ಚಳ್ಳಕೆರೆ
ತಾಲ್ಲೂಕಿನ ಕೋಡಿಹಳ್ಳಿ ಗ್ರಾಮದ ವ್ಯಕ್ತಿಯೊಬ್ಬ ಕೊರೋನಾ ಪಾಸಿಟಿವ್‍ಗೆ ಒಳಗಾಗಿದ್ದು, ಈ ಹಿನ್ನೆಲೆಯಲ್ಲಿ ಸೀಲ್‍ಡೌನ್ ಆದ ಗ್ರಾಮಗಳಿಗೆ ಮಂಗಳವಾರ ಜಿಲ್ಲಾಧಿಕಾರಿ ವಿನೋತ್‍ಪ್ರಿಯಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ ಅವರು, ಜಿಲ್ಲಾಡಳಿತ ಸಾಧ್ಯವಾದಷ್ಟು ಮಟ್ಟಿಗೆ ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಿದೆ. ಈಗ ಎಲ್ಲರೂ ತೊಂದರೆ ಒಳಗಾಗಿದ್ದೀರಿ, ಆದರೆ ಆ ವ್ಯಕ್ತಿ ನಿಮ್ಮ ಗ್ರಾಮಕ್ಕೆ ಬಂದಕೂಡಲೇ ಮಾಹಿತಿ ನೀಡಿದ್ದರೆ ಇಂತಹ ಸ್ಥಿತಿ ಉಂಟಾಗುತ್ತಿರಲಿಲ್ಲ. ಬಹಳಷ್ಟು ಜನ ಕೂಲಿ ಕೆಲಸಕ್ಕಾಗಿ ಬೆಂಗಳೂರಿಗೆ ವಲಸೆ ಹೋಗಲಿದ್ದಾರೆಂಬ ಮಾಹಿತಿ ಇದ್ದು, ಅಂತಹವರು ಇದ್ದಲ್ಲಿ ತಿಳಿಸಿದಲ್ಲಿ ಅವರನ್ನು ಕೆಲಸಕ್ಕಾಗಿ ಬೆಂಗಳೂರಿಗೆ ಕಳುಹಿಸುವ ವ್ಯವಸ್ಥೆ ಜಿಲ್ಲಾಡಳಿತ ಮಾಡಲಿದೆ ಎಂದರು.
ಗ್ರಾಮಪಂಚಾಯಿತಿ ಅಧ್ಯಕ್ಷ ಎನ್.ಎಚ್.ರಾಜಣ್ಣ, ಸೋಮಶೇಖರ್ ಮಾತನಾಡಿ, ಇಡೀ ಗ್ರಾಮದಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದು, ಕಳೆದ 5 ದಿನಗಳಿಂದ ಯಾವುದೇ ರೀತಿಯ ಕೆಲಸ ಕಾರ್ಯಗಳಿಲ್ಲದೆ ಪರಿತಪಿಸುತ್ತಿದ್ದಾರೆ. ಸರ್ಕಾರ ಗ್ಯಾಸ್ ಸಿಲೆಂಡರ್, ತರಕಾರಿ, ಸ್ವಲ್ಪ ಭಾಗ ಮಾತ್ರ ವಿತರಣೆ ಮಾಡಿದೆ. ಆದರೆ, ಜನರ ನಿರೀಕ್ಷೆಗೆ ತಕ್ಕಂತೆ ಯಾವುದೇ ಸೌಲಭ್ಯಗಳು ನಮಗೆ ದೊರಕುತ್ತಿಲ್ಲವೆಂದರು.
ಈ ಬಗ್ಗೆ ಇನ್ನೂ ಹೆಚ್ಚಿನ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪತ್ರಬರೆಯುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು. ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಮಾಹಿತಿ ನೀಡಿ, ಗ್ರಾಮಸ್ಥರ ಮನವಿಯಂತೆ ಸಿಲೆಂಡರ್ ಇನ್ನಿತರೆ ವಸ್ತುಗಳನ್ನು ನೀಡಲಾಗಿದೆ. ಯಾವುದೇ ಸಂದರ್ಭದಲ್ಲೂ ಪರಿಸ್ಥಿತಿ ಬಿಗಡಾಯಿಸದಂತೆ ಎಚ್ಚರಿಕೆ ವಹಿಸಲಾಗಿದೆ ಎಂದರು. ಇಒ ಶ್ರೀಧರ್ ಐ.ಬಾರಿಕೇರ್ ಮಾಹಿತಿ ನೀಡಿ, ಇಡೀ ಗ್ರಾಮವನ್ನು ಸ್ವಚ್ಚಗೊಳಿಸಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಡಿಡಿಟಿ ಸಿಂಪಡಿಸಲಾಗಿದೆ. ಕುಡಿಯುವ ನೀರೂ ಸೇರಿದಂತೆ ಮೂಲ ಸೌಕರ್ಯಗಳನ್ನು ನೀಡಲಾಗಿದೆ. ಪ್ರತಿನಿತ್ಯ ನಾನು ಹಾಗೂ ಪಿಡಿಒ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ ಎಂದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎನ್.ಪ್ರೇಮಸುಧಾ ಮಾತನಾಡಿ, ಹೃದಯ ರೋಗ ತಜ್ಞ ಡಾ.ಅಮಿತ್‍ಗುಪ್ತ ಹಾಗೂ ಇತರೆ ವೈದ್ಯರ ಸಿಬ್ಬಂದಿ ವತಿಯಿಂದ ಆರೋಗ್ಯ ತಪಾಸಣೆ ನಡೆಸಲಾಗಿದೆ. ಇಬ್ಬರು ವ್ಯಕ್ತಿಗಳಿಗೆ ಮಾತ್ರ ಜ್ವರ ಕಂಡುಬಂದಿದ್ದು, ಚಿಕಿತ್ಸೆ ನೀಡಲಾಗಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