ಪ್ರಿಯಕರನಿಗಾಗಿ ತಂದೆಯನ್ನೆ ಕೊಂದ ಮಗಳು.!

ಬೆಂಗಳೂರು

    ಇಂಥ ಪಾಪಿ ಮಗಳು ಯಾರಿಗೆ ತಾನೇ ಬೇಕು ಹೇಳಿ. ಸ್ನೇಹಿತನ ಜೊತೆ ಮಾತನಾಡಲು ಓಡಾಡಲು ಅಡ್ಡಿ ಮಾಡಿದ್ದ ತಂದೆಯನ್ನು 15 ವರ್ಷದ ನಿರ್ದಯಿ ಮಗಳು ಕೊಲೆ ಮಾಡಿ ಶವವನ್ನು ಶೌಚಾಲಯಕ್ಕೆ ತಳ್ಳಿ ಬೆಂಕಿಹಚ್ಚಿದ್ದಾಳೆ

     ರಾಜಾಜಿನಗರದ 5ನೇ ಬ್ಲಾಕ್‍ನ ಬಾಷ್ಯವೃತ್ತದ ಬಳಿ ಇಂತಹ ಮೃಗೀಯ ಕೃತ್ಯ ಭಾನುವಾರ ಬೆಳಕಿಗೆ ಬಂದಿದೆ 15 ವರ್ಷದ ಮಗಳ ಕೃತ್ಯಕ್ಕೆ ಸಹಕರಿಸಿದ ಪ್ರಿಯಕರ ಎಂತಹ ಕಟುಕನಿರಬಹುದು ಎನ್ನುವುದು ಊಹೆಗೆ ನಿಲುಕದ್ದಾಗಿದೆ.ರಾಜಾಜಿನಗರದ 5ನೇ ಬ್ಲಾಕ್‍ನ ಬಟ್ಟೆ ವ್ಯಾಪಾರಿ ಜೈ ಕುಮಾರ್ ಜೈನ್ (41) ಅವರನ್ನು ಕೊಲೆಗೈದು, ಬೆಂಕಿ ಹಚ್ಚಿದ್ದ ಅವರ 15 ವರ್ಷದ ಪುತ್ರಿಯನ್ನು ವಶಕ್ಕೆ ತೆಗೆದುಕೊಂಡು ಹಾಗೂ ಪ್ರಿಯಕರ ರಾಜಾಜಿನಗರದ ಪ್ರವೀಣ್ (18) ನನ್ನು ಬಂಧಿಸಲಾಗಿದೆ.

    ಪ್ರಿಯಕರ ಪ್ರವೀಣ್‍ನ ಜೊತೆ ಶಾಂಪಿಂಗ್‍ಗೆ ಹೋಗುವುದು, ಫೋನ್‍ನಲ್ಲಿ ಹೆಚ್ಚಿಗೆ ಮಾತನಾಡುವುದು, ಒಟ್ಟಿಗೆ ಓಡಾಡುವುದನ್ನು ಕಂಡು ಜೈ ಕುಮಾರ್ ಜೈನ್ ಹಾಗೂ ಅವರ ಪತ್ನಿ ಪೂಜಾದೇವಿ ಬೈದು ಬುದ್ಧಿ ಹೇಳಿ, ಮೊಬೈಲ್ ಕಿತ್ತುಕೊಂಡಿದ್ದರಿಂದ ಪುತ್ರಿ, ತಂದೆಯ ಕೊಲೆ ನಡೆಸಿರುವುದು ತನಿಖೆಯಲ್ಲಿ ಕಂಡುಬಂದಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

ಕೃತ್ಯದ ವಿವರ

     ಪಾಂಡಿಚೆರಿ ಮೂಲದ ಜೈ ಕುಮಾರ್ ಜೈನ್, ರಾಜಾಜಿನಗರದ 5ನೇ ಬ್ಲಾಕ್‍ನಲ್ಲಿ ಪತ್ನಿ ಪೂಜಾದೇವಿ, 12 ವರ್ಷದ ಪುತ್ರ, 15 ವರ್ಷದ ಮಗಳೊಂದಿಗೆ ನೆಲೆಸಿದ್ದರು. ಬಾಮೈದನ ಜೊತೆ ದಿಲೀಪ್ ಅಪೆರೆಲ್ಸ್ ಬಟ್ಟೆ ಅಂಗಡಿ ನಡೆಸುತ್ತಿದ್ದರು.ಜೈ ಕುಮಾರ್ ಅವರ ಪತ್ನಿ ಪೂಜಾದೇವಿ ಹಾಗೂ ಪುತ್ರ ತಮ್ಮ ಸಹೋದರನ ಮನೆಯಲ್ಲಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಳೆದ ಆಗಸ್ಟ್ 17 ರಂದು ಬೆಳಿಗ್ಗೆ ಪಾಂಡಿಚೆರಿಗೆ ಹೋಗಿದ್ದು, ಮನೆಯಲ್ಲಿ ಜೈ ಕುಮಾರ್ ಹಾಗೂ ಅವರ ಪುತ್ರಿ ಮಾತ್ರ ಇದ್ದರು.

