ದಾವಣಗೆರೆ:
ಮಾಸಿಕ ಶೇ.3ರ ಬಡ್ಡಿ ಆಸೆ ತೋರಿಸಿ, 500 ಕೋಟಿ ಗೂ ಅಧಿಕ ಹಣ ವಂಚಿಸಿ ಪರಾರಿಯಾಗಿರುವ ಚಿನ್ನದ ವ್ಯಾಪಾರಿ, ಐಎಂಎ ಜ್ಯುವೆಲ್ಸ್ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್ ಒಡೆತನದ ಕಂಪನಿ ಮಧ್ಯ ಕರ್ನಾಟದ ದಾವಣಗೆರೆ ಜಿಲ್ಲೆಯ ಸುಮಾರು ಮೂರುವರೆ ಸಾವಿರಕ್ಕೂ ಹೆಚ್ಚುಜನರಿಗೆ ಟೋಪಿ ಹಾಕಿರುವುದು ಬೆಳಕಿಗೆ ಬಂದಿದೆ.
ನಗರದ ಶಂಕರ್ ವಿಹಾರ ಬಡಾವಣೆಯ ಗ್ಲೋಬಲ್ ಸ್ಕೂಲ್ ಶಾಲಾ ಕಟ್ಟಡದಲ್ಲಿರುವ ಐಎಂಎ ಜುವೆಲ್ಸ್‍ನ ಕಚೇರಿಗೆ ಬಡ್ಡಿ ಆಸೆಗೆ ಮರುಳಾಗಿ ವಂಚನೆಗೆ ಒಳಗಾಗಿರುವ ನೂರಾರು ಜನರು ಮಂಗಳವಾರ ಧಾವಿಸಿದ್ದರು. ಆದರೆ, ಕಚೇರಿಗೆ ವಂಚಕ ಕಂಪೆನಿ ಬೀಗ ಜಡೆದಿರುವ ಕಾರಣ ವಂಚನೆಗೆ ಒಳಗಾದವರು ನ್ಯಾಯಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೊರೆ ಹೋಗುತ್ತಿದ್ದಾರೆ.
ಹೂಡಿಕೆ ಮಾಡುವ ಹಣಕ್ಕೆ ಮಾಸಿಕ ಶೇ.3ರಷ್ಟು ಬಡ್ಡಿ ನೀಡುವುದಾಗಿ ಜನರಲ್ಲಿ ಆಸೆ ಹುಟ್ಟಿಸಿ, 2006ರಲ್ಲಿ ಹುಟ್ಟಿಕೊಂಡ ಐಎಂಎ ಸಮೂಹ ಸಂಸ್ಥೆಯ ಶಾಖೆಯು ನಗರದಲ್ಲಿ ಮೂರ್ನಾಲ್ಕು ವರ್ಷಗಳ ಹಿಂದಷ್ಟೇ ತಲೆ ಎತ್ತಿತ್ತು. ಅಲ್ಲದೇ, ಶೇ.3ರಷ್ಟು ಬಡ್ಡಿ ಸಿಗುತ್ತದೆಂಬ ಆಸೆಗೆ ಬಿದ್ದ ಜನರೂ ಸಹ ಐಎಂಎ ಸಂಸ್ಥೆ ಮಾಲೀಕ ಹಾಗೂ ಅಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳ ಮಾತಿಗೆ ಮರುಳಾಗಿ ಹಣ ಹೂಡಿದ್ದರು. ಹಣ ಹೂಡಿಕೆ ಮಾಡಿದ ನಂತರ ಕೆಲ ತಿಂಗಳು ಬಡ್ಡಿ ಹಣ ಬಂದಿದ್ದರಿಂದ, ಹಿರಿ, ಹಿರಿ ಹಿಗ್ಗಿದ್ದ ಹೂಡಿಕೆದಾರರು ಈಗ ಐಎಂಎ ಜ್ಯುವೆಲ್ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್ ತಲೆ ಮರೆಸಿಕೊಂಡಿರುವುದರಿಂದ ದಿಕ್ಕು ತೋಚಿದವರಂತಾಗಿದ್ದಾರೆ.
ಹೂಡಿಕೆದಾರರ ಸಂಖ್ಯೆ ನೋಡ ನೋಡುತ್ತಿದ್ದಂತೆಯೇ ಹೆಚ್ಚಾಗುತ್ತಲೇ ಇದ್ದು, ಈ ಮಧ್ಯೆ ಶಂಕರ ವಿಹಾರ ಬಡಾವಣೆಯ ಗ್ಲೋಬಲ್ ಸ್ಕೂಲ್‍ನ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಐಎಂಎ ಕಚೇರಿಗೆ ಗಾಂಧಿ ನಗರ ಪೊಲೀಸ್ ಅಧಿಕಾರಿ, ಸಿಬ್ಬಂದಿ ಸಹ ಭೇಟಿ ನೀಡಿ, ಪರಿಶೀಲಿಸಿದರು. ಶಾಲೆ ಮುಖ್ಯಸ್ಥರು, ಸಿಬ್ಬಂದಿ ಜೊತೆ, ಕಟ್ಟಡದ ಮುಖ್ಯಸ್ಥರ ಜೊತೆಗೆ ಐಎಂಎ ಕುರಿತಂತೆ ಪೊಲೀಸರು ಮಾಹಿತಿಯನ್ನು ಕಲೆ ಹಾಕಿದ್ದಾರೆ.
ಶೇಕಡಾ 3ರಷ್ಟು ಬಡ್ಡಿ ಆಸೆಗೆ ಸಾಲ ಮಾಡಿ, ಬ್ಯಾಂಕ್‍ನಲ್ಲಿ ಸಾಲ, ಕೈಗಡ ಪಡೆದು, ಚಿನ್ನಾಭರಣ ಅಡ ಇಟ್ಟು, ಮನೆ ಲೀಸ್‍ಗೆ ಕೊಟ್ಟು, ವಾಹನಗಳನ್ನು ಮಾರಾಟ ಮಾಡಿ, ಹಣ ಕಟ್ಟಿದವರ ಸಂಖ್ಯೆಯೂ ಸಾಕಷ್ಟು ಸಂಖ್ಯೆಯಲ್ಲಿದ್ದು, ಕೂಲಿ ಮಾಡುವವರಿಂದ ದೊಡ್ಡ ಶ್ರೀಮಂತರು, ನಿರುದ್ಯೋಗಿ ಯಿಂದ ದೊಡ್ಡ ಹುದ್ದೆಯಲ್ಲಿದ್ದು ನಿವೃತ್ತಿಯಾದವರು ಹೀಗೆ ನಾನಾ ವರ್ಗದ ಈಗ ಹಣ ಕಳೆದುಕೊಂಡು ದಿಕ್ಕೇ ತೋಚದಂತಾಗಿದ್ದಾರೆ.
ಮೂಲವೊಂದರ ಪ್ರಕಾರ ದಾವಣಗೆರೆ ನಗರ, ಗ್ರಾಮಾಂತರ ಹಾಗೂ ಜಿಲ್ಲೆಯ ವಿವಿಧೆಡೆಯಿಂದ ಸುಮಾರು 3500 ಸಾವಿರಕ್ಕೂ ಅಧಿಕ ಜನರು ಕನಿಷ್ಟ 50 ಸಾವಿರ ರೂಗಳಿಂದ ಹಿಡಿದು ಗರಿಷ್ಟ 50 ಲಕ್ಷದವರೆಗೂ ಹೂಡಿಕೆ ಮಾಡಿದ್ದಾರೆ. ದಾವಣಗೆರೆ ಚೌಕಿಪೇಟೆಯ ನಿವಾಸಿ, ನಿವೃತ್ತ ಎಂಜಿನಿಯರ್ ಮೊಹಮ್ಮದ್ ಅನ್ಸರ್ ಎಂಬುವವರೇ 40.50 ಲಕ್ಷ ರೂ. ಹಣ ಹೂಡಿದ್ದು, ಐಎಂಎ ಮಾಲೀಕನ ಅಸಲಿಯತ್ತು ಬಯಲಾದ ಮೇಲೆ ಇಲ್ಲಿನ ಗಾಂಧಿನಗರ ಠಾಣೆಯಲ್ಲಿ ವಂಚಕರ ವಿರುದ್ಧ ಕ್ರಮಕ್ಕೆ ದೂರು ದಾಖಲಿಸಿದ್ದಾರೆ.
ಇಬ್ಬರು ನಿವೃತ್ತ ಅಧಿಕಾರಿಗಳು ತಮ್ಮ ನಿವೃತ್ತಿ ವೇಳೆ ಬಂದ ಹಣ ಸಂಪೂರ್ಣ ತಂದು ಇಲ್ಲಿಗೆ ಹೂಡಿಕೆ ಮಾಡಿದ್ದರು. 25 ಲಕ್ಷಕ್ಕಿಂತಲೂ ಅಧಿಕ ಠೇವಣಿ ಹೂಡಿದವರೂ ಇದ್ದು, ಅದು 50 ಲಕ್ಷ, 1 ಕೋಟಿ ಸಹ ದಾಟಿರಬಹುದು. ಹೀಗಾಗಿ ದಾವಣಗೆರೆ ಜಿಲ್ಲೆಯೊಂದರಲ್ಲಿಯೇ ಕೋಟ್ಯಾಂತರ ರೂ. ಪಂಗನಾಮ ಹಾಕಿರಬಹುದು ಎನ್ನುತ್ತಾರೆ. ವಂಚನೆಗೆ ಒಳಗಾಗಿರುವ ಹೂಡಿಕೆದಾರರು.
ಇಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡಿರುವವರಿಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಅಧಿಕಾರಿಗಳೂ ಸೂಚಿಸುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಜನರು ಹಣವನ್ನು ಹೂಡಿಕೆ ಮಾಡಿದ್ದರಿಂದ ವಿಷಯ ಗೊತ್ತಾದವರು ನೂರಾರು ಸಂಖ್ಯೆಯಲ್ಲಿ ಐಎಂಎ ಕಚೇರಿ ಬಳಿ ಬಂದರೆ, ಮತ್ತೆ ಕೆಲವರು ಡಿಸಿ ಕಚೇರಿ, ಎಸ್ಪಿ ಕಚೇರಿ, ಪೊಲೀಸ್ ಠಾಣೆಗಳಿಗೆ ಎಡ ತಾಕುತ್ತಿದ್ದಾರೆ. ಸಾವಿರಾರು ಜನರಿಗೆ ವಂಚನೆಯಾದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟರ ಕಚೇರಿಯಲ್ಲೇ ಏಕಗವಾಕ್ಷಿ(ಸಿಂಗಲ್ ವಿಂಡೋ)ಯಡಿ ಎಲ್ಲರಿಂದಲೂ ದೂರು ದಾಖಲಿಸಿಕೊಳ್ಳಬೇಕು ಎಂದು ವಂಚನೆಗೊಳಗಾದ ಜನರು ಒತ್ತಾಯಿಸುತ್ತಿದ್ದಾರೆ. ಆದರೆ, ಪೊಲೀಸ್ ಅಧಿಕಾರಿಗಳು ಮಾತ್ರ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗೆ ಹೋಗುವಂತೆ ಸಲಹೆ ನೀಡಿದ್ದಾರೆ.