ಲಿಂಗಾಯತರು-ಕುರುಬರ ನಡುವೆ ಮಹಾ ಸಮರ

ದಾವಣಗೆರೆ

      ಬೆಣ್ಣೆನಗರಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಎರಡು ದಶಕಗಳಿಂದಲೂ ಲಿಂಗಾಯತ ಸಮುದಾಯದ ನಡುವೆಯೇ ಲೋಕ ಸಮರ ನಡೆದುಕೊಂಡು ಬರುತಿತ್ತು. ಆದರೆ, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಬದಲಾದ ಕಾರಣ ಲಿಂಗಾಯತ ಮತ್ತು ಕುರುಬ ಸಮುದಾಯದ ಮಧ್ಯೆ ಕದನ ನಡೆಯುವ ಎಲ್ಲಾ ಸಾಧ್ಯತೆಗಳಿವೆ.

        ಹೌದು… 1998ರಿಂದ 2014ರ ಲೋಕಸಭಾ ಚುನಾವಣೆಯ ವರೆಗೂ ದಾವಣಗೆರೆ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಭೀಮಸಮುದ್ರದ ಗೌಡರ ಮಲ್ಲಿಕಾರ್ಜುನಪ್ಪ ಹಾಗೂ ಶಾಮನೂರು ಕುಟುಂಬಗಳ ಮಧ್ಯೆಯೇ ನೇರ ಹಣಾಹಣಿ ನಡೆದುಕೊಂಡು ಬಂದಿದೆ. ಆದರೆ, ಈ ಚುನಾವಣೆಯಲ್ಲಿ ಕುರುಬ ಸಮುದಾಯಕ್ಕೆ ಸೇರಿದ ಹೆಚ್.ಬಿ.ಮಂಜಪ್ಪನವರಿಗೆ ಕಾಂಗ್ರೆಸ್ ಟಿಕೆಟ್ ನೀಡಿರುವ ಕಾರಣ ಲಿಂಗಾಯತ ಮತ್ತು ಕುರುಬ ಸಮುದಾಯಗಳ ಮಹಾ ಸಮರ ಏರ್ಪಡಲಿದೆ.

       1977ರ ಹಾಗೂ 1980 ಮೊದಲ ಎರಡು ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತ ಸಮುದಾಯದ ಮಧ್ಯೆಯೇ ನೇರ ಹಣಾಹಣಿ ನಡೆಯುತಿತ್ತು. ಆದರೆ, 1984ರಲ್ಲಿ ಕುರುಬ ಸಮುದಾಯದ ಗುರುಗಳೆಂದೇ ಖ್ಯಾತರಾದ ಚನ್ನಯ್ಯ ಒಡೆಯರ್ ಲೋಕಸಭಾ ಚುನಾವಣೆಗೆ ಪ್ರವೇಶ ಪಡೆದಾಗಿನಿಂದ 1996ರ ಚುನಾವಣೆ ವರೆಗೂ ಕುರುಬ ಮತ್ತು ಲಿಂಗಾಯತ ಸಮುದಾಯಗಳ ಮಧ್ಯೆ ಕಾಳಗ ನಡೆಯುತಿತ್ತು.

       ಚನ್ನಯ್ಯ ಒಡೆಯರ್ ಸ್ಪರ್ಧಿಸಿದ ನಾಲ್ಕು ಲೋಕಸಭಾ ಚುನಾವಣೆಗಳಲ್ಲಿ ಅಹಿಂದ ಸಮುದಾಯಗಳ ಬೆಂಬಲದಿಂದ ಸತತ ಮೂರು ಬಾರಿ ಗೆಲುವು ಸಾಧಿಸಿಕೊಂಡು ಬಂದಿದ್ದರು. ಆದರೆ, ಅವರು ಸ್ಪರ್ಧಿಸಿದ 1996ರ ಕೊನೆಯ ಲೋಕಸಭಾ ಚುನಾವಣೆಯಲ್ಲಿ ಸ್ವಪಕ್ಷೀಯರೇ ಒಡೆಯರ್‍ಗೆ ಬಗೆದ ದ್ರೋಹದಿಂದಾಗಿ ಬಿಜೆಪಿಯ ಜಿ.ಮಲ್ಲಿಕಾರ್ಜುನಪ್ಪನವರ ವಿರುದ್ಧ ಸೋಲು ಅನುಭವಿಸಬೇಕಾಯಿತು. ಅಂದಿನಿಂದ ಇಂದಿನ ವರೆಗೂ ದಾವಣಗೆರೆ ಲೋಕಸಭಾ ಕ್ಷೇತ್ರವು ಕುರುಬ ಅಥವಾ ಅಹಿಂದ ಹಿಡಿತದಿಂದ ಕೈ ತಪ್ಪಿ ಹೋಗಿದೆ.

