ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಜಿಲ್ಲಾಧಿಕಾರಿಗಳೇ ಖುದ್ದು ಭೇಟಿ.

ಚಳ್ಳಕೆರೆ

      ಬೇಸಿಗೆ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಭಣಗೊಳ್ಳುತ್ತಿದ್ದು, ಇನ್ನೂ ಸಹ ಮಳೆರಾಯನ ಆಗಮನ ಇಲ್ಲದ ಕಾರಣ ಬೋರ್‍ವೆಲ್ ಬತ್ತಿ ಜನರು ಕುಡಿಯುವ ನೀರಿಗಾಗಿ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದ್ದು, ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಮಂಗಳವಾರ ಚಳ್ಳಕೆರೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸಿದರು.

      ಮಂಗಳವಾರ ಬೆಳ್ಳಂಬೆಳಗ್ಗೆಯೇ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಾದ ಬೆಳಗಟ್ಟ, ಹಾಯ್ಕಲ್, ಪೇಲೂರಹಟ್ಟಿ, ಪಾಪೇನಹಳ್ಳಿ, ರಾಯನಹಳ್ಳಿ ಮುಂತಾದ ಗ್ರಾಮಗಳಿಗೆ ಬಿಸಿನಲ್ಲಿ ತೆರಳಿದ ಜಿಲ್ಲಾಧಿಕಾರಿಗಳು ಗ್ರಾಮಗಳಲ್ಲಿ ಬತ್ತಿದ ಬೋರ್‍ವೆಲ್‍ಗಳನ್ನು ವೀಕ್ಷಿಸಿದರು. ನಂತರ ಗ್ರಾಮದ ಜನರೊಂದಿಗೆ ನೇರವಾಗಿ ಕುಡಿಯುವ ನೀರಿನ ಅಭಾವದ ವಾಸ್ತವ ಸ್ಥಿತಿಯನ್ನು ತಿಳಿದುಕೊಂಡರು.

      ಈ ಸಂದರ್ಭದಲ್ಲಿ ಗ್ರಾಮೀಣ ಭಾಗದ ಜನರಿಗೆ ಭರವಸೆ ನೀಡಿದ ಜಿಲ್ಲಾಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಅಗತ್ಯವಿರುವ ಕಡೆ ನೂತನವಾಗಿ ಬೋರ್‍ವೆಲ್‍ಗಳನ್ನು ಕೊರೆಸಲು ಸೂಚನೆ ನೀಡಿರುವುದಾಗಿ ತಿಳಿಸಿದರು. ಕೆಲವು ಬೋರ್‍ವೆಲ್‍ಗಳಲ್ಲಿ ನೀರಿನ ಪ್ರಮಾಣ ತಗ್ಗಿದ ಹಿನ್ನೆಲೆಯಲ್ಲಿ ಅಂತಹ ಬೋರ್‍ವೆಲ್‍ಗಳನ್ನು ಸಹ ಆಳಾ ಪಡಿಸಲು ಸೂಚನೆ ನೀಡಿರುವುದಾಗಿ ತಿಳಿಸಿದರು. ಕೆಲವೊಂದು ಗ್ರಾಮಗಳಲ್ಲಿ ಟ್ಯಾಂಕ್‍ಗಳ ಮೂಲಕ ನೀರು ಸರಬರಾಜು ಮಾಡುತ್ತಿದ್ದು, ಅಂತಹ ಟ್ಯಾಂಕರ್‍ಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸುವಂತೆ ಸೂಚನೆ ನೀಡಿದರು.

      ಪಾಪೇನಹಳ್ಳಿ ಗ್ರಾಮಕ್ಕೆ ಪ್ರತಿನಿತ್ಯ ಒಂದು ಟ್ಯಾಂಕರ್ ನೀರು ಮಾತ್ರ ಸರಬರಾಜು ಮಾಡುತ್ತಿದ್ದು, ಇಲ್ಲಿನ ಜನಸಂಖ್ಯೆ ಹೆಚ್ಚಿದ್ದು, ಈಗ ಸರಬರಾಜಾಗುತ್ತಿರುವ ನೀರಿನ ಪ್ರಮಾಣವನ್ನು ಹೆಚ್ಚಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು. ಈ ಬಗ್ಗೆ ಭರವಸೆ ನೀಡಿದ ಜಿಲ್ಲಾಧಿಕಾರಿಗಳು ಗ್ರಾಮೀಣ ಭಾಗದ ಎಲ್ಲಾ ಬೋರ್‍ವೆಲ್‍ಗಳ ಬಳಿ ಸಿಸ್ಟನ್‍ನಿರ್ಮಿಸಿ ನೀರು ಶೇಖರಣೆಯಾಗುವಂತೆ ಮಾಡಿ ನಂತರ ಪೈಪ್‍ಗಳ ಮೂಲಕ ನೀರು ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು. ಸದರಿ ಗ್ರಾಮಕ್ಕೆ ಹೆಚ್ಚುವರಿಯಾಗಿ ವಾರಕ್ಕೆ ಮೂರು ಬಾರಿ ಹೆಚ್ಚುವರಿ ಟ್ಯಾಂಕರ್‍ಗಳ ಮೂಲಕ ನೀರು ಸರಬರಾಜು ಮಾಡುವಂತೆ ತಿಳಿಸಿದರು.

