ದಾಸೋಹಕ್ಕಾಗಿ ದವಸ ಧಾನ್ಯಗಳ ಸಮರ್ಪಣಾ ಸಮಾರಂಭ

ಹರಪನಹಳ್ಳಿ;

         ಕಿರೀಟ, ಉಂಗುರ ಹಾಕುವವರೆಲ್ಲ ಸ್ವಾಮಿಗಳಲ್ಲ, ಭಕ್ತರ ಹೃದಯ ಗೆಲ್ಲುವವರು ನಿಜವಾದ ಸ್ವಾಮಿಗಳು ಎಂದು ವೀರಶೈವ ಲಿಂಗಾಯಿತ ಪಂಚಮಶಾಲಿ ಜಗದ್ಗುರು ವಚನಾನಂದ ಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

       ತಾಲೂಕಿನ ತಾವರೆಗುಂದಿ ಗ್ರಾಮದಲ್ಲಿ ಸುಕ್ಷೇತ್ರ ಹರಿಹರ ವೀರಶೈವ ಲಿಂಗಾಯತ ಜಗದ್ಗುರು ಪೀಠದ ದಾಸೋಹಕ್ಕಾಗಿ ದವಸ ಧಾನ್ಯಗಳ ಸಮರ್ಪಣಾ ಸಮಾರಂಭ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ವಹಿಸಿ ಆಶಿರ್ವಚನ ನೀಡಿದ ಅವರು. ಭಕ್ತನ ತಲೆಮೇಲೆ ಕೂರದೆ ಭಕ್ತನ ಹತ್ತಿರ ಕುಳಿತ ಸನ್ಮಾರ್ಗ ತೋರಿಸುವವನು ನಿಜವಾದ ಸ್ವಾಮಿಯಾಗುತ್ತಾನೆ ಎಂದರು.

         ಸನ್ಯಾಸ ಸ್ವೀಕರಿಸಿದ ಮರುಕ್ಷಣದಿಂದ ಕುಟುಂಭದೊಂದಿಗೆ ಸಂಬಂಧ ವ್ಯಾಮೋಹಗಳನ್ನು ಬಿಡಬೇಕು. ಸ್ವಾಮಿ ಆದಮೇಲೂ ಭಕ್ತರು ನೀಡಿದ ಕಾಣಿಕೆಯನ್ನು ಕುಟುಂಭದ ಸದಸ್ಯರಿಗೆ ನೀಡಿದವರು ನಾಯಿ ನರಿಗಿಂತಲೂ ಹೀನವಾದವರು. ಸ್ವಾಮಿಗಳನ್ನು ಭಕ್ತರು ಮೆರೆಸಬಾರದು ಭಕ್ತರನ್ನು ಸನ್ಮಾರ್ಗದಲ್ಲಿ ಮೆರೆಸುವ ಗುಣಗಳು ಸ್ವಾಮಿಗಳಿಗಿರಬೇಕು. ಸತ್ತಮೇಲೂ ಬದುಕುವವನೇ ನಿಜವಾದ ಸ್ವಾಮಿಯಾಗಲು ಸಾದ್ಯ ಎಂದರು.

        ಹರಿಹರ ಪಂಚಮಶಾಲಿ ಪೀಠಕ್ಕೆ ಹಿತಶತೃಗಳು ಹೆಚ್ಚಾಗಿದ್ದಾರೆ. ರಾಜಕಾರಣಿಗಳು ಪೀಠಕ್ಕೆ ಸಹಾಯಹಸ್ತ ಚಾಚಲು ಮುಂದಾದಾಗ ಬೆನ್ನಿಗೆ ಚೂರಿ ಹಾಕುವ ಗುಣದ ಕೆಲ ರಾಜಕಾರಣಿಗಳು ಪೀಠಕ್ಕೆ ಸಹಾಯ ಮಾಡದಂತೆ ತಡೆದ ದುಷ್ಟ ಮನಸುಗಳು ಪೀಠಕ್ಕೆ ಅಡ್ಡಿಮಾಡಿದ್ದಾರೆ. ಅವರೂ ನಮ್ಮ ಸಮಾಜದವರೇ ಎಂದು ಹೇಳಲು ವಿಷಾಧವೆನಿಸುತ್ತದೆ ಎಂದರು.

         ಹರಿಹರದ ಪಂಚಮಶಾಲಿ ಪೀಠಕ್ಕೆ ಸಿದ್ದಗಂಗಾ ಮಠ ಆದರ್ಶವಾಗಿದೆ. ಸಿದ್ದಗಂಗಾ ಮಠದಂತೆ ದಾಸೋಹ ಮಠವಾಗಿಸುವ ಇಂಗಿತ ವ್ಯಕ್ತಪಡಿಸಿದ ಸ್ವಾಮಿಗಳು ಮಠವನ್ನು ಅನ್ನ, ಅಕ್ಷರ, ಆಶ್ರಯ, ಆರೋಗ್ಯ ಹಾಗೂ ಆದ್ಯಾತ್ಮದ ಪಂಚ ದಾಸೋಹ ಮಠವನ್ನಾಗಿಸುವ ಆಶಯ ಹೊಂದಿದ್ದೇವೆ ಎಂದರು.