       ಚನ್ನಯ್ಯ ಒಡೆಯರ್ ಅವರನ್ನು ಸ್ವಪಕ್ಷೀಯರೇ ಮೂಲೆಗುಂಪು ಮಾಡಿದ ಕಾರಣ 1998ರಿಂದ 1999ರ ವರೆಗೆ 13 ತಿಂಗಳಲ್ಲಿಯೇ ನಡೆದ ಲೋಕಸಭೆಯ ಎರಡು ಮಹಾ ಸಂಗ್ರಾಮಗಳಲ್ಲಿ ಕಾಂಗ್ರೆಸ್‍ನಿಂದ ಲಿಂಗಾಯತ ಸಮುದಾಯಕ್ಕೆ ಸೇರಿದ ಶಾಮನೂರು ಶಿವಶಂಕರಪ್ಪ ಹಾಗೂ ಇದೇ ಸಮುದಾಯಕ್ಕೆ ಸೇರಿದ ಬಿಜೆಪಿಯ ಜಿ.ಮಲ್ಲಿಕಾರ್ಜುನಪ್ಪನವರ ಮಧ್ಯೆ ನೇರ ಸೆಣಸಾಟ ನಡೆದು ಒಂದು ಚುನಾವಣೆಯಲ್ಲಿ ಶಾಮನೂರು ಹಾಗೂ ಮತ್ತೊಂದು ಚುನಾವಣೆಯಲ್ಲಿ ಜಿ.ಮಲ್ಲಿಕಾರ್ಜುನಪ್ಪ ಗೆಲುವು ಹಂಚಿಕೊಂಡಿದ್ದರು.

        ಹೀಗೆ 1998ರಿಂದ ದಾವಣಗೆರೆ ಕ್ಷೇತ್ರದಲ್ಲಿ ಆರಂಭವಾದ ಲಿಂಗಾಯತ ಸಮುದಾಯದ ನಡುವಿನ ಕಾಳಗವು, 2004ರಿಂದ ಜಿ.ಮಲ್ಲಿಕಾರ್ಜುನಪ್ಪನವರ ಪುತ್ರ ಜಿ.ಎಂ.ಸಿದ್ದೇಶ್ವರ್ ಹಾಗೂ ಶಾಮನೂರು ಶಿವಶಂಕರಪ್ಪನವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಶಿಫ್ಟ್ ಆಗಿದ್ದು, 2004, 2009 ಹಾಗೂ 2014ರ ಚುನಾವಣೆಗಳಲ್ಲಿ ಬಿಜೆಪಿಯಿಂದ ಜಿ.ಎಂ.ಸಿದ್ದೇಶ್ವರ ಹಾಗೂ ಕಾಂಗ್ರೆಸ್‍ನಿಂದ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಮಧ್ಯೆ ಮುಂದೆವರೆಯುತ್ತಾ ಬಂದಿತ್ತು.

        ಆದರೆ, ಮೂರು ಲೋಕಸಭಾ ಚುನಾವಣೆಯ ಸತತ ಸೋಲಿನಿಂದ ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ್ ಪರಾಭವಗೊಂಡಿದ್ದರಿಂದ ಈ ಬಾರಿಯ ಲೋಕಸಭೆಗೆ ನಿರುತ್ಸಾಹ ತೋರಿದ ಕಾರಣಕ್ಕೆ ಹಾಗೂ ಶಾಮನೂರು ಶಿವಶಂಕರಪ್ಪನವರು ವಯಸ್ಸಿನ ಕಾರಣ ನೀಡಿ ಟಿಕೆಟ್ ನಿರಾಕರಿಸಿದರ ಪರಿಣಾಮ ಈ ಬಾರಿ ಕುರುಬ ಸಮುದಾಯದ ಹೆಚ್.ಬಿ.ಮಂಜಪ್ಪನವರಿಗೆ ಕಾಂಗ್ರೆಸ್ ದೊರೆತಿದೆ.

        ಹೀಗೆ ಕಾಂಗ್ರೆಸ್ ಟಿಕೆಟ್ ಒಲಿದ ಹೆಚ್.ಬಿ.ಮಂಜಪ್ಪ ಹಾಗೂ ನಾಲ್ಕನೇಯ ಬಾರಿ ಮರು ಆಯ್ಕೆ ಬಯಸಿ ಬಿಜೆಪಿಯಿಂದ ಅಖಾಡಕ್ಕೆ ಇಳಿದ ಲಿಂಗಾಯತ ಸಮುದಾಯದ ಮಧ್ಯೆ ಲೋಕ ಸಮರ ನಡೆಯುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ.

        ಜಿಲ್ಲೆಯಲ್ಲಿ ಹೆಚ್ಚು ಜನಸಂಖ್ಯೆ ಹಾಗೂ ಮತದಾರರನ್ನು ಹೊಂದಿರುವ ವೀರಶೈವ ಲಿಂಗಾಯತ ಸಮುದಾಯವು ತಮ್ಮ ಸಮುದಾಯಕ್ಕೆ ಸೇರಿರುವ ಬಿಜೆಪಿಯ ಜಿ.ಎಂ.ಸಿದ್ದೇಶ್ವರ್ ಅವರನ್ನು ಬೆಂಬಲಿಸುವ ಎಲ್ಲಾ ಸಾಧ್ಯತೆ ಇದ್ದು, ಲಿಂಗಾಯತ ಸಮುದಾಯದ ಜೊತೆಗೆ ಇತರೆ ಸಮುದಾಯಗಳ ಮತದಾರರನ್ನು ಸೆಳೆಯಲು ಬಿಜೆಪಿ ರಣತಂತ್ರ ರೂಪಿಸುತ್ತಿದೆ.

         ಅದರಂತೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹೆಚ್.ಬಿ.ಮಂಜಪ್ಪನವರು ಕುರುಬ ಸಮುದಾಯಕ್ಕೆ ಸೇರಿರುವ ಕಾರಣಕ್ಕೆ ಕುರುಬ ಸಮುದಾಯದ ಶೇಕಡವಾರು ಮತಗಳು ಮಂಜಪ್ಪರ ಜೇಬಿಗೆ ಸೇರಲಿವೆ. ಅದರಂತೆ ಕುರುಬ ಸಮುದಾಯವು ಮುಂಚೆಯಿಂದಲೂ ಅಹಿಂದ ಸಮುದಾಯಕ್ಕೆ ನಾಯಕತ್ವ ನೀಡುತ್ತಾ ಬಂದಿದ್ದು, ಅಲ್ಪಸಂಖ್ಯಾ-ದಲಿತ-ಹಿಂದುಳಿದ (ಅಹಿಂದ) ಸಮುದಾಯದ ಮತ ಬುಟ್ಟಿಗೆ ಕೈ ಹಾಕಲು ತಂತ್ರ ರೂಪಿಸಿದೆ.

          ಹೀಗೆ ಕಾಂಗ್ರೆಸ್-ಬಿಜೆಪಿ ಪಕ್ಷಗಳ ಮಧ್ಯೆ ರಾಜಕೀಯವಾಗಿ ಚುನಾವಣೆ ನಡೆದರೂ, ಒಳಗೊಳಗೆ ಲಿಂಗಾಯತ ಮತ್ತು ಕುರುಬ ಸಮುದಾಯಗಳ ಮಧ್ಯೆ ಕಾಳಗ ನಡೆಯುವುದಂತು ನಿಶ್ಚಿತ ಎಂಬ ವಿಶ್ಲೇಷಣೆ ಕ್ಷೇತ್ರದಾದ್ಯಂತ ಕೇಳಿ ಬರುತ್ತಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link