ದಾವಣಗೆರೆ:
ಬಸವಾದಿ ಶರಣರು ದಾಸೋಹ ಮಹತ್ವವನ್ನು ಧಾರೆ ಎರೆಯುವ ಮೂಲಕ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅನ್ನ-ಅಕ್ಷರ-ಜ್ಞಾನ ದಾಸೋಹ ಸಿಗುವಂತೆ ಮಾಡಿಹೋಗಿದ್ದಾರೆಂದು ಕೈಗಾರಿಕೋದ್ಯಮಿ ಅಥಣಿ ವೀರಣ್ಣ ಸ್ಮರಿಸಿದರು.ನಗರದ ದೇವರಾಜ್ ಅರಸು ಬಡಾವಣೆಯಲ್ಲಿರುವ ಹಾಲಕೆರೆ ಅನ್ನದಾನೇಶ್ವರ ಶಾಖಾ ಮಠದಲ್ಲಿ ಏರ್ಪಡಿಸಿದ್ದ 223ನೇ ಶಿವಾನುಭವ ಸಂಪದ ಹಾಗೂ ನಾಲತವಾಡ ಮಹಾ ಶಿವಶರಣ ಶ್ರೀವೀರೇಶ್ವರ ಶರಣ ದಂಪತಿಗಳ ಪುಣ್ಯ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
12ನೇ ಶತಮಾನದಿಂದ ಈಚೆಗೆ ಅನೇಕ ಶರಣರು ಸಮಾಜಮುಖಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ, ದಾಸೋಹ ಮಹತ್ವವನ್ನು ನಮಗೆ ಧಾರೆ ಎರೆಯುವುದರ ಜೊತೆಗೆ ಕಷ್ಟ ಕಾಲದಲ್ಲಿ ಮನುಷ್ಯ ಹೇಗೆ ಚಿಂತನೆ ಮಾಡಬೇಕು ಎಂಬುದನ್ನು ವಚನಗಳ ಮೂಲಕ ಸಾರಿಹೋಗಿದ್ದು, ಅವರಲ್ಲಿ 19ನೇ ಶತಮಾನದ ನಾಲತವಾಡದ ವೀರೇಶ್ವರ ಶರಣರು ಸಹ ಒಬ್ಬರಾಗಿದ್ದಾರೆಂದು ಹೇಳಿದರು.
ಸಮಾಜ ಕಟ್ಟುವಲ್ಲಿ ಶರಣರು ನಿಸ್ವಾರ್ಥತೆಯಿಂದ ವಚನ ಸಾಹಿತ್ಯದ ಮೂಲಕ ಕೊಡುಗೆ ನೀಡಿದ್ದಾರೆ ಎಂದ ಅವರು, ಶ್ರೀವೀರೇಶ್ವರ ಶರಣರನ್ನು ನಾವು ನೋಡಿಲ್ಲ. ಆದರೆ, ಅವರು ಧರಿಸಿದ ನಿಲುವಂಗಿ ವಸ್ತ್ರಗಳನ್ನು ಸೊಲ್ಲಾಪುರ ಸಮೀಪದ ಬೊಮ್ಮನಹಳ್ಳಿ ಪಟ್ಟದ ದೇವರು ತಮ್ಮ ಮಠದಲ್ಲಿ ಇರಿಸಿದ್ದ ವಸ್ತ್ರಗಳನ್ನು ಶ್ರೀಗಳವರು ತೋರಿಸಿ ನಮ್ಮ ತಲೆ ಮೇಲೆ ಇಟ್ಟು ಆಶೀರ್ವದಿಸಿದ್ದಾರೆ. ಇದರಿಂದ ನಾವೇ ಧನ್ಯರು ಇಂತಹ ಪುಣ್ಯ ಪುರುಷರು ಜನಿಸಿದಂತಹ ನಾಡಿನಲ್ಲಿ ನಾವು ಇದ್ದೇವೆ ಎಂಬುದು ನಮಗೆ ಹೆಮ್ಮೆಯ ಸಂಗತಿ ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀಅನ್ನದಾನೇಶ್ವರ ಸಂಸ್ಥಾನ ಮಠದ ನಿಯೋಜಿತ ಉತ್ತರಾಧಿಕಾರಿ ಶ್ರೀಮುಪ್ಪಿನ ಬಸವಲಿಂಗ ದೇವರು ಮಾತನಾಡಿ, ಮನುಷ್ಯನ ಬಾಳು ಹಸನಾಗಬೇಕೆಂದರೆ ಇಂತಹ ಶರಣರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶರಣರ ಕಾಯಕ ನಿಷ್ಠೆ ಪ್ರಾಮಾಣಿಕತೆ ನಮ್ಮ ಉಸಿರಾಗಬೇಕೆಂದು ತಿಳಿಸಿದರು.
ಬಾದಾಮಿ ಸಮೀಪದ ಶ್ರೀಮದ್ ವೀರಶೈವ ಶಿವಯೋಗ ಮಂದಿರ ಸ್ಥಾಪಿಸಲು ಶ್ರೀವೀರೇಶ್ವರ ಶರಣರು ನೀಡಿದ ಮೂಲ ಧನವನ್ನು ಇಂದಿಗೂ ದೀಪಾವಳಿ ಹಬ್ಬಕೊಮ್ಮೆ ಹೊರತೆಗೆದು ಲಕ್ಷ್ಮಿ ಪೂಜೆ ಮಾಡಿ ಮತ್ತೆ ತೆಗೆದಿಡಲಾಗುತ್ತದೆ. ಈಗಲೂ ಸಹ ಹಣ ಶಿವಯೋಗ ಮಂದಿರದಲ್ಲಿ ಇದೆ. ವೀರೇಶ್ವರ ಶರಣರಿಗೂ ಹಾನಗಲ್ ಕುಮಾರಸ್ವಾಮಿಗಳು ಅವರಿಗೂ ಮತ್ತು ಹಾಲಕೆರೆ ಶ್ರೀಅನ್ನದಾನೇಶ್ವರ ಜಗದ್ಗುರುಗಳವರಿಗೂ ಅವಿನಾಭಾವ ಸಂಬಂಧ ವಿತ್ತು ಎಂದರು.
ಶ್ರೀಮಹಾಂತ ಶಾಸ್ತ್ರಿಗಳು ಮಾತನಾಡಿ, ಶ್ರೀವೀರೇಶ್ವರ ಶರಣರ ಜೀವನ ಚರಿತ್ರೆ ಹಾಗೂ ಅವರು ಮಾಡಿದ ದಾಸೋಹ ಮತ್ತು ಬಸವ ತತ್ವದ ಪ್ರಚಾರಕರಾಗಿ ಸಮಾಜವನ್ನು ಸಂಘಟಿಸಿ ನಾಲತವಾಡದಿಂದ ಸೋಲಾಪುರಕ್ಕೆ ಪ್ರಯಾಣ ಬೆಳೆಸಿ ಅಲ್ಲಿ ಶ್ರೀರೇವಣಸಿದ್ದೇಶ್ವರ ಸಾನಿಧ್ಯದಲ್ಲಿ ಲಿಂಗೈಕ್ಯರಾದರು ಎಂದು ಹೇಳಿದರು.ಹಳಿಂಗಳಿಯ ಶ್ರೀಶಿವಾನಂದ ದೇವರು ಆಶೀರ್ವಚನ ನೀಡಿದರು.
ಗದಗಿನ ಶ್ರೀಚಂದ್ರಶೇಖರ ದೇವರು, ನಿಡಗುಂದಿ ಕೊಪ್ಪದ ಶ್ರೀಸಿದ್ದರಾಮ ದೇವರು, ಶ್ರೀಕೊಟ್ಟೂರು ದೇವರು, ನಗರದ ಬಸವರಾಜ ಪೇಟೆಯಲ್ಲಿ ಪ್ರಥಮವಾಗಿ ಶ್ರೀವೀರೇಶ್ವರ ಶರಣರ ಪ್ರವಚನ ಮಾಡಿದಂತಹ ಹಿರಿಯರಾದ ಶ್ರೀ ದೇವೇಂದ್ರಪ್ಪ ಇವರನ್ನು ಸನ್ಮಾನಿಸಲಾಯಿತು.
ಭಕ್ತಿ ಸೇವೆ ವಹಿಸಿಕೊಂಡಿದ್ದ ಮಂಗಳ ವೀರಪ್ಪ ಭಾವಿ, ಸಿದ್ದಗಂಗಾ ವಿದ್ಯಾ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಜಸ್ಟಿನ್ ಡಿಸೋಜ, ಟ್ರಸ್ಟಿನ ಕಾರ್ಯದರ್ಶಿ ಎನ್. ಅಡಿವೆಪ್ಪ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ. ಮಂಜುನಾಥ್, ಕಾರ್ಯದರ್ಶಿ ಲಿಂಗರಾಜ್, ವಕೀಲ ಎಲï.ಹೆಚ್ಅರುಣಕುಮಾರ್, ಎ.ಎಚ್ ಶಿವಮೂರ್ತಿಸ್ವಾಮಿ, ಕಾಲಿ ಚೀಲ ವ್ಯಾಪಾರಿಗಳ ಸಂಘದ ಅಧ್ಯಕ್ಷ ಶರಣಪ್ಪ ರಕ್ಕಸಗಿ, ಪತ್ರಕರ್ತ ಇ.ಎಂ.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
ಶ್ರೀವೀರೇಶ್ವರ ಮಹಾತ್ಮೆ ನಾಟಕವನ್ನು ಅಭಿನಯಿಸಿದ ಪತ್ರಕರ್ತ ವೀರಪ್ಪ ಎಂ.ಭಾವಿ ಸೇರಿದಂತೆ ಇತರೆ ಕಲಾವಿದರನ್ನು ಶ್ರೀಗಳವರು ಸನ್ಮಾನಿಸಿದರು. ಟಿ ಎಚ್ ಎಮ್ ಶಿವಕುಮಾರಸ್ವಾಮಿ ಪ್ರಾರ್ಥಿಸಿದರು. ಪತ್ರಕತ್ ವೀರಪ್ಪ ಎಂ ಭಾವಿ ಸ್ವಾಗತಿಸಿದರು. ಉಮೇಶ್ ಹಿರೇಮಠ ವಂದಿಸಿದರು. ಖುಷಿ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
