ಕೊರಟಗೆರೆ
ರಥೋತ್ಸವ ಮತ್ತು ಜಾತ್ರೆ ಸಮಯದಲ್ಲಿ ಉಚಿತ ದಾಸೋಹ ವ್ಯವಸ್ಥೆಗೆ ಅವಕಾಶ ನೀಡದಿರುವ ಸಿದ್ದರಬೆಟ್ಟದ ಶ್ರೀಸಿದ್ದೇಶ್ವರ ಸ್ವಾಮಿ ಸೇವಾ ಸಮಿತಿ ಟ್ರಸ್ಟ್‍ನ ಕಾರ್ಯದರ್ಶಿ ರಾಜಣ್ಣನನ್ನು ತಕ್ಷಣ ಹುದ್ದೆಯಿಂದ ತೆಗೆಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿರುವ ಘಟನೆ ಇತ್ತೀಚಿಗೆ ನಡೆದಿದೆ.
ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿ ಬೂದಗವಿ ಗ್ರಾಪಂ ಕೇಂದ್ರ ಸ್ಥಾನದಲ್ಲಿರುವ ಸಿದ್ದರಬೆಟ್ಟದ ಸಿದ್ದೇಶ್ವರ ಸ್ವಾಮಿ ಸೇವಾ ಸಮಿತಿಯ ದಾಸೋಹ ಕೇಂದ್ರದಲ್ಲಿ ಪ್ರತಿವರ್ಷದಂತೆ ಉಚಿತ ದಾಸೋಹಕ್ಕೆ ಅವಕಾಶ ನೀಡದಿರುವ ಹಿನ್ನೆಲೆಯಲ್ಲಿ ಕುರಿಹಳ್ಳಿ, ಜೋನಿಗರಹಳ್ಳಿ, ಕುರಂಕೋಟೆ, ಮಲ್ಲೇಕಾವು ಗ್ರಾಮದ ನೂರಾರು ಜನ ಗ್ರಾಮಸ್ಥರು ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುರಂಕೋಟೆ ಗ್ರಾಮಸ್ಥ ಸಿದ್ದರಾಜು ಮಾತಮಾಡಿ, ಸಿದ್ದರಬೆಟ್ಟದಲ್ಲಿ ರಥೋತ್ಸಹ ಮತ್ತು ಜಾತ್ರೆ ವೇಳೆ ದಾಸೋಹ ಕೇಂದ್ರದಲ್ಲಿ ಕಳೆದ 40 ವರ್ಷದಿಂದ ಪ್ರತಿವರ್ಷ ಉಚಿತ ದಾಸೋಹ ನಡೆಸುತ್ತಿದ್ದೇವೆ. ಕಾರ್ಯದರ್ಶಿ ರಾಜಣ್ಣ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ದಾಸೋಹಕ್ಕೆ ಅನುಮತಿ ನೀಡಿಲ್ಲ. ಭಕ್ತ್ತಾದಿಗಳಿಗೆ ಸೇವಾ ಸಮಿತಿಯು ದಾಸೋಹದ ವ್ಯವಸ್ಥೆ ಮಾಡೋಲ್ಲ. ದಾಸೋಹ ಸಮಿತಿಯ ಹುಂಡಿಯ ಲೆಕ್ಕಾಚಾರದ ಮಾಹಿತಿಯನ್ನು ರಾಜಣ್ಣ ಯಾರಿಗೂ ನೀಡದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುರಂಕೋಟೆ ದೊಡ್ಡಕಾಯಪ್ಪ ಸೇವಾ ಸಮಿತಿ ಅಧ್ಯಕ್ಷ ಆರ್.ಸಿದ್ದರಾಜು ಮಾತನಾಡಿ, ಸಿದ್ದೇಶ್ವರ ಸೇವಾ ಸಮಿತಿಯ ಕಾರ್ಯದರ್ಶಿ ರಾಜಣ್ಣನವರ ಏಕಪಕ್ಷೀಯ ನಿರ್ಧಾರದಿಂದ ಸಿದ್ದರಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ತೊಂದರೆ ಆಗುತ್ತಿದೆ. ಹತ್ತಾರು ಹಳ್ಳಿಯ ಗ್ರಾಮಸ್ಥರು ದಾಸೋಹಕ್ಕೆ ಅನುಮತಿ ಕೇಳಿದರೆ ಉಡಾಫೆ ನೀಡುತ್ತಾರೆ. ಮುಂದಿನ ದಿನಗಳಲ್ಲಿ ಕಾರ್ಯದರ್ಶಿ ಬದಲಾವಣೆ ಮಾಡಿ ಸೇವಾ ಸಮಿತಿಯ ಆಡಳಿತ ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕು ಎಂದು ಆಗ್ರಹ ಮಾಡಿದರು.
ಕುರಂಕೋಟೆ, ಕುರಿಹಳ್ಳಿ, ಜೋನಿಗರಹಳ್ಳಿ, ಮಲ್ಲೇಕಾವು ಸೇರಿದಂತೆ ಹತ್ತಾರು ಹಳ್ಳಿಯ ಗ್ರಾಮಸ್ಥರ ಆಗ್ರಹದಿಂದ ಸಿದ್ದರಬೆಟ್ಟದ ಸಿದ್ದೇಶ್ವರ ಸ್ವಾಮಿ ಸೇವಾ ಸಮಿತಿಯ ಕಚೇರಿ ಕೇಂದ್ರಕ್ಕೆ ಪಾರುಪತ್ತೇದಾರ್ ವೀರಮಲ್ಲಮ್ಮ, ನೇಗಲಾಲ ಗ್ರಾಮ ಲೆಕ್ಕಾಧಿಕಾರಿ ಕಲ್ಪನಾ, ಮಲ್ಲೇಕಾವು ಪಂಚಾಯಿತಿ ಗ್ರಾಮ ಲೆಕ್ಕಾಧಿಕಾರಿ ರಮೇಶ್ ಸಮ್ಮುಖದಲ್ಲಿ ಟ್ರಸ್ಟ್ ಅಧೀಕ್ಷಕರಾದ ದೊಡ್ಡಸಿದ್ದಯ್ಯ ಸೇವಾ ಸಮಿತಿ ಕಚೇರಿಗೆ ಬೀಗ ಹಾಕಿರುವ ಘಟನೆ ನಡೆದಿದೆ.
ಪ್ರತಿಭಟನೆಯಲ್ಲಿ ನಾಗಣ್ಣ, ಸುರೇಶ್, ಪಾಂಡುರಂಗಯ್ಯ, ಸಿದ್ದರಾಜು, ರಂಗರಾಜು, ಚನ್ನಕೇಶಯ್ಯ, ತಿಮ್ಮಯ್ಯ, ನಟರಾಜು, ಲಕ್ಷಣ, ರಮೇಶ್, ಮಂಜುನಾಥ, ಮಲ್ಲೇಶ್, ಭೀಮಯ್ಯ, ಶಿವಣ್ಣ, ಪಾರುಪತ್ತೇದಾರ್ ವೀರಮಲ್ಲಯ್ಯ, ನೇಗಲಾಲ ಗ್ರಾಮ ಲೆಕ್ಕಾಧಿಕಾರಿ ಕಲ್ಪನಾ, ಮಲ್ಲೇಕಾವು ಗ್ರಾಮ ಲೆಕ್ಕಾಧಿಕಾರಿ ರಮೇಶ್ ಸೇರಿದಂತೆ ಇತರರು ಇದ್ದರು.