ದಾವಣಗೆರೆ:
ಕೇಂದ್ರ ಲೋಕಸೇವಾ ಆಯೋಗದ (ಯು.ಪಿ.ಎಸ್.ಸಿ) ಪರೀಕ್ಷೆಯಲ್ಲಿ ದಾವಣಗೆರೆಯ ಪೋರ 336ನೇ ರ್ಯಾಂಕ್ ಪಡೆಯುವ ಮೂಲಕ ಸಾಧನೆಗೈದಿದ್ದಾರೆ.
ನಗರದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿಯ ಡಬಲ್ ರಸ್ತೆಯ ನಿವಾಸಿ ವಕೀಲ ಮಿರ್ಜಾ ಇಸ್ಮಾಯಿಲ್ ಅವರ ಪುತ್ರ ಮಿರ್ಜಾ ಖಾದರ್ ಬೇಗ್ ಯುಪಿಎಸ್‍ಸಿ ಪರೀಕ್ಷೆಯಲ್ಲಿ 336ನೇ ರ್ಯಾಂಕ್ ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ನಗರದ ಲೂಡ್ಸ್ ಬಾಯ್ಸ್ ಹೈಸ್ಕೂಲ್‍ನಲ್ಲಿ ಓದಿದ್ದ ಮಿರ್ಜಾ ಖಾದರ್ ಬೇಗ್ ಅವರು ಬಿಐಇಟಿಯಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್‍ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದರು. 2014ರಲ್ಲಿ ಅವರು ಫ್ರಾನ್ಸ್‍ಗೆ ತೆರಳಿ, ಚಿನ್ನದ ಪದಕದೊಂದಿಗೆ ಎಂ.ಎಸ್ ಪಾಸು ಮಾಡಿದ್ದರು.
ಅವರ ಸಾಧನೆಯನ್ನು ನೋಡಿ ಕ್ಯಾಂಪಸ್ ಇಂಟವ್ರ್ಯೂನಲ್ಲಿ ಜರ್ಮನಿಯ ಪ್ರತಿಷ್ಠಿತ ಎಬಿಬಿ ಕಂಪನಿಯಲ್ಲಿ ನೌಕರಿಯೂ ಸಿಕ್ಕಿತ್ತು. ಎರಡು ವರ್ಷಗಳ ಕಾಲ ಅಲ್ಲಿ ವೃತ್ತಿ ಜೀವನ ನಡೆಸಿ, ತಾಯ್ನಾಡಿಗೆ ಮರಳಿದ್ದರು.
ವಕೀಲರಾಗಿರುವ ತಂದೆ ಮಿರ್ಜಾ ಇಸ್ಮಾಯಿಲ್ ಹಾಗೂ ತಾಯಿ ಹಬಿಬಾ ಅವರ ಒತ್ತಾಸೆಯಂತೆ ಖಾದರ್ ಅವರು ಐಎಎಸ್ ಅಧಿಕಾರಿಯಾಗುವ ಕನಸು ಕಂಡರು. ದೆಹಲಿಯತ್ತ ಪ್ರಯಾಣ ಬೆಳೆಸಿ ಐಎಎಸ್ ತರಬೇತಿಯನ್ನು ಪಡೆದುಕೊಂಡರು. 2017ರಲ್ಲಿ ಮೊದಲ ಬಾರಿಗೆ ಯುಪಿಎಸ್‍ಸಿ ಪರೀಕ್ಷೆಯನ್ನು ತೆಗೆದುಕೊಂಡಿದ್ದರು. ಆದರೆ, ಮುಖ್ಯ ಪರೀಕ್ಷೆಯಲ್ಲಿ ಯಶಸ್ಸು ಕಂಡಿರಲಿಲ್ಲ. 2018ನೇ ಸಾಲಿನಲ್ಲಿ ಯುಪಿಎಸ್‍ಸಿ ಪರೀಕ್ಷೆ ಬರೆದು 336ನೇ ರ್ಯಾಂಕ್ ಗಳಿಸಿದ್ದಾರೆ.
ಯುಪಿಎಸ್‍ಸಿ ಪರೀಕ್ಷೆ ತೆಗೆದುಕೊಳ್ಳುವಂತೆ ತಂದೆ-ತಾಯಿ ಒತ್ತಾಯಿಸಿದರು. ಅವರಿಬ್ಬರು ನೀಡಿದ ಪ್ರೇರಣೆಯಿಂದಾಗಿಯೇ ಇಂದು ಸಾಧನೆ ಮಾಡಲು ಸಾಧ್ಯವಾಗಿದೆ. ಭಾರತೀಯ ನಾಗರಿಕ ಸೇವೆಗೆ ಸೇರುತ್ತಿರುವುದಕ್ಕೆ ಖುಷಿಯಾಗುತ್ತಿದೆ. ದಿನಾಲೂ ಮೂರ್ನಾಲ್ಕು ಗಂಟೆ ಅಧ್ಯಯನ ಮಾಡುತ್ತಿದ್ದೆ. ಪರೀಕ್ಷೆ ಸಮೀಪಿಸಿದಾಗ ದಿನಕ್ಕೆ 10 ಗಂಟೆಗೂ ಹೆಚ್ಚು ಕಾಲ ಓದುತ್ತಿದ್ದೆ ಎಂದು ತಿಳಿಸಿದ್ದಾರೆ.
ನಾನು ಎಲ್‍ಎಲ್‍ಬಿ ಪದವಿ ಪಡೆದ ಬಳಿಕ 1979ರಲ್ಲಿ ಯುಪಿಎಸ್‍ಸಿ ಪರೀಕ್ಷೆಯನ್ನು ತೆಗೆದುಕೊಂಡಿದ್ದೆ. ಪೂರ್ವ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದೆ. ಆದರೆ, ಅನಿವಾರ್ಯ ಕಾರಣದಿಂದ ಮುಖ್ಯ ಪರೀಕ್ಷೆಯನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಕೆಪಿಎಸ್‍ಸಿ ಪರೀಕ್ಷೆಯನ್ನೂ ಎರಡು ಬಾರಿ ತೆಗೆದುಕೊಂಡಿದ್ದರೂ ಪಾಸಾಗಲು ಸಾಧ್ಯವಾಗಿರಲಿಲ್ಲ. ನಮ್ಮ ಮನೆಯಲ್ಲಿ ಒಬ್ಬರನ್ನಾದರೂ ಐಎಎಸ್ ಅಧಿಕಾರಿ ಮಾಡಬೇಕೆಂಬ ಕನಸು ಕಾಣುತ್ತಿದ್ದೆ. ನನ್ನಿಂದ ಸಾಧ್ಯವಾಗದಿರುವುದನ್ನು ಮಗ ಮಾಡಿರುವುದಕ್ಕೆ ತುಂಬಾ ಸಂತಸವನ್ನುಂಟು ಮಾಡಿದೆ ಎಂದು ಮಿರ್ಜಾ ಖಾದರ್ ಬೇಗ್ ಅವರ ತಂದೆ ಮಿರ್ಜಾ ಇಸ್ಮಾಯಿಲ್ ತಿಳಿಸಿದ್ದಾರೆ.