      ನಿನ್ನೆ ಬೆಳಿಗ್ಗೆ 9ರ ವೇಳೆ ಇದ್ದಕ್ಕಿದ್ದಂತೆ, ಅವರು ನೆಲೆಸಿದ್ದ ಮನೆಯ ನಾಲ್ಕನೇ ಮಹಡಿಯಿಂದ ದಟ್ಟವಾದ ಹೊಗೆ ಬರುತ್ತಿದ್ದು, ಸ್ಥಳೀಯರು ಮಾಹಿತಿ ನೀಡಿದ ಕೂಡಲೇ, ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ, ಬೆಂಕಿ ನಂದಿಸಲು ಮುಂದಾಗಿದ್ದಾರೆ .ಶೌಚಾಲಯದಲ್ಲಿ ಬೆಂಕಿ ನಂದಿಸುವಾಗ ಉರಿಯುತ್ತಿದ್ದ ಶವ ಪತ್ತೆಯಾಗಿದೆ. ಈ ಬಗ್ಗೆ ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಮೇಲ್ನೋಟಕ್ಕೆ ಕೊಲೆ ಎಂಬುದು ಕಂಡುಬಂದಿತ್ತು.

ಹಾಲಿನಲ್ಲಿ ನಿದ್ರೆ ಮಾತ್ರೆ

    ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಜೈ ಕುಮಾರ್ ಜೈನ್ ಅವರ ಪುತ್ರಿ ಸುಟ್ಟಗಾಯಗಳಾಗಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಹೋಗಿದ್ದು ಪತ್ತೆಯಾಗಿದ್ದು, ಆಕೆಯನ್ನು ವಿಚಾರಣೆ ನಡೆಸಿದಾಗ ಆಕೆ ಕೊಲೆ ಮಾಡಿರುವುದನ್ನು ಬಾಯಿಬಿಟ್ಟಿದ್ದಾಳೆ. ನಾನು ಹಾಗೂ ಪ್ರವೀಣ್ ಒಂದೇ ಶಾಲೆಯಲ್ಲಿ ಓದುತ್ತಿದ್ದು, ಉತ್ತಮ ಸ್ನೇಹಿತರಾಗಿದ್ದೆವು.

     ಒಟ್ಟಿಗೆ ಶಾಲೆಯಲ್ಲಿ ಓಡಾಡುವುದು, ಜೊತೆಯಲ್ಲಿ ಶಾಂಪಿಂಗ್ ಮಾಡುವುದು, ಫೋನ್‍ನಲ್ಲಿ ಹೆಚ್ಚಾಗಿ ಮಾತನಾಡುವುದನ್ನು ಕಂಡು ತಂದೆ – ತಾಯಿ, ಮೊಬೈಲ್ ಕಿತ್ತುಕೊಂಡು ಹಲವು ಬಾರಿ ಮಾನಸಿಕವಾಗಿ ಹಿಂಸೆ ನೀಡಿದ್ದರು. ಇದರಿಂದ ಬೇಸತ್ತು ಮನೆಯಲ್ಲಿ ಯಾರೂ ಇಲ್ಲದ ವೇಳೆ ತಂದೆಗೆ ಹಾಲಿನಲ್ಲಿ ನಿದ್ರೆ ಮಾತ್ರೆಗಳನ್ನು ಹಾಕಿ ಕುಡಿಸಿ, ಪ್ರಜ್ಞೆ ತಪ್ಪಿಸಿದೆ.

      ನಂತರ, ಸ್ನೇಹಿತ ಪ್ರವೀಣ್‍ನನ್ನು ಕರೆಸಿಕೊಂಡು ಕೊಲೆಮಾಡಿ, ಕೃತ್ಯವನ್ನು ಮರೆಮಾಚಲು ಮೃತದೇಹವನ್ನು ಶೌಚಾಲಯಕ್ಕೆ ಹಾಕಿ ಬೆಂಕಿ ಹಚ್ಚಿರುವುದಾಗಿ ಒಪ್ಪಿಕೊಂಡಿದ್ದು, ಆಕೆಯನ್ನು ವಶಪಡಿಸಿಕೊಂಡು ಆಕೆಯ ಪ್ರಿಯಕರ ಪ್ರವೀಣ್‍ನನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

.   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link