ತುಮಕೂರು

ನೃತ್ಯ ಮತ್ತು ಸಂಗೀತ ಮನೋವಿಕಾಸದ ದೃಷ್ಠಿಯಿಂದ ಆರಂಭವಾಯಿತೇ ಹೊರತು ಕೇವಲ ಮನರಂಜನೆಯ ಉದ್ದೇಶಕ್ಕಾಗಿ ಆರಂಭವಾಗಲಿಲ್ಲ ಎಂದು ಪ್ರವಾಸೋದ್ಯಮ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಅಭಿಪ್ರಾಯಪಟ್ಟರು.
ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸಂಸ್ಕಾರ ಭಾರತಿ, ಕರ್ನಾಟಕ ತುಮಕೂರು ಶಾಖೆಯಿಂದ ಹಮ್ಮಿ ಕೊಂಡಿದ್ದ ಪ್ರಾಂತ ಶಾಸ್ತ್ರೀಯ ನೃತ್ಯಕಲಾ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲೆಯ ಕ್ಷೇತ್ರವನ್ನು ಶುದ್ಧಗೊಳಿಸುವ ಕೆಲಸ ಮಾಡಬೇಕಾಗಿದೆ.
ಆ ನಿಟ್ಟಿನಲ್ಲಿ ಸಂಸ್ಕಾರ ಭಾರತಿ ಕೆಲಸ ಮಾಡುತ್ತಿದೆ. ಕಲೆಗೆ ಅಂಟಿಕೊಂಡಿರುವ ಕತ್ತಲೆಯನ್ನು ದೂರಮಾಡುತ್ತಾ ಸಾಗುತ್ತಿದೆ ಎಂದರಲ್ಲದೇ ಸಂಗೀತ ಮನಸ್ಸನ್ನು ಮುದಗೊಳಿಸುವ ಕಾರ್ಯವನ್ನು ಮಾಡುತ್ತದೆ. ಇಂದು ಸರ್ಕಾರ ಉತ್ತಮ ಶಿಕ್ಷಣವನ್ನು ನೀಡಿ, ಹೊಸ ಅನ್ವೇಷಣೆಗಳನ್ನು ಕಂಡು ಹಿಡಿಯಲು ಸಹಕಾರಿಯಾಗಿದೆ. ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾರಭರಣ ಮಾತನಾಡಿ, ಕಲೆ ಮತ್ತು ಕಲಾವಿದರ ಉನ್ಮುನವನ್ನು ಅರ್ಥ ಮಾಡಿಕೊಂಡರೆ ಸಮಾಜ ಕಟ್ಟುವಲ್ಲಿ ಕಲೆ ಹಾಗೂ ಕಲಾವಿದನ ಕರ್ತವ್ಯ ಏನೆಂಬುದು ಅರ್ಥ ಆಗುತ್ತದೆ. ಕಲೆ ಪ್ರತಿಯೊಬ್ಬರ ಮನಸ್ಸನ್ನು ಹದಗೊಳಿಸುವ ಕೆಲಸ ಮಾಡುತ್ತಿದೆ. ಕಲಾವಿದನು ಪ್ರೀತಿಯ ಮೂಲಕ ಕಲೆಯನ್ನು ಪ್ರದರ್ಶಿಸಬೇಕು. ಆರೋಗ್ಯ ಸಮಾಜ ನಿರ್ಮಾಣಕ್ಕೆ ಕಲಾವಿದನ ಪಾತ್ರ ಬಹುದೊಡ್ಡದು. ಅದರತ್ತ ನಾವೆಲ್ಲಾರೂ ಸಾಗಬೇಕಾಗಿದೆ. ಶಿಕ್ಷಣದಲ್ಲಿ ಆಗುತ್ತಿರುವ ವ್ಯತ್ಯಾಸ ಸಮಾಜ ಯಾವ ಕಡೆ ಸಾಗುತ್ತಿದೆ ಎಂಬುದರ ಅರಿವು ನಮಗೆ ಬರುತ್ತದೆ. ಮನಸ್ಸನ್ನು ಮುದಗೊಳಿಸುವ ಗುರು ಶಿಷ್ಯರ ಪರಂಪರೆಯನ್ನು ಉಳಿಸಿಕೊಂಡು ಹೋಗುವ ಕೆಲಸವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್, ಭರತ ನಾಟ್ಯ ಕಲಾವಿದೆ ಪದ್ಮಶ್ರೀ ಡಾ|| ಚಿತ್ರಾ ವಿಶ್ವೇಶ್ವರನ್, ಚಲನಚಿತ್ರ ನಟಿ ಮಾಳವಿಕ ಅವಿನಾಶ್, ಪ್ರಾಂತ ಶಾಸ್ತ್ರೀಯ ನೃತ್ಯೋತ್ಸವ ಅಧ್ಯಕ್ಷ ಎಚ್.ಪಿ. ಚಂದ್ರಶೇಖರ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದುಷಿಗಳಾದ ಲಲಿತಾ ಶ್ರೀನಿವಾಸನ್, ಉಷಾ ದಾತಾರ್, ಸುಜಾತಾ ರಾಜಗೋಪಾಲ್, ಶ್ಯಾಂಪ್ರಕಾಶ್, ವಸುಂಧರಾ ದೊರೆಸ್ವಾಮಿ, ಲಲಿತಾ ರಾಜೇಂದ್ರ, ಭಾನುಮತಿ, ಎಂ.ಆರ್ ಕೃಷ್ಣಮೂರ್ತಿ, ಬಿ.ಎಸ್.ಸುನಂದಾ ದೇವಿ ಇವರಿಗೆ ನೃತ್ಯ ಕಲಾ ಸಂಸ್ಕಾರ ರತ್ನ ಎಂಬ ಬಿರುದು ನೀಡಿ ಗೌರವಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
