ಚಳ್ಳಕೆರೆ
ರಾಜ್ಯದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹಾಗೂ ಅಭಿವೃದ್ಧಿಯನ್ನು ಹೊಂದುತ್ತಿರುವ ಇಲ್ಲಿನ ನಗರಸಭೆ ಸಾರ್ವಜನಿಕರ ಎಲ್ಲಾ ರೀತಿಯ ಸಮಸ್ಯೆಗಳಿಗೆ ಸ್ಪಂದಿಸಲು ಅನುಕೂಲವಾಗುವಂತೆ ಸರ್ಕಾರ ನೂತನವಾಗಿ ‘ಹಿತೈಷಿ’ ಯಾಫನ್ನು ಜಾರಿಗೊಳಿಸಿದ್ದು, ನಗರದ ಎಲ್ಲಾ ನಾಗರೀಕರಿಗೆ ತಮಗೆ ಅವಶ್ಯವಿರುವ ಸಮಸ್ಯೆಗಳ ಬಗ್ಗೆ ಹಿತೈಷಿ ಯಾಫ್‍ನಲ್ಲಿ ಆಪ್‍ಲೋಡ್ ಮಾಡಿದಲ್ಲಿ ನಿಮ್ಮ ಸಮಸ್ಯೆ ಬಗೆಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದರು.
ಪ್ರಾರಂಭದ ಹಂತದಲ್ಲಿ ಇಲ್ಲಿನ ನಗರಸಭೆಯ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಕಚೇರಿಯ ವಿವಿಧ ಸಿಬ್ಬಂದಿಯ ಜೊತೆಗೆ ಪ್ರಗತಿಯ ಮಾಹಿತಿ ಪಡೆದುಕೊಂಡರು. ನಗರಸಭೆಯಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸಕರಾತ್ಮಕವಾಗಿ ಕಾನೂನು ನಿಯಮದಡಿ ಸ್ಪಂದಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ವಿವಿಧ ಕಾರ್ಯಗಳಿಗಾಗಿ ನಗರಸಭೆಗೆ ಆಗಮಿಸುವ ಎಲ್ಲಾ ನಾಗರೀಕರಿಗೆ ಸಿಬ್ಬಂದಿ ವರ್ಗ ಸೂಕ್ತ ಗೌರವ ನೀಡಬೇಕು, ಯಾವುದೇ ಕಾರಣಕ್ಕೂ ಸಾರ್ವಜನಿಕರು ನಗರಸಭೆ ಆಡಳಿತ ಮೇಲೆ ಬೇಸರಪಟ್ಟುಕೊಳ್ಳದಂತಹ ವಾತಾವರಣ ನಿರ್ಮಿಸಬೇಕೆಂದರು.
ಇದೇ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಎಸ್.ಜಯಣ್ಣ, ಆರ್.ರುದ್ರನಾಯಕ, ರಮೇಶ್‍ಗೌಡ, ಹೊಯ್ಸಳಗೋವಿಂದ, ಎಚ್.ಪ್ರಶಾಂತ್‍ಕುಮಾರ್, ಟಿ.ವೀರಭದ್ರಪ್ಪ, ಮಹಿಳಾ ಸದಸ್ಯರಾದ ಕವಿತಾಬೋರಣ್ಣ, ಸುಮಾಭರಮಣ್ಣ, ನಿರ್ಮಲ, ಸಾಕಮ್ಮ, ಎಂ.ನಾಗವೇಣಿ, ತಿಪ್ಪಮ್ಮ, ಆರ್.ಮಂಜುಳಾ, ಟಿ.ಮಲ್ಲಿಕಾರ್ಜುನ, ಸುಜಾತಪಾಲಯ್ಯ ಮುಂತಾದವರು ನಗರದ ಸ್ವಚ್ಚತೆಯ ಬಗ್ಗೆ ನಗರಸಭೆ ಆಡಳಿತ ಗಮನಹರಿಸುತ್ತಿಲ್ಲ.