         ಪೆಭ್ರವರಿ 4 ರ ಮೌನಿ ಅಮಾವಾಸ್ಯೆ ಯಂದು ಲಿಂಗೈಕ್ಯ ಡಾ. ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳ ಸ್ಮರಣೋತ್ಸವ ಕಾರ್ಯಕ್ರಮ ಜರುಗಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಾಮಿಗಳ ಕೃಪೆಗೆ ಪಾತ್ರರಾಗುವಂತೆ ತಿಳಿಸಿದರು.
ಮಠದ ಧರ್ಮದರ್ಶಿ ಬಿ.ಸಿ.ಉಮಾಪತಿ ಮಾತನಾಡಿ. ಅತಿದೊಡ್ಡ ಬಡ ಸಮಾಜ ಪಂಚಮಶಾಲಿ ಸಮಾಜವನ್ನು ರಾಜಕಾರಣಿಗಳು ಕರಿಬೇವಿನ ಸೊಪ್ಪಿನಂತೆ ಬಳಸಿಕೊಂಡು ಯಾವುದೇ ಸಹಾಯ ಮಾಡದೆ ತುಳಿತಕ್ಕೊಳಗಾದ ಸಮಾಜವು ಸಂಘಟನೆ ಮೂಲಕ ಸಮಾಜಮುಖಿಯಾಗಬೇಕಿದೆ. ಮಂದಿನ ಪೀಳಿಗೆಗಾಗಿ ಸಮಾಜ ಕಟ್ಟಿದ್ದೇವೆ. ಪೀಠದ ಬಲವರ್ಧನೆಗೆ ಹರಪನಹಳ್ಳಿ ತಾಲೂಕು ಮೇಲುಗೈಯಾಗಿದೆ ಎಂದರು.

          ದುಶ್ಚಟಗಳಿಂದ ಧಾರ್ಮಿಕ ಪರಂಪರೆಯನ್ನು ಮರೆಯುತ್ತಿದ್ದೇವೆ. ಅಲ್ಪ ಸ್ವಲ್ಪ ಧರ್ಮಾಚರಣೆ ಉಳಿದಿದೆ ಎಂದರೆ ಅದು ಮಹಿಳೆಯರಿಂದ ಮಾತ್ರ. ಧರ್ಮ ಪಾಲಿಸುವವನು ಪ್ರಾಮಾಣಿಕನಾಗಿರುತ್ತಾನೆ. ಸದ್ಗುಣಗಳಿಗೆ ಉನ್ನತ ವ್ಯಾಸಾಂಗದ ಅವಶ್ಯಕತೆಯಿಲ್ಲ. ಧರ್ಮಕ್ಕೆ ಗೌರವಕೊಡುವ ಮನೋಸ್ಥತಿಯಿದ್ದರೆ ಸಾಕು ಎಂದರು.

         ತಾವರೆಗುಂದಿ ಗ್ರಾಮದಲ್ಲಿ ಗುಟ್ಕಾ ಬೀಡಿ ಸಿಗರೇಟು ಮತ್ತು ತಂಬಾಕು ಪದಾರ್ಥಗಳನ್ನು ಮಾರದಂತೆ ಗ್ರಾಮದ ಯುವಕರು ನಿಷೇಧಿಸಿದ್ದಾರೆ, ಇದು ಪ್ರಗತಿಯ ಸಂಕೇತವಾಗಲಿ ಎಂದು ಹಾರೈಸಿದರು.ಎಂ.ಪಿ.ಲತಾ ಮಾತನಾಡಿ. ಭಾರತ ಧರ್ಮದ ಸುಭದ್ರ ಬುನಾದಿಯಾಗಿದೆ. ಧರ್ಮದ ಆಚರಣೆಗಳು ಮುಂದುವರಿಯಲು ವಿದ್ಯಾಭ್ಯಾಸದ ಜೊತೆಯಲ್ಲಿ ಮಕ್ಕಳಿಗೆ ಸಂಸ್ಕಾರ ಕೊಡಿ ಎಂದರು.
ಇದೇ ವೇಳೆ 101 ಕ್ವಿಂಟಾಲ್ ಭತ್ತವನ್ನು ಮಠಕ್ಕೆ ಕಾಣಿಕೆಯಾಗಿ ಗ್ರಾಮಸ್ಥರು ನೀಡಿದರು.

          ಕಾರ್ಯಕ್ರಮದಲ್ಲಿ ಪಂಚಮಶಾಲಿ ಸಮಾಜದ ತಾಲೂಕು ಅಧ್ಯಕ್ಷೆ ಪಾಟೀಲ್ ಬೆಟ್ಟನಗೌಡ, ಹೊಳೆಸಿರಿಗೆರೆ ನಾಗರಗೌಡ, ಜಿಪಂ ಸದಸ್ಯೆ ಸುವರ್ಣ ಆರುಂಡಿ ನಾಗರಾಜ್, ಮಾಜಿ ಸದಸ್ಯ ತೆಲಿಗಿ ಈಶ್ವರಪ್ಪ, ಮುಖಂಡರಾದ ಡಾ.ಮಲ್ಕಪ್ಪ ಅಧಿಕಾರ್, ಪುರಸಭೆ ಸದಸ್ಯೆ ಪುಷ್ಪಾದಿವಾಕರ್, ಧರ್ಮದರ್ಶಿ ಚಂದ್ರಶೇಖರ್ ಪೂಜಾರ್, ನವೀನ್ ಪಾಟೀಲ್, ಸಿದ್ದಲಿಂಗಪ್ಪ, ನೀಲಗುಂದ ನಂಜಪ್ಪ, ಇಂಜಿನೀಯರ್ ನಾಗರಾಜ್ ಹಾಗೂ ಗ್ರಾಮಸ್ಥರು ಇದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap