ಚಳ್ಳಕೆರೆ
ರಾಜ್ಯ ಸರ್ಕಾರದ ಹಲವಾರು ಪರಿಣಾಮಕಾರಿ ಕಾನೂನು ಕ್ರಮಗಳು ಜಾರಿಗೊಳಿಸಿದರೂ ಸಹ ಸಮಾಜದಿಂದ ಅಸ್ಪøಶ್ಯತೆ ಮತ್ತು ಪರಿಶಿಷ್ಟ ಜಾತಿ, ಪಂಗಡಗಳ ಮೇಲೆ ನಡೆಯುವ ದೌರ್ಜನ್ಯವನ್ನು ಸಂಪೂರ್ಣವಾಗಿ ಬೇರು ಸಹಿತ ಕಿತ್ತು ಹಾಕಲು ಸಾಧ್ಯವಾಗಿಲ್ಲ. ಆಧುನಿಕ ಕಾಲದಲ್ಲೂ ಸಹ ಈ ಸಮುದಾಯ ಇನ್ನೂ ಅಸ್ಪøಶ್ಯತೆ ಎಂಬ ಕತ್ತಲಲ್ಲಿ ಬದುಕಬೇಕಿರುವುದು ವಿಷಾದ ಸಂಗತಿ ಎಂದು ಕ್ಷೇತ್ರದ ಶಾಸಕ, ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.
ಅವರು, ಮಂಗಳವಾರ ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಪೊಲೀಸ್ ಇಲಾಖೆ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ನಾಗರೀಕ ಹಕ್ಕು ಸಂರಕ್ಷಣಾ ಅಧಿನಿಯಮ-1955 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ದೌರ್ಜನ್ಯ ಪ್ರತಿಬಂಧ-1989 ಕುರಿತು ಹಮ್ಮಿಕೊಂಡಿದ್ದ ವಿಚಾರ ಗೋಷ್ಠಿ ಹಾಗೂ ಒಂದು ದಿನದ ಕಾರ್ಯಗಾರವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಮಾಜ ಕಲ್ಯಾಣ ಇಲಾಖೆ ದೌರ್ಜನ್ಯ ತಡೆ ಕಾಯ್ದೆ ಹಿನ್ನೆಲೆಯಲ್ಲಿ ದಲಿತ ಸಮುದಾಯಗಳ ಮೇಲೆ ನಡೆಯುತ್ತಿರುವ ಅಮಾನುಷ ಹಲ್ಲೆ, ಶೋಷಣೆ ಹಾಗೂ ದೌರ್ಜನ್ಯ ಕುರಿತು ಚರ್ಚಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಸ್ವಾಗತಾರ್ಹವೆಂದ ಅವರು, ಇಲಾಖೆ ಈ ಸಮುದಾಯದ ಆಶೋತ್ತರಗಳ ಈಡೇರಿಕೆಗೆ ಕಾನೂನು ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ತಾಲ್ಲೂಕಿನ ಹಲವೆಡೆ ಈ ಸಮುದಾಯ ಕೆಲವು ವ್ಯಕ್ತಿಗಳ ಮೇಲೆ ದೌರ್ಜನ್ಯ ನಡೆಯುತ್ತಿರುವ ಬಗ್ಗೆ ಮಾಹಿತಿ ಇದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲಾಗುವುದು. ಈ ಕ್ಷೇತ್ರದ ಶಾಸಕನಾಗಿ ದಲಿತ ಸಮುದಾಯವೂ ಸೇರಿದಂತೆ ಎಲ್ಲಾ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ಯಾವಾಗಲೂ ಸಹಕಾರ ನೀಡುವುದಾಗಿ ತಿಳಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ದೌರ್ಜನ್ಯ ಪ್ರತಿಬಂಧ ಅಧಿನಿಯಮ ಕುರಿತು ಮಾತನಾಡಿದ ವಕೀಲ ಕೆ.ಕುಮಾರ್‍ಜಡೇಕುಂಟೆ, ರಾಜ್ಯ ಸರ್ಕಾರ ಕಳೆದ 30 ವರ್ಷಗಳ ಹಿಂದೆ ಈ ಕಾನೂನನ್ನು ಜಾರಿಗೆ ಗೊಳಿಸಿ ನಿರಂತರವಾಗಿ ದಲಿತ ಸಮುದಾಯದ ಮೇಲೆ ನಡೆಯುತ್ತಿರುವ ಅಮಾನುಷ ದೌರ್ಜನ್ಯಗಳನ್ನು ನಿಯಂತ್ರಿಸಲು 1989ರಲ್ಲಿ ಈ ಕಾನೂನನ್ನು ರೂಪಿಸಲಾಯಿತು. ಪ್ರಾರಂಭದ ಹಂತದಲ್ಲಿ ಈ ಬಗ್ಗೆ ಜಾಗೃತಗೊಂಡ ಕೆಲವು ಮುಖಂಡರು ಪರಿಶಿಷ್ಟ ಜಾತಿಯ ಮೇಲೆ ನಡೆಯುವ ಹಲ್ಲೆ ಹಾಗೂ ದೌರ್ಜನ್ಯ ಪ್ರಕರಣಗಳಿಗೆ ಸ್ವಯಂ ನಿಯಂತ್ರಣಗೊಳ್ಳುವ ಮೂಲಕ ಈ ಸಮುದಾಯಕ್ಕೆ ಸಹಕರಿಸಿದರು.