      ಕಳೆದ ಕೆಲವು ತಿಂಗಳುಗಳಿಂದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಸಮಸ್ಯೆಗಳ ನಿವಾರಣೆಗೆ ಸಾಧ್ಯವಾಗಿಲ್ಲ. ಆದರೆ, ಈಗ ಚುನಾವಣೆಗಳು ಮುಗಿದಿದ್ದು ಜನರ ಸಮಸ್ಯೆಯನ್ನು ಆಲಿಸಿ ಪರಿಹಾರವನ್ನು ರೂಪಿಸುವ ಜವಾಬ್ದಾರಿ ಅಧಿಕಾರಿ ವರ್ಗದ್ದಾಗಿದೆ. ಈ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮುಂದುವರೆದಿದೆ.

       ಗ್ರಾಮೀಣ ಭಾಗಗಳ ಕೆಲವೆಡೆ ಶುದ್ದ ಕುಡಿಯುವ ನೀರಿನ ಘಟಕಗಳು ಇದ್ದು, ಹಲವಾರು ಕಾರಣದಿಂದಾಗಿ ಅಲ್ಲೂ ಸಹ ಜನರಿಗೆ ನೀರು ಸಮೃದ್ಧಿಯಾಗಿ ಸಿಗುತ್ತಿಲ್ಲ. ಕೆಲವು ಘಟಕಗಳ ಯಂತ್ರಗಳು ಕೆಟ್ಟು ಹೋಗಿದ್ದು, ಅವುಗಳ ರಿಪೇರಿಯಾಗಿಲ್ಲ. ಆದ್ದರಿಂದ ಈ ಬಗ್ಗೆ ಕೆಟ್ಟು ಹೊದ ಎಲ್ಲಾ ಘಟಕಗಳ ರಿಪೇರಿಗೆ ಗ್ರಾಮೀಣ ನೀರು ಸರಬರಾಜು ಇಲಾಖೆಯ ಕಾರ್ಯಪಾಲಕ ಅಭಿಯಂತರಿಗೆ ತುರ್ತು ರಿಪೇರಿಗೊಳಿಸುವಂತೆ ಸೂಚನೆ ನೀಡಿರುವುದಾಗಿ ತಿಳಿಸಿದರು.

       ಇದೇ ಸಂದರ್ಭದಲ್ಲಿ ಗ್ರಾಮೀಣ ಜನರಿಗೆ ವಿಶೇಷ ಮನವಿ ಮಾಡಿದ ಅವರು, ಒಂದು ಹನಿಯ ನೀರೂ ಸಹ ಅಮೂಲ್ಯವಾಗಿದ್ದು, ಯಾರೂ ಸಹ ಕುಡಿಯುವ ನೀರನ್ನು ವ್ಯರ್ಥ ಮಾಡದೆ ಅವಶ್ಯಕತೆ ಇದ್ದಷ್ಟು ಮಾತ್ರ ಮಿತವಾಗಿ ಬಳಸಿಕೊಳ್ಳಬೇಕು. ಪ್ರಸ್ತುತ ಲಭ್ಯವಿರುವ ಕುಡಿಯುವ ನೀರನ್ನೇ ಜಾಗ್ರತೆಯಿಂದ ಬಳಸಿದಲ್ಲಿ, ಇನ್ನೂ ಕೆಲವು ತಿಂಗಳುಗಳ ಕಾಲ ಕುಡಿಯುವ ನೀರಿನ ಸಮಸ್ಯೆ ಎದುರಾಗದು. ಈ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಸಾರ್ವಜನಿಕರು ಎಲ್ಲಾ ರೀತಿಯ ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.

       ಗ್ರಾಮಸ್ಥರು ಈ ಬಗ್ಗೆ ಜಿಲ್ಲಾಧಿಕಾರಿಗಳ ಮನವಿ ಮಾಡಿದ ಪೇಲೂರಹಟ್ಟಿಯ ಗ್ರಾಮಸ್ಥರು, ನಮ್ಮ ಸುತ್ತಮುತ್ತಲ ಗ್ರಾಮಗಳಲ್ಲಿ 600 ರಿಂದ 700 ಅಡಿ ಬೋರ್ ಕೊರೆಸಿದರೂ ಸಹ ನೀರು ಸಿಗುತ್ತಿಲ್ಲ. ಅಂತರ್ಜಲ ಸಂಪೂರ್ಣವಾಗಿ ಬತ್ತಿ ಹೋಗಿದ್ದು, ಬೋರ್‍ಕೊರೆಸಲು ಸಹ ರೈತರಿಗೆ ಸಾಧ್ಯವಾಗುತ್ತಿಲ್ಲ.

       ಆರ್ಥಿಕ ದೃಷ್ಠಿಯಿಂದಲೂ ಸಹ ರೈತ ತೊಂದರೆಗೀಡಾಗಿದ್ದು, ಜಿಲ್ಲಾ ಮಟ್ಟದಲ್ಲೇ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ನಿವಾರಿಸಬೇಕು. ಸುಮಾರು ನಾಲ್ಕೈದು ಕಿ.ಮೀ ದೂರಿದಿಂದ ಎತ್ತಿನ ಗಾಡಿ, ಬೈಕ್, ಸೈಕಲ್, ತಳ್ಳೊಬಂಡಿಗಳಲ್ಲಿ ಕುಡಿಯುವ ನೀರನ್ನು ತರಬೇಕಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link