಾಯ್ ಅಂತೋಣಿ ವಿರುದ್ಧ ದರ್ಶನ್ ಅವರು ಖಾಸಗಿ ಗನ್‍ಮೆನ್ ಲಕ್ಷ್ಮಣ್ ಮೂಲಕ ಮೈಸೂರು ಪೊಲೀಸರಿಗೆ ದೂರು ಕೊಡಿಸಿ ಪ್ರಕರಣದಿಂದ ದೂರ ಉಳಿದಿದ್ದಾರೆ.
ಮೈಸೂರಿನ ಬಳಿ ಸೋಮವಾರ ಹಿನಕಲ್ ಬಳಿ ಮುಂಜಾನೆ 2.30ರ ವೇಳೆ ಚಾಲಕ ರಾಯ್ ಅಂತೋಣಿ ಅವರು ಅತಿ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದು ರಿಂಗ್ ರಸ್ತೆಯ ಜಂಕ್ಷನ್‍ನ ತಿರುವಿನಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದಾರೆ.
ಕಾರಿನಲ್ಲಿದ್ದ ನನಗೆ, ಪ್ರಜ್ವಲ್ ಹಾಗೂ ದೇವರಾಜ್ ಅವರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇವೆ. ಅಪಘಾತಕ್ಕೆ ಕಾರು ಚಲಾಯಿಸುತ್ತಿದ್ದ ರಾಯ್ ಅಂತೋಣಿ ಕಾರಣವಾಗಿದ್ದಾರೆಂದು ದರ್ಶನ್ ದೂರಿನಲ್ಲಿ ತಿಳಿಸಿದ್ದಾರೆ.
ದರ್ಶನ್ ಚೇತರಿಕೆ
ಅಪಘಾತದಲ್ಲಿ ಗಾಯಗೊಂಡು ಬಲಗೈ ಮೂಳೆ ಮುರಿದಿದ್ದ ದರ್ಶನ್ ಅವರಿಗೆ ಸಣ್ಣ ಪ್ಲೇಟ್ ಅಳವಡಿಸಿ, 28 ಹೊಲಿಗೆ ಹಾಕಿದ್ದು, ಚೇತರಿಸಿಕೊಳ್ಳುತ್ತಿರುವ ಅವರು, ಒಂದೆರೆಡು ದಿನಗಳಲ್ಲಿ ಮನೆಗೆ ಮರಳುವ ಸಾಧ್ಯತೆ ಇದೆ. ಪ್ರಜ್ವಲ್ ಹಾಗೂ ದೇವರಾಜ್ ಸಂಪೂರ್ಣ ಗುಣಮುಖರಾಗಿದ್ದು, ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ.
ಈ ನಡುವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದರ್ಶನ್ ಅವರನ್ನು ತಾಯಿ ಮೀನಾ ತೂಗುದೀಪ್, ಪುತ್ರಮಿನೀಶ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ದರ್ಶನ್ ಅವರನ್ನು ನೋಡಲು ಸಾವಿರಾರು ಮಂದಿ ಅಭಿಮಾನಿಗಳು ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಬಳಿ ಜಮಾಯಿಸುತ್ತಿರುವುದರಿಂದ ರಾಜ್ಯ ಮೀಸಲುಪಡೆಯ ತುಕಡಿಗಳನ್ನು ನಿಯೋಜಿಸಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದರ್ಶನ್ ಅವರ ಫೋಟೊ ತೆಗೆಯುವುದಾಗಲಿ, ವೀಡಿಯೊ ಮಾಡುವುದಾಗಲಿ ನಿರ್ಬಂಧಿಸಲಾಗಿದ್ದು, ಅವರ ಖಾಸಗಿ ಸಿಬ್ಬಂದಿ ಮೊಬೈಲ್ ಇಟ್ಟುಕೊಂಡು ದರ್ಶನ್ ವಾರ್ಡ್ ಪ್ರವೇಶಿಸುವುದನ್ನು ತಡೆಯುತ್ತಿದ್ದಾರೆ.
ಪೊಲೀಸರಿಗೆ ಸಂಕಷ್ಟ
ದರ್ಶನ್ ಅವರು ಅಪಘಾತದಲ್ಲಿ ಗಾಯಗೊಂಡಿದ್ದ ಕಾರನ್ನು ಬಚ್ಚಿಡಲು ಗಸ್ತು ತಿರುಗುತ್ತಿದ್ದ ಪೊಲೀಸರು ನೆರವಾಗಿರುವುದು ಕಂಡು ಬಂದಿದ್ದು, ತನಿಖೆಯಲ್ಲಿ ಅವರಿಗೆ ಸಂಕಷ್ಟ ಎದುರಾಗಲಿದೆ. ಅಪಘಾತಗೊಂಡ ಕಾರನ್ನು ಬಚ್ಚಿಡಲು ಹೆದ್ದಾರಿಯಲ್ಲಿದ್ದ ಗಸ್ತು ಪೊಲೀಸರು ನೆರವಾಗಿರುವ ಅನುಮಾನವಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಮೈಸೂರು ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ. ಅಪಘಾತ ನಂತರ ನಾಪತ್ತೆಯಾಗಿರುವ ಕಾರು ದರ್ಶನ್ ಅವರ ಸ್ನೇಹಿತನ ಶ್ರೀರಂಗಪಟ್ಟಣದ ತೋಟದ ಬಳಿ ಪತ್ತೆಯಾಗಿತ್ತು.