ನಾಗರೀಕ ಹಕ್ಕು ಸಂರಕ್ಷಣಾ ಅಧಿನಿಯಮ ಕುರಿತು ಮಾತನಾಡಿದ ವಕೀಲರ ಸಂಘದ ಉಪಾಧ್ಯಕ್ಷ ಡಿ.ಬಿ.ಬೋರಯ್ಯ, ಪ್ರತಿಯೊಬ್ಬ ನಾಗರೀಕರ ಜನ ತಂತ್ರದ ವ್ಯವಸ್ಥೆಯಲ್ಲಿ ಚುನಾವಣೆಗೆ ಸ್ಪರ್ಧಿಸಲು ಆರ್ಹನು ಹಾಗೂ ಅದೇ ರೀತಿ ಪ್ರಾಮಾಣಿಕವಾಗಿ ತಮ್ಮದೇಯಾದ ಮತದ ಮೂಲಕ ಉತ್ತಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಪ್ರತಿಯೊಬ್ಬ ನಾಗರೀಕನೂ ಸಹ ಕಾನೂನು ಪರಿಪಾಲನೆಗೆ ಅವಕಾಶ ನೀಡಬೇಕು. ಕಾನೂನಿನಿಂದ ಮಾತ್ರ ನಾವೆಲ್ಲರೂ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವೆಂದರು.
ಜಿಲ್ಲಾ ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಪಿ.ಪ್ರಕಾಶ್‍ಮೂರ್ತಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ರಾಜಕಾರಣಿಯೂ ಜನರಿಂದ ಆಯ್ಕೆಯಾದ ನಂತರ ಈ ಭಾಗದ ಸಮಸ್ಯೆಗಳಿಗೆ ಹೆಚ್ಚು ಆದ್ಯತೆ ನೀಡಿ ಶ್ರಮಿಸಬೇಕಿದೆ. ಅಸ್ಪøಶ್ಯತೆ ಎಂಬುವುದು ಇನ್ನೂ ಜನಮಾನಸದಿಂದ ದೂರವಾಗಿಲ್ಲ. ಇಂತಹ ಆಧುನಿಕತೆಯ ಸ್ಪರ್ಶದಲ್ಲಿರುವ ನಾಗರೀಕ ಸಮಾಜ ದಲಿತ ಸಮುದಾಯದ ಶೋಷಣೆಯ ಬಗ್ಗೆ ಮೌನವಾಗಿರುವುದು ನೋವಿನ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕವಿತಾರಾಮಣ್ಣ, ಉಪಾಧ್ಯಕ್ಷೆ ತಿಪ್ಪಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಗಿರಿಯಪ್ಪ, ಡಿವೈಎಸ್ಪಿ ಎಸ್.ರೋಷನ್ ಜಮೀರ್, ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ, ಪರಿಶಿಷ್ಟ ವರ್ಗದ ಕಲ್ಯಾಣಾಧಿಕಾರಿ ಮಾಲತಿ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್, ತಾಲ್ಲೂಕು ಪಂಚಾಯಿತಿ ಸದಸ್ಯ ಸಣ್ಣ ಸೂರಯ್ಯ, ಸಮರ್ಥರರಾಯ, ನಗರಸಭಾ ಸದಸ್ಯರಾದ ಟಿ.ಮಲ್ಲಿಕಾರ್ಜುನ, ಕವಿತಾಬೋರಣ್ಣ, ಎಸ್.ಜಯಣ್ಣ, ಸುಮಕ್ಕ, ವಿರೂಪಾಕ್ಷಿ, ಟಿ.ಚಳ್ಳಕೆರೆಯಪ್ಪ, ಬಿ.ಟಿ.ರಮೇಶ್‍ಗೌಡ, ಜಿ.ಮಾರಣ್ಣ, ಸಿ.ಜೆ.ಜಯಕುಮಾರ್, ಟಿ.ವಿಜಯಕುಮಾರ್, ಭೀಮನಕೆರೆ ಶಿವಮೂರ್ತಿ, ಜಿ.ಬಸವರಾಜು, ನಗರಂಗೆರೆ ಶ್ರೀನಿವಾಸ್, ಚನ್ನಿಗರಾಮಯ್ಯ, ಡಿ.ಚಂದ್ರು ಮುಂತಾದವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಸಹಾಯಕ ನಿರ್ದೇಶಕ ಜಿ.ಆರ್.ಮಂಜಪ್ಪ ಸ್ವಾಗತಿಸಿದರು. ಸೂಪರ್‍ಡೆಂಟ್ ರವಿಶಂಕರ್ ವಂದಿಸಿದರು. ಡಿ.ಶ್ರೀನಿವಾಸ್ ನಿರೂಪಿಸಿದರು.