ದಾವಣಗೆರೆ:
ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ ವತಿಯಿಂದ ಇಲ್ಲಿನ ವಿನೋಬ ನಗರದಲ್ಲಿರುವ ಶ್ರೀಮತಿ ಗೌರಮ್ಮ ನರಹರಿಶೇಟ್ ಸಭಾಭವನದಲ್ಲಿ ಜ.5 ಹಾಗೂ 6ರಂದು ರಾಜ್ಯಮಟ್ಟದ ದೈವಜ್ಞ ಬ್ರಾಹ್ಮಣ ಮಹಿಳಾ ಸಮಾವೇಶ ಏರ್ಪಡಿಸಲಾಗಿದೆ ಎಂದು ಮಂಡಳಿ ಅಧ್ಯಕ್ಷೆ ವಿಜಯಾ ವಿಠ್ಠಲಕರ್ ತಿಳಿಸಿದರು.
ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ಕಿ ಜ್ಞಾನೇಶ್ವರಿ ಪೀಠದ ಶ್ರೀಸಚ್ಚಿದಾನಂದ ಜ್ಞಾನೇಶ್ವರಭಾರತೀ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ನಡೆಯುವ ಎರಡು ದಿನಗಳ ಸಮಾವೇಶದಲ್ಲಿ ವಿಚಾರಗೋಷ್ಠಿ, ವಧು-ವರರ ಮಾಹಿತಿ ವಿನಿಮಯ, ಸಾಂಸ್ಕತಿಕ ಸಿಂಚನ, ಕರಕುಶಲ ವಸ್ತು ಪ್ರದರ್ಶನ, ನಾರೀ ರಕ್ಷಾ ಪ್ರದರ್ಶನ ಇರುತ್ತದೆ. ಈ ಸಮಾವೇಶದದಲ್ಲಿ ಸುಮಾರು ನಾಲ್ಕು ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಡಿ.5ರಂದು ಬೆಳಗ್ಗೆ 10.30ಕ್ಕೆ ಶಾಸಕ ಶಾಮನೂರು ಶಿವಶಂಕರಪ್ಪ, ಸಂಸದ ಜಿ.ಎಂ.ಸಿದ್ದೇಶ್ವರ ಸಮಾವೇಶ ಉದ್ಘಾಟಿಸುವರು. ಶಾಸಕ ಎಸ್.ಎ.ರವೀಂದ್ರನಾಥ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಡಾ.ವೆಂಕಟೇಶ ರಾಯ್ಕರ್, ಡಾ.ಸುಧಾ ರಾವ್, ಬ್ರಹ್ಮಕುಮಾರಿ ಭಾರತೀಜಿ, ರಾಮರಾವ್ ರಾಯ್ಕರ್, ಸತ್ಯನಾರಾಯಣ ರಾಯ್ಕರ್, ಮೇಯರ್ ಶೋಭಾ ಪಲ್ಲಾಗಟ್ಟೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ನಂತರ 11.30ರಿಂದ ವಿಚಾರಗೋಷ್ಠಿ, ಸಂಜೆ 4 ಗಂಟೆಯಿಂದ ರಾಜ್ಯಮಟ್ಟದ ಸಾಂಸ್ಕತಿಕ ಸ್ಪರ್ಧೆ ಜರುಗಲಿವೆ ಎಂದು ಅವರು ತಿಳಿಸಿದರು.
ಡಿ.6ರಂದು ಬೆಳಗ್ಗೆ 9.30ಕ್ಕೆ ಪೂರ್ಣಕುಂಭದೊಂದಿಗೆ ಶ್ರೀಗಳನ್ನು ಸ್ವಾಗತಿಸಲಾಗುವುದು. ಶ್ರೀಗಳು ಸಾನಿಧ್ಯ ವಹಿಸಲಿರುವ ಕಾರ್ಯಕ್ರಮದಲ್ಲಿ ಶಿವಮೊಗ್ಗ ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಅನುರಾಧ, ಆರ್.ಎಸ್.ರಾಯ್ಕರ, ಹೇಮಲತಾ ಸತೀಶ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಇದೇ ವೇಳೆ ಸಾಧಕರು, ಗಣ್ಯರು ಹಾಗೂ ದೈವಜ್ಞ ದಾನಿಗಳನ್ನು ಸನ್ಮಾನಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಮಂಡಳಿ ಗೌರವಾಧ್ಯಕ್ಷೆ ನಿರ್ಮಲಾ ಅಣ್ವೇಕರ್, ಉಪಾಧ್ಯಕ್ಷರಾದ ಉಮಾ ರೇವಣಕರ್, ಸುವರ್ಣ ರೇವಣಕರ್, ಕಾರ್ಯದರ್ಶಿ ಶಶಿಕಲಾ ರಾಯ್ಕರ್, ಸಹ ಕಾರ್ಯದರ್ಶಿ ಸಾವಿತ್ರಿ ರಾಯ್ಕರ್, ಖಜಾಂಚಿ ಸುಮತಿ ಪುರುಷನ್, ಸುನಂದಾ, ಸುನೀತಾ, ಪ್ರೇಮಾ, ಕಮಲಾ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
