ಬೀದಿಬದಿ ವ್ಯಾಪಾರಿಗಳಿಗೆ ಡಿಸಿಸಿ ಬ್ಯಾಂಕ್ ನೆರವು

ತುಮಕೂರು

      ಕೊರೊನಾ ಸೋಂಕಿನ ಕಾರಣದಿಂದ ಜಗತ್ತೇ ಅಲ್ಲೋಲ ಕಲ್ಲೋಲವಾಗಿದೆ. ಸೋಂಕು ನಿಯಂತ್ರಣಕ್ಕಾಗಿ ಮಾಡಿದ ಲಾಕ್‍ಡೌನ್‍ನ ಪರಿಣಾಮದಿಂದ ದೈನಂದಿನ ಬದುಕು, ವ್ಯಾಪಾರ-ವಹಿವಾಟು ಅಸ್ತವ್ಯಸ್ತಗೊಂಡು ಜನಜೀವನ ತಲ್ಲಣಗೊಂಡಿದೆ. ಲಾಕ್‍ಡೌನ್ ವೇಳೆ ಎಲ್ಲಾ ಮಾದರಿಯ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡು ಆತಂಕಕಾರಿ ಪರಿಸ್ಥಿತಿ ನಿರ್ಮಣವಾಗಿತ್ತು. ಈಗ ಲಾಕ್‍ಡೌನ್ ಸಡಿಲಗೊಂಡು ಚಟುವಟಿಕೆಗಳು ಆರಂಭವಾದರೂ ಚೇತರಿಕೆ ಕಂಡಿಲ್ಲ, ಇನ್ನೂ ಅದೇ ಆತಂಕ ಜನರನ್ನು ಕಾಡುತ್ತಿದೆ.

       ಬಡವರು, ದಿನಗೂಲಿಗಳು, ನಿತ್ಯದ ದುಡಿಮೆ ನಂಬಿ ಬದುಕು ಸಾಗಿಸುತ್ತಿದ್ದವರೆ ಲಾಕ್‍ಡೌನ್‍ನಲ್ಲಿ ಹೆಚ್ಚು ಸಮಸ್ಯೆಗೀಡಾದವರು. ಇವರಲ್ಲಿ ಬೀದಿಬದಿ ವ್ಯಾಪಾರ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಕುಟುಂಬಗಳಿಗೆ ಕೊರೊನಾ ಹಾಗೂ ಲಾಕ್‍ಡೌನ್ ