ಅಶಕ್ತನಾಗಿರುವ ರೋಗಿಷ್ಟ ತಂದೆ : ಕೂಲಿ ಸಿಗದೆ ಭಿಕ್ಷೆ ಬೇಡಿದ ಮಗಳು

ಗುಬ್ಬಿ

     ಅನಾರೋಗ್ಯ ಪೀಡಿತರಾದ ತಂದೆ ಮಗಳು ಪಟ್ಟಣದ ಒಕ್ಕಲಿಗರ ಸಂಘದ ಕಚೇರಿ ಕಟ್ಟಡ ಬಳಿ ವಾಸವಿದ್ದುಕೊಂಡೆ ಬಯಲಿಗೆ ಬಹಿರ್ದೆಸೆಗೆ ಬರುವವರ ಬಳಿ ಅನ್ನಕ್ಕಾಗಿ ಬೇಡುತ್ತಿದ್ದ ಹೃದಯ ವಿದ್ರಾಯಕ ಘಟನೆ ಕಂಡ ಕೆಲವು ಸಾಮಾಜಿಕ ಕಾರ್ಯಕರ್ತರು ಇಬ್ಬರಿಗೂ ಸೂಕ್ತ ಚಿಕಿತ್ಸೆ ಒದಗಿಸಲು ಆರ್ಥಿಕ ಸಹಕಾರದೊಂದಿಗೆ ತುಮಕೂರು ಜಿಲ್ಲಾಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಘಟನೆ ಪಟ್ಟಣದಲ್ಲಿ ಪ್ರಶಂಸೆಗೆ ಕಾರಣವಾಗಿದೆ.

     ಕೂಲಿ ಹುಡುಕಿ ಕಳೆದ ಮೂರು ತಿಂಗಳ ಹಿಂದೆ ತಿಪಟೂರಿನಿಂದ ಗುಬ್ಬಿ ಪಟ್ಟಣಕ್ಕೆ ಬಂದ ತಂದೆ ಮಗಳು ಗಾರೆ ಕೆಲಸಕ್ಕೆ ಅಲೆದಾಡಿ ಕೂಲಿ ಸಿಗದೆ ಭಿಕ್ಷಾಟನೆ ಮಾಡುತ್ತಲೆ ಬದುಕು ನಡೆಸಲಾರಂಭಿಸಿದರು. ಸುಮಾರು 45 ವರ್ಷದ ಶಿವಕುಮಾರ್ ಮತ್ತು ಆತನ ಪುತ್ರಿ 15 ವರ್ಷದ ಕಾವ್ಯ ಇಬ್ಬರೂ ಕೂಲಿಗಾಗಿ ಪರದಾಡಿ ಭಿಕ್ಷೆಯತ್ತ ಮುಖ ಮಾಡಿದ್ದರು. ಕಳೆದ ಒಂದು ತಿಂಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾದ ಶಿವಕುಮಾರ್ ಹಾಸಿಗೆ ಹಿಡಿದು ಕ್ಷಯ ರೋಗಕ್ಕೆ ತುತ್ತಾಗಿರುವ ಅನುಮಾನ ಕಂಡು ಬಂದಿದೆ. ಎದ್ದೇಳಲು ಸಾಧ್ಯವಾಗದ ದುಸ್ಥಿತಿಯಲ್ಲಿ ಮಲಗಿರುವ ತಂದೆಗಾಗಿ ಪ್ರಪಂಚದ ಅರಿವು ಇಲ್ಲದ ಮಗಳು ಭಿಕ್ಷೆ ನಡೆಸುತ್ತಿದ್ದುದು ಮನಕಲುಕುವಂತಿತ್ತು. ಜತೆಗೆ ಕಾವ್ಯ ಎಂಬ ಈ ಹೆಣ್ಣುಮಗುವಿಗೆ ಕಾಮಾಲೆ ರೋಗ ಇರುವುದು ಮತ್ತೊಂದು ಚಿಂತಾಜನಕ ಸ್ಥಿತಿಯಾಗಿದೆ.

      ತೊಡಲು ಬಟ್ಟೆ ಇಲ್ಲದೆ ಚಿಂದಿ ಬಟ್ಟೆಯಲ್ಲೆ ಇಬ್ಬರೂ ಒಕ್ಕಲಿಗರ ಸಂಘದ ಕಚೇರಿ ಕಟ್ಟಡದ ವರಾಂಡದಲ್ಲಿ ಆಶ್ರಯ ಪಡೆದಿರುವುದನ್ನು ಕಂಡ ಕೆಲ ಸಾಮಾಜಿಕ ಕಾರ್ಯಕರ್ತರು ಇವರ ದುಸ್ಥಿತಿ ಕಂಡು ಮರುಕ ಹುಟ್ಟಿ ಕೂಡಲೆ ಕಾರ್ಯಪ್ರವೃತ್ತರಾದ ತಂಡ ಸಂಬಂಧಪಟ್ಟ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಆಸ್ಪತ್ರೆಗೆ ಮಾಹಿತಿ ರವಾನಿಸಿ ತುರ್ತುವಾಹನವನ್ನು ಸ್ಥಳಕ್ಕೆ ಕರೆಸಲು ಒಂದು ಮಟ್ಟದ ಸಾಹಸ ಮಾಡಬೇಕಾಗಿ ಬಂತು. ಕೋವಿಡ್-19 ವೈರಸ್ ಹಿನ್ನೆಲೆಯಲ್ಲಿ ರೋಗಿಗಳನ್ನು ಸಾಗಿಸಲು ಯೋಚಿಸಬೇಕಾದ ಈ ಸಮಯದಲ್ಲಿ ಇವರನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಲು ತಂಡ ಬಹಳ ಪ್ರಯತ್ನ ಮಾಡಿದ್ದು ಮೆಚ್ಚುವಂತಹದು. ತಹಸೀಲ್ದಾರ್ ಅವರಿಗೆ ಕರೆ ಮಾಡಿ ವಿಷಯ ಮುಟ್ಟಿಸಲಾಯಿತು. ನಂತರದಲ್ಲಿ ಸ್ಥಳಕ್ಕೆ ಆಗಮಿಸಿದ ಆರೋಗ್ಯ ಇಲಾಖೆಯ ಚೇತನ್ ಇಬ್ಬರನ್ನು ಸಾಗಿಸಲು ಸೂಚಿಸಿದ ಬಳಿಕ ಸಾಗಿಸಲಾಯಿತು.

      ಪತ್ರಬರಹಗಾರ ಗೋವಿಂದರಾಜು, ಬಿಜೆಪಿ ಮುಖಂಡ ಭೈರಪ್ಪ, ಮುಖಂಡ ಸುರೇಶ್‍ಗೌಡ, ವಿನಯ್, ರಮೇಶ್, ಸಂಜಯ್, ಮಧು ಹೀಗೆ ಹಲವರು ಒಗ್ಗೂಡಿ ಈ ತಂದೆ ಮಗಳ ದಾರುಣ ಕಥೆಗೆ ಇತಿಶ್ರೀ ಹಾಡಲು ಶ್ರಮಿಸಿದರು. ಶಿವಕುಮಾರ್ ಮತ್ತು ಕಾವ್ಯ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ ಉತ್ತಮ ಚಿಕಿತ್ಸೆಗೆ ಅನುವು ಮಾಡಿದ್ದಾರೆ. ಶಿವಕುಮಾರ್ ಆರೋಗ್ಯವಂತನಾದ ಬಳಿಕ ಆತನ ಊರು ತಿಪಟೂರಿಗೆ ಕಳುಹಿಸಲು ವ್ಯವಸ್ಥೆ ಮಾಡಿದ ಈ ತಂಡ ಚಿಕಿತ್ಸೆಗೆ ಆರ್ಥಿಕ ನೆರವು ಮಾಡಿದೆ. ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಸಂಪರ್ಕಿಸಿ ಉತ್ತಮ ಚಿಕಿತ್ಸೆ ಇಬ್ಬರಿಗೂ ನೀಡಲು ಮನವಿ ಮಾಡಿದೆ. ಇಂತಹ ತುರ್ತು ಪರಿಸ್ಥಿತಿಯಲ್ಲಿ ಮಾನವೀಯ ಗುಣ ತೋರಿದ ಈ ತಂಡಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ಸಿಕ್ಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link