ನಗರದ ವಿವಿಧ ವಾರ್ಡ್‍ಗಳಲ್ಲಿ ಚರಂಡಿ ತುಂಬಿ ಚರಂಡಿ ಗಲಿಜು ನೀರು ರಸ್ತೆಯ ಮೇಲೆ ಹರಿದು ದುರ್ವಾಸನೆಯಾಗುತ್ತಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಪ್ರಸ್ತುತ ನಗರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ನೌಕರರ ಸಂಖ್ಯೆ ಕಡಿಮೆ ಇದ್ದು, ಒಂದೇ ಹಂತದಲ್ಲಿ ಎಲ್ಲಾ ಕೆಲಸ ಕಾರ್ಯ ಮಾಡಲು ಸಾಧ್ಯವಿಲ್ಲ. ಹೆಚ್ಚಿನ ಪೌರಕಾರ್ಮಿಕರ ಅವಶ್ಯಕತೆ ಇದ್ದು, ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಬಳ್ಳಾರಿ ರಸ್ತೆಯಲ್ಲಿ ಸುಮಾರು 2 ಕೋಟಿ ವೆಚ್ಚದಲ್ಲಿ ಕಸ ಸಂಸ್ಕರಣಾ ಘಟಕವನ್ನು ಸ್ಥಾಪಿಸುವ ಹಿನ್ನೆಲೆಯಲ್ಲಿ ಈಗಾಗಲೇ ಅನುಮೋದನೆ ಪಡೆದಿರುವ ಟೆಂಡರ್ ರೀತ್ಯ ಕಾರ್ಯನಿರ್ವಹಿಸಲಾಗುತ್ತಿದ್ದು, ಅಲ್ಲಿನ ಕಾಮಗಾರಿಗಳ ಗುಣಮಟ್ಟ ಹಾಗೂ ವಾಸ್ತುಸ್ಥಿತಿಯನ್ನು ಅರಿಯಲು ಜಿಲ್ಲಾಧಿಕಾರಿಗಳು ಕಸ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಪ್ರಭಾರ ಪೌರಾಯುಕ್ತ ಪಿ.ಪಾಲಯ್ಯ, ಎಇಇ ಜೆ.ಶ್ಯಾಮಲ, ವಿನಯ್, ನೈರ್ಮಲ್ಯ ಇಂಜಿನಿಯರ್ ಪಿರೋಜ್, ಸಹಾಯಕ ಇಂಜಿನಿಯರ್ ಲೋಕೇಶ್, ಹಿರಿಯ ಆರೋಗ್ಯ ನಿರೀಕ್ಷಕ ಮಹಾಲಿಂಗಪ್ಪ ಮುಂತಾದವರು ಜಿಲ್ಲಾಧಿಕಾರಿಗಳಿಗೆ ಘಟಕದ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿ, ಸುಮಾರು 2ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಸ ಸಂಸ್ಕರಣಾ ಘಟಕ ಕಾಮಗಾರಿ ಉತ್ತಮ ಮಟ್ಟದಲ್ಲಿರಬೇಕು. ಸಂಬಂಧಪಟ್ಟ ಅಧಿಕಾರಿಗಳು ಪ್ರತಿಯೊಂದು ಹಂತದಲ್ಲೂ ಕಾಮಗಾರಿಯ ಪರಿಶೀಲನೆ ನಡೆಸಬೇಕು. ಕಾಮಗಾರಿಗೆ ಪ್ರಗತಿಯ ಬಗ್ಗೆ ಪೌರಾಯುಕ್ತರು ಹೆಚ್ಚು ಗಮನಿಸಬೇಕೆಂದರು.
ಚಿತ್ರಯ್ಯನಹಟ್ಟಿಯ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಕೆಲವು ಸಾರ್ವಜನಿಕರು ಅಂಗನವಾಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕಿಯ ಬಗ್ಗೆ ಮಾಡಿದ ಆರೋಪಗಳ ಬಗ್ಗೆ ಮಾಹಿತಿ ನೀಡಿದ ಅವರು, ಸರ್ಕಾರದ ನಿಯಮಾನುಸಾರ ಕಾರ್ಯನಿರ್ವಹಿಸಲಾಗುತ್ತಿದ್ದು, ನಿಯಮ ಮೀರಿ ಕಾರ್ಯನಿರ್ವಹಿಸಿದಲ್ಲಿ ಮಾತ್ರ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಅಂಗನವಾಡಿ ಮಕ್ಕಳಿಗೆ ನೀಡುವ ಆಹಾರದ ಗುಣಮಟ್ಟ, ಹಾಜರಾತಿ, ಮಕ್ಕಳ ಲಸಿಕಾ ಕಾರ್ಡ್, ತಾಯಿ ಕಾರ್ಡ್ ಮುಂತಾದ ದಾಖಲೆಗಳನ್ನು ಪರಿಶೀಲಿಸಿದರು. ಮಕ್ಕಳ ಲಸಿಕಾ ಕಾರ್ಡ್‍ನ ವಿವರಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಸದರಿ ಕಾರ್ಡ್ 6 ತಿಂಗಳಿನಿಂದ 6 ವರ್ಷದ ತನಕ ಯಾವ ಯಾವ ಲಸಿಕೆ ಹಾಕಿಸಬೇಕೆಂಬ ಬಗ್ಗೆ ಮಾಹಿತಿ ಇದ್ದು, ಈ ಬಗ್ಗೆ ಅಂಗನವಾಡಿ ಶಿಕ್ಷಕಿಯವರು ಗಮನ ಹರಿಸಬೇಕು. ಯಾವುದೇ ಮಗು ಈ ಸಂದರ್ಭದಲ್ಲಿ ಗೈರು ಹಾಜರಾಗಿದ್ದಲ್ಲಿ ಅಂತಹವರನ್ನು ಹುಡುಕಿ ಲಸಿಕೆ ಹಾಕಿಸಿ ಕಾರ್ಡ್‍ನಲ್ಲಿ ನಮೂದಿಸಬೇಕೆಂದರು. ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, ಸಿಡಿಪಿಒ ಸಿ.ಕೆ.ಗಿರಿಜಾಂಬ, ಪ್ರಭಾರ ಕಂದಾಯ ನಿರೀಕ್ಷಕ ರಾಜೇಶ್ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