ಮತದಾರರ ಪಟ್ಟಿ ಪರಿಷ್ಕರಣೆಗೆ ಡಿಸಿ ಸೂಚನೆ

ದಾವಣಗೆರೆ :

      ಜಿಲ್ಲೆಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಮತದಾರರ ಪರಿಶೀಲನಾ ಕಾರ್ಯಕ್ರಮವನ್ನು(ಎಲೆಕ್ಟರ್ಸ್ ವೆರಿಫಿಕೇಷನ್ ಪ್ರೊಗ್ರಾಂ) ಯಶಸ್ವಿಗೊಳಿಸಲು ಸಂಬಂಧಿಸಿದ ಎಲ್ಲ ಅಧಿಕಾರಿಗಳು ಜಿಲ್ಲೆಯಾದ್ಯಂತ ಸ್ವೀಪ್ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಡೆಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೂಚನೆ ನೀಡಿದರು.

      ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಗುರುವಾರ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಮತದಾರರ ಪರಿಶೀಲನಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜಿಲ್ಲೆಯಲ್ಲಿ ಸ್ವೀಪ್ ಚಟುವಟಿಕೆಯನ್ನು ಚುರುಕುಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     2020ರ ಜನವರಿ 1ಕ್ಕೆ 18 ವರ್ಷ ತುಂಬುವ ಎಲ್ಲ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಬೇಕಿದ್ದು, ಈ ಸಂಬಂಧ ಜಾಗೃತಿ ಮೂಡಿಸುವ ಸ್ವೀಪ್ ಚಟುವಟಿಕೆ ಚುರುಕಾಗಿ ಸಾಗಬೇಕು. ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಅರ್ಹ ಮತದಾರರು, ಹಾಗೂ ಮತದಾರರ ಪಟ್ಟಿಯಲ್ಲಿದ್ದೂ ಹೆಸರು ತಪ್ಪಾಗಿರುವುದು, ತಪ್ಪು ವಿಳಾಸ, ಸ್ಥಳ ಬದಲಾವಣೆ, ಭಾವಚಿತ್ರ ದೋಷಗಳು, ಮರಣ, ವರ್ಗಾವಣೆ ಈ ರೀತಿಯಾಗಿ ಯಾವುದೇ ರೀತಿಯ ದೋಷಗಳನ್ನು ಇವಿಪಿ ಕಾರ್ಯಕ್ರಮದಡಿ ಸರಿಪಡಿಸಲು ಅವಕಾಶವಿದ್ದು, ನ್ಯಾಷನಲ್ ವೋಟರ್ಸ್ ಸರ್ವಿಸ್ ಪೋರ್ಟಲ್(ಎನ್‍ವಿಎಸ್‍ಪಿ) ಮೂಲಕ ಸ್ವತಃ ಅಥವಾ ಸೇವಾ ಕೇಂದ್ರಗಳ ಮೂಲಕ ಸುಲಭವಾಗಿ ಸರಿಪಡಿಸಿಕೊಳ್ಳಬಹುದು. ಈ ಬಗ್ಗೆ ಜಾಗೃತಿ ಮೂಡಿಸಲು ಅತ್ಯಂತ ಪರಿಣಾಮಕಾರಿಯಾಗಿ ಸ್ವೀಪ್ ಚಟುವಟಿಕೆಗಳು ಆಗಬೇಕೆಂದು ನಿರ್ದೇಶನ ನೀಡಿದರು.

   ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಪಪೂ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಸ್ವೀಪ್ (ಸಿಸ್ಟೆಮ್ಯಾಟಿಕ್ ವೋಟರ್ಸ್ ಎಜುಕೇಷನ್ & ಎಲೆಕ್ಟೊರಲ್ ಪಾರ್ಟಿಸಿಪೇಷನ್) ಚಟುವಟಿಕೆಗಳನ್ನು ಕೈಗೊಳ್ಳಬೇಕು. ಜಿಲ್ಲಾ ಪಂಚಾಯತ್ ಈ ಇಲಾಖೆಗಳ ಸಹಯೋಗದೊಂದಿಗೆ ಕ್ರಿಯಾ ಯೋಜನೆ ಸಿದ್ದಪಡಿಸಿ ಆ ಪ್ರಕಾರ ಸ್ವೀಪ್ ಚಟುವಟಿಕೆ ಕೈಗೊಳ್ಳಬೇಕು ಎಂದರು.

    ಮುಖ್ಯವಾಗಿ ವಿಶೇಷ ಮತದಾರರು, ನಿರ್ಲಕ್ಷಿತ ಮತದಾರರ ಗುಂಪುಗಳು, ಲಿಂಗತ್ವ ಅಲ್ಪಸಂಖ್ಯಾತರು, ಮಹಿಳೆಯರು, ಯುವ ಮತದಾರರೆಡೆ ಹೆಚ್ಚು ಗಮನ ಹರಿಸಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಬೇಕು. ವಿಕಲಚೇತನ ಮತದಾರರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿ, ಒಬ್ಬರೇ ಒಬ್ಬ ವಿಕಲಚೇತನ ಮತದಾರ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಕ್ರಮ ವಹಿಸಬೇಕು. ಅವರಿಗೆ ಅಗತ್ಯವಾದ ಗಾಲಿಕುರ್ಚಿ, ರ್ಯಾಂಪ್, ಮನೆಯಿಂದ ಬೂತ್‍ಗೆ ಕರೆತರುವ ವ್ಯವಸ್ಥೆ ಆದಿಯಾಗಿ ಎಲ್ಲ ರೀತಿಯ ವ್ಯವಸ್ಥೆಗಳನ್ನು ಚುನಾವಣಾ ಅವಧಿಯಲ್ಲಿ ಮಾಡಿಕೊಳ್ಳುವಂತೆ ಕ್ರಮ ವಹಿಸಬೇಕೆಂದರು.

     ವಿಶ್ವವಿದ್ಯಾನಿಲಯ, ಮೆಡಿಕಲ್ ಕಾಲೇಜು, ವಿವಿಧ ಕಾಲೇಜುಗಳಲ್ಲಿರುವ ಎಲೆಕ್ಟರಲ್ ಲಿಟರಸಿ ಕ್ಲಬ್(ಇಎಲ್‍ಸಿ), ಕ್ಯಾಂಪಸ್ ಅಂಬಾಸೆಡರ್ಸ್ ಜಾಗೃತರಾಗಿರಬೇಕು. ಇಎಲ್‍ಸಿ ಕೈಗೊಂಡ ಪ್ರಕಾರ್ಯಗಳ ಫೋಟೊ, ವಿಡಿಯೋ ಕಳುಹಿಸಬೇಕು. ಸರ್ಕಾರದ ಎಲ್ಲ ಇಲಾಖೆಗಳಲ್ಲಿ ವೋಟರ್ಸ್ ಅವೇರ್‍ನೆಸ್ ಫೋರಂ ಗಳಿದ್ದು ಈ ಫೋರಂ ವತಿಯಿಂದ ವಿವಿಧ ಜಾಗೃತಿ, ಚರ್ಚಾ ಕಾರ್ಯಕ್ರಮಗಳಾಗಬೇಕು. ಎಲ್ಲ ತಾಲ್ಲೂಕುಗಳ ಇಓ ಗಳು ಸ್ವೀಪ್ ಗೆ ನೋಡರ್ ಅಧಿಕಾರಿಗಳಾಗಿದ್ದು, ಅತ್ಯಂತ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಎಲ್ಲ ತಹಶೀಲ್ದಾರರು ಉಸ್ತುವಾರಿ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

      ಸ್ವೀಪ್ ಸಭೆಗೆ ಹಾಜರಾಗದ ವಿವಿಧ ತಾಲ್ಲೂಕುಗಳ ಇಓ ಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಬೇಕು. ಗೈರು ಹಾಜರಾದ ಅಧಿಕಾರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ನಿಯೋಜಿತ ಅಧಿಕಾರಿಗಳನ್ನು ಖುದ್ದು ಹಾಜರಾಗದೇ ತಮ್ಮ ಪರವಾಗಿ ಇತರೆ ಅಧಿಕಾರಿ ಸಿಬ್ಬಂದಿಗಳನ್ನು ಸಭೆಗಳಿಗೆ ಕಳುಹಿಸಿದರೆ ಸೂಕ್ತ ಶಿಸ್ತಿನ ಕ್ರಮ ಜರುಗಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

      ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ಮಾತನಾಡಿ, ಮತದಾರರ ಪರಿಶೀಲನಾ ಕಾರ್ಯಕ್ರಮವು (ಎಲೆಕ್ಟರ್ಸ್ ವೆರಿಫಿಕೇಷನ್ ಪ್ರೊಗ್ರಾಂ) 45 ದಿನಗಳ ಕಾರ್ಯಕ್ರಮವಾಗಿದ್ದು, ಈ ಅವಧಿಯಲ್ಲಿ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸುವುದು, ಮತದಾರರ ಪಟ್ಟಿಯಲ್ಲಿನ ದೋಷಗಳನ್ನು ಸರಿಪಡಿಸಿಕೊಳ್ಳುವ ಪ್ರಕ್ರಿಯೆ ನಡೆಸಲಾಗುವುದು. ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

     ಡಿಡಿಪಿಯು ಮತ್ತು ಡಿಡಿಪಿಐ ರವರು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಇವಿಪಿ ಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ಕ್ವಿಜ್, ಡ್ರಾಮಾ, ಪ್ರಬಂಧ, ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಬೇಕು. ಹಾಗೂ ಪೋಷಕರ ಸಭೆ ನಡೆಸುವ ಮೂಲಕ ಪೋಷಕರಲ್ಲಿಯೂ ಜಾಗೃತಿ ಮೂಡಿಸಬೇಕು ಎಂದರು.

     ಸಭೆಯಲ್ಲಿ ಜಿ.ಪಂ ಪ್ರಭಾರ ಉಪ ಕಾರ್ಯದರ್ಶಿ ಜಗದೀಶ್, ಯೋಜನಾಧಿಕಾರಿ ಶಾರದಾ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಜಗದೀಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ವಿಜಯಕುಮಾರ್, ಶಿಕ್ಷಣ ಇಲಾಖೆ ಅಧಿಕಾರಿಗಳು, ಇತರೆ ಅಧಿಕಾರಿ, ಸಿಬಂದಿ ವರ್ಗದವರು ಹಾಜರಿದ್ದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap