ಆಯುಧ ಪೂಜೆ, ವಿಜಯದಶಮಿಗೆ ದೇವನಗರಿ ಸಜ್ಜು

ದಾವಣಗೆರೆ:

       ನಾಡ ಹಬ್ಬ ದಸರಾ ಹಿನ್ನೆಲೆಯಲ್ಲಿ ದೇವನಗರಿಯ ಜನತೆ ಆಯುಧ ಪೂಜೆ ಹಾಗೂ ವಿಜಯ ದಶಮಿಗೆ ಭರದ ಸಿದ್ಧತೆ ನಡೆಸುತ್ತಿದ್ದಾರೆ. ದುರ್ಗಾಷ್ಟಮಿ ದಿನವಾಗಿದ್ದ ಬುಧವಾರದಿಂದಲೇ ನಗರದಲ್ಲಿ ಹಬ್ಬದ ಸಡಗರ ನಿರ್ಮಾಣವಾಗಿದೆ.

      ಕಳೆದ ಮಹಾಲಯ ಅಮವಾಸ್ಯೆಯ ಮರುದಿನದಿಂದಲೇ ನಗರದಲ್ಲಿ ನವರಾತ್ರಿ ಆಚರಣೆ ಕಳೆಗಟ್ಟಿದ್ದು, ವಿವಿಧ ದೇವಸ್ಥಾನಗಳಿಗೆ ಶಕ್ತಿ ದೇವತೆಗೆ ದಿನಕ್ಕೊಂದೊಂದು ರೂಪ ನೀಡಿ, 9 ವಿವಿಧ ರೂಪಗಳಲ್ಲಿ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಲಾಗುತ್ತಿದ್ದು, ಗುರುವಾರ ಶರನವರಾತ್ರಿಯ ಕೊನೆ ಪೂಜೆ ನೆರವೇರಲಿದೆ. ನಗರದೇವತೆ ದುರ್ಗಾಂಬಿಕಾ ದೇವಸ್ಥಾನ, ನಿಟುವಳ್ಳಿ ದುರ್ಗಾಂಬಿಕಾ ದೇವಸ್ಥಾನ, ನಿಜಲಿಂಗಪ್ಪ ಬಡಾವಣೆಯ ಶಾರದಾ ದೇವಸ್ಥಾನ ಹಾಗೂ ನಗರದ ವಿವಿಧೆಡೆಗಳಲ್ಲಿರುವ ಬನಶಂಕರಿ, ರಾಜರಾಜೇಶ್ವರಿ, ಬನ್ನಿ ಮಹಾಂಕಾಳಿ, ಪಾರ್ವತಿ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಪ್ರತಿದಿನ ವಿಶೇಷ ಪೂಜೆ, ಅಲಂಕಾರ, ಭಜನೆ, ಆರಾಧನೆ, ಮಂತ್ರ ಪಠಣ ಸಾಂಗವಾಗಿ ನೆರವೇರುತ್ತಿವೆ.

      ನಗರದ ಪಿಬಿ ರಸ್ತೆಯಲ್ಲಿರುವ ಶ್ರೀಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿರುವ ಸಾರ್ವಜನಿಕ ವಿಜಯ ದಶಮಿ ಮಂಟಪದಲ್ಲೂ ಶಕ್ತಿ ದೇವತೆ ಆರಾಧನೆ ನೆರವೇರುತ್ತಿದ್ದು, ಶುಕ್ರವಾರ ಇಲ್ಲಿಯೇ ಜಿಲ್ಲಾಧಿಕಾರಿಗಳಿಂದ ಅಂಬುಛೇದನ ಜರುಗಲಿದೆ.

       ವಿಜಯ ದಶಮಿಯ ಹಿನ್ನೆಲೆಯಲ್ಲಿ ನಗರವು ಮಧುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. ನಗರದ ಪ್ರಮುಖ ರಸ್ತೆ, ವೃತ್ತಗಳು ಕೇಸರಿ ಬಾವುಟ, ಬಂಟಿಂಗ್ಸ್‍ಗಳಿಂದ ಅಲಂಕೃತಗೊಂಡು ಸಂಪೂರ್ಣ ಕೇಸರಿಮಯವಾಗಿವೆ. ಬುಧವಾರದಂದು ಜನರು ಮರುದಿನದ ಆಯುಧಪೂಜೆ ಸಿದ್ಧತೆಯಲ್ಲಿ ತೊಡಗಿದ್ದು, ಪೂಜೆಗೆ ಸಾಮಾನ್ಯವಾಗಿ ಇಡುವ ಜೀವನೋಪಯೋಗಿ ಮತ್ತು ಉದ್ಯೋಗ ಸಂಬಂಧಿ ಸಲಕರಣೆಗಳು, ಪರಿಕರ, ಆಯುಧ, ವಾಹನಗಳನ್ನು ಶುಚಿಗೊಳಿಸುತ್ತಿದ್ದ ದೃಶ್ಯ ಅಲ್ಲಲ್ಲಿ ಸಾಮಾನ್ಯವಾಗಿತ್ತು. ಅಲ್ಲದೆ, ಪೂಜೆಗೆ ಬೇಕಾಗಿದ್ದ ಫಲ-ಪುಷ್ಪ ಖರೀದಿ ಬುಧವಾರ ಭರದಿಂದ ನಡೆದಿತ್ತು.

      ನಗರದ ಹೈಸ್ಕೂಲ್ ಮೈದಾನದಲ್ಲಿ ಪ್ರಪ್ರಥಮ ಬಾರಿಗೆ ಆಯೋಜಿಸಿರುವ ಹಬ್ಬದ ಮಾರುಕಟ್ಟೆಯಲ್ಲಿ ಹೂವು-ಹಣ್ಣು ಸೇರಿದಂತೆ ಹಬ್ಬಕ್ಕೆ ಅವಶ್ಯವಿರುವ ವಸ್ತುಗಳ ಖರೀದಿ ಭರದಿಂದ ಸಾಗಿತ್ತು. ಹಣ್ಣುಗಳ ಬೆಲೆ ಸ್ಥಿರವಾಗಿದ್ದರೂ, ಹೂವಿನ ಬೆಲೆ ಗಗನಕ್ಕೇರಿತ್ತು. ಬೆಳಗ್ಗೆ ಮಂದವಾಗಿದ್ದ ವ್ಯಾಪಾರವು ಸಂಜೆ ವೇಳೆಗೆ ಚುರುಕು ಪಡೆದಿತ್ತು. ಗಿಜಿಗುಡುತ್ತಿದ್ದ ಮಾರುಕಟ್ಟೆಯಲ್ಲಿ ಜನರು ಹಬ್ಬದ ಖರೀದಿಯಲ್ಲಿ ನಿರತರಾಗಿದ್ದರು. ಕೆ.ಆರ್. ಮಾರುಕಟ್ಟೆ, ಮಂಡಿಪೇಟೆ, ಚೌಕಿಪೇಟೆ, ಗಡಿಯಾರ ಕಂಬ, ಹೊಂಡದ ವೃತ್ತ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಹಬ್ಬದ ವ್ಯಾಪಾರ-ವಹಿವಾಟು ನಡೆಯುತ್ತಿತ್ತು.

      ಆಯುಧಪೂಜೆಗೆ ಅತ್ಯವಶ್ದಯವಾಗಿ ಬೇಕಾಗಿರುವ ಬೂದು ಕುಂಬಳಕಾಯಿ, ಸಿಹಿ ಕುಂಬಳಕಾಯಿ ಗಾತ್ರಕ್ಕೆ ತಕ್ಕಂತೆ 20 ರೂಗಳಿಂದ 300 ರೂ.ವರೆಗೆ ಬಿಕರಿಯಾಗುತ್ತಿತ್ತು. ಪ್ರತಿ ಕೆಜಿ ಸೇಬು 120 ರೂ., ಮೊಸಂಬಿ 70 ರೂ., ಕಿತ್ತಳೆ 60 ರೂ., ದಾಳಿಂಬೆ 120 ರೂ., ಸಪೋಟ 60 ರೂ., ದ್ರಾಕ್ಷಿ 100 ರೂ. ಮತ್ತು ಬಾಳೆ ಹಣ್ಣು ಡಜನ್‍ಗೆ 50 ರೂ.ನಂತೆ ಬೆಲೆ ಮಾರಾಟವಾಗುತ್ತಿದ್ದರೆ, ಪ್ರತಿ ಮಾರು ಚೆಂಡು ಹೂವು 60 ರೂ., ಸೇವಂತಿ 30 ರೂ., ಕಲರ್ ಸೇವಂತಿ 20 ರೂ., ಮಲ್ಲಿಗೆ 40 ರೂ., ಕನಕಾಂಬರಿ 30 ರೂ.ನಂತೆ ಮಾರಾಟವಾಗುತ್ತಿದ್ದವು. ಹೂವಿನ ಹಾರಗಳಿಗೆ 80ರಿಂದ 160 ರೂ.ವರೆಗೆ ಬೆಲೆ ಇತ್ತು. ಅಲ್ಲದೆ, ನಿಂಬೆ ಹಣ್ಣು, ಬಾಳೆ ಕಂದು, ಅಡಿಕೆ ಹೊಂಬಾಳೆ, ಮಾವಿನ ತೋರಣ, ಪೂಜಾ ಸಾಮಗ್ರಿ, ವಾಹನ ಅಲಂಕಾರಿಕ ವಸ್ತುಗಳು ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿದ್ದ ದೃಶ್ಯ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link