ದಾವಣಗೆರೆ
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಇಂದು ಬೆಳಿಗ್ಗೆ ಜಿಲ್ಲಾಡಳಿತ ಕಚೇರಿಯಲ್ಲಿ ‘ಇ-ಆಫೀಸ್’ ತಂತ್ರಾಂಶಕ್ಕೆ ಚಾಲನೆ ನೀಡಿದರು.
ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಇಂದಿನಿಂದ ಸೇವೆಗೆ ಸಿದ್ದವಾಗಿರುವ ಇ-ಆಫೀಸ್ ಉದ್ಘಾಟಿಸಿ ಮಾತನಾಡಿದ ಅವರು, ಇ-ಆಫೀಸ್‍ನಿಂದ ಕಡತಗಳ ವಿಲೇವಾರಿಗೆ ವೇಗ ಮತ್ತು ನಿಖರತೆ ಸಿಗಲಿದೆ ಎಂದು ಹೇಳಿದರು.
ಪ್ರಾದೇಶಿಕ ಆಯುಕ್ತರಾದ ಹರ್ಷಗುಪ್ತರವರು ಸೆಪ್ಟೆಂಬರ್ 30 ರೊಳಗಾಗಿ ಎಲ್ಲಾ ಜಿಲ್ಲಾಧಿಕಾರಿಗಳು ತಮ್ಮ ತಮ್ಮ ಕಚೇರಿಗಳಲ್ಲಿ ಇ-ಆಫೀಸ್‍ನಲ್ಲಿ ಕಾರ್ಯ ನಿರ್ವಹಿಸಲು ಅನುವಾಗುವಂತೆ ಸಿದ್ಧತೆ ಮಾಡಿಕೊಳ್ಳಬೇಕು. ಅಕ್ಟೋಬರ್ 01 ರಿಂದ ಇ-ಆಫೀಸ್‍ನಲ್ಲಿ ಕಡತಗಳ ವಿಲೇವಾರಿ ಆಗಬೇಕು ಎಂದು ಸೂಚಿಸಿದನ್ವಯ ಅಕ್ಟೋಬರ್ 1 ರಿಂದಲೇ ಚಾಲನೆ ನೀಡಲಾಗಿದೆ. ಇದರಿಂದ ಕಡತಗಳ ವಿಲೇವಾರಿಯಲ್ಲಿನ ವಿಳಂಬ ತಪ್ಪಿ ವೇಗ ದೊರೆಯಲಿದೆ. ಹಾಗೂ ಕಡತವು ಯಾವ ಸಿಬ್ಬಂದಿ ಬಳಿ ಇದೆ, ಅದರ ಸ್ಟೇಟಸ್ ಏನಿದೆ ಎಂಬ ಮಾಹಿತಿ ತಕ್ಷಣಕ್ಕೆ ದೊರಕಿ ಸಾರ್ವಜನಿಕರೂ ಅಲೆದಾಡುವುದು ತಪ್ಪಲಿದೆ ಎಂದರು.
ಇ-ಆಫೀಸ್ ಯಶಸ್ವಿಯಾಗಲು ಕಾರಣಕರ್ತರಾದ ಎನ್.ಐ.ಸಿಯ ಉದಯಕುಮಾರ್, ರಮೇಶ್ ಹಾಗೂ ಸಿಬ್ಬಂದಿಗಳಿಗೆ ಶುಭ ಹಾರೈಸಿ ತಮ್ಮ ಕಾರ್ಯ ಯಶಸ್ವಿಯಾಗಲಿ ಎಂದರು.ಪ್ರಭಾರ ಅಪರ ಜಿಲ್ಲಾಧಿಕಾರಿ ನಜ್ಮಾ, ಚುನಾವಣಾ ತಹಶೀಲ್ದಾರ್ ಪ್ರಸಾದ್, ಶಿರಸ್ತೇದಾರರಾದ ಜಿ.ಸಿ.ಕುಮಾರ್, ರಾಮಸ್ವಾಮಿ.ಹೆಚ್, ವಸಂತಕುಮಾರಿ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