ದಲಿತರಿಗೆ ಇನ್ನೂ ಸಿಗದ ವಸತಿ ಸೌಲಬ್ಯ

ಚಿತ್ರದುರ್ಗ:

         ಸೀರೆ ಪಂಚೆ ಬಿರಿಯಾನಿ ನೂರು, ಐದು ನೂರು ರೂ.ಗಳಿಗೆ ಎಲ್ಲಿಯವರೆಗೂ ನಿಮ್ಮ ಮತಗಳನ್ನು ಮಾರಿಕೊಳ್ಳುತ್ತೀರೋ ಅಲ್ಲಿಯತನಕ ನಿಮಗೆ ನಿವೇಶನ, ಮನೆ, ವಸತಿ ದೊರಕುವುದಿಲ್ಲವೆಂದು ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಮಂಡ್ಯದ ವೆಂಕಟಗಿರಿಯಯ್ಯ ನಗರದ ನಿವೇಶನ ರಹಿತ ನಿವಾಸಿಗಳನ್ನು ಎಚ್ಚರಿಸಿದರು.

         ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಜಿಲ್ಲಾ ಸಮಿತಿಯಿಂದ ತ.ರಾ.ಸು.ರಂಗಮಂದಿರದಲ್ಲಿ ಶುಕ್ರವಾರ ನಡೆದ ಚಿತ್ರದುರ್ಗ ನಗರದ ನಿವೇಶನ ರಹಿತ ನಿವಾಸಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

        ದೇಶಕ್ಕೆ ಸ್ವಾತಂತ್ರ ಬಂದು ಎಪ್ಪತ್ತು ವರ್ಷಗಳಾದರೂ ಇನ್ನು ಸ್ವಂತ ನಿವೇಶನ, ಮನೆ, ವಸತಿ ಸೌಲಭ್ಯಗಳಿಲ್ಲದೆ ಕಷ್ಟದಲ್ಲಿ ಬದುಕು ಜನ ಇದ್ದಾರೆಂದರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ನಾಚಿಕೆಯಾಗಬೇಕು. ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೊಸ ವರ್ಷ ಆಚರಣೆಗೆ ಹೊರದೇಶಕ್ಕೆ ಹೋದರು. ಪ್ರಧಾನಿ ನರೇಂದ್ರಮೋದಿ ಸೂಟು ಬೂಟು ಧರಿಸಿ ವಿದೇಶಗಳನ್ನು ಸುತ್ತುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ರಾಜ್ಯವನ್ನಾಳಿದ ವಕ್ಕಲಿಗರು, ಲಿಂಗಾಯಿತ ಜನಾಂಗದಲ್ಲಿಯೂ ನಿವೇಶನ ಮನೆ ಇಲ್ಲದವರು ಸಾಕಷ್ಟು ಮಂದಿ ಇದ್ದಾರೆ ಎನ್ನುವುದಾದರೆ ದಲಿತರು, ಶೋಷಿತರು, ಅಲ್ಪಸಂಖ್ಯಾತರ ಪಾಡೇನು ಎಂದು ಜನಪ್ರತಿನಿಧಿಗಳನ್ನು ತಡೆದು ಪ್ರಶ್ನಿಸಬೇಕಾಗಿದೆ ಎಂದು ನಿವೇಶನ ರಹಿತರಿಗೆ ತಿಳಿಸಿದರು.

          ನಿವೇಶನ ರಹಿತ ಬಡವರು ಸೂರಿಲ್ಲದೆ ಕಣ್ಣೀರು ಹಾಕುತ್ತಿರುವುದನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಎಸ್.ಬಂಗಾರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರ ಆಶ್ರಯ ಯೋಜನೆಯಡಿ ಎಲ್ಲಾ ಬಡವರಿಗೂ ಮನೆಗಳನ್ನು ಕಟ್ಟಿಸಿಕೊಟ್ಟರು. ಅಂದಿನಿಂದ ಇಲ್ಲಿಯತನಕ ಬೇರೆ ಯಾವ ಮುಖ್ಯಮಂತ್ರಿಯೂ ಅಂತಹ ಜನೋಪಕಾರಿ ಕೆಲಸ ಮಾಡಲಿಲ್ಲ. ದೌರ್ಜನ್ಯ ದಬ್ಬಾಳಿಕೆ ನಡೆಸುವವರ ಕೈಗೆ ಈಗಾಗಲೇ ಅಧಿಕಾರವನ್ನು ಕೊಟ್ಟಿದ್ದೇವೆ. ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಒದಗಿಸುವ ಅರ್ಹರಿಗೆ ಮತ ನೀಡಿ ಎಂದು ಮನವಿ ಮಾಡಿದರು.

         ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ದೇಶಕ್ಕೆ ಸಂವಿಧಾನವನ್ನು ಕೊಡುಗೆಯಾಗಿ ನೀಡಿ ದಲಿತರು ಹಿಂದುಳಿದವರು, ಶೋಷಿತರು, ಅಲ್ಪಸಂಖ್ಯಾತರು ಎಲ್ಲರಿಗೂ ಮೂಲಸೌಲಭ್ಯಗಳು ಸಿಗಬೇಕೆಂಬ ಬಹುದೊಡ್ಡ ಆಸೆ ಯಿಟ್ಟುಕೊಂಡಿದ್ದರು. ಆದರೆ ಇಂದು ದೇಶವನ್ನಾಳುತ್ತಿರುವವರು ಬಡವರ ಯಾವ ಕಷ್ಟಗಳನ್ನು ಕೇಳುತ್ತಿಲ್ಲದಿರುವುದೇ ದೊಡ್ಡ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಮಾಡನಾಯಕನಹಳ್ಳಿ ರಂಗಪ್ಪ ಅಧ್ಯಕ್ಷತೆ ವಹಿಸಿದ್ದರು.

         ರಾಜ್ಯ ಉಪಾಧ್ಯಕ್ಷ ಕೃಷ್ಣಪ್ಪ ಬೆಲ್ಲದಮಡು, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಸ್.ಗಾಳೆಮ್ಮನವರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಮಹದೇವಿ ಮುಕ್ರಿ, ಟಿ.ಬಸವರಾಜ್, ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮಿತಿ ಜಿಲ್ಲಾಧ್ಯಕ್ಷ ಕೆ.ಜಿ.ಅನಂತಮೂರ್ತಿನಾಯ್ಕ, ಹೆಗ್ಗೆರೆ ರಂಗಪ್ಪ, ಪಿ.ಎಂ.ತಿಪ್ಪೇಸ್ವಾಮಿ ವೇದಿಕೆಯಲ್ಲಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap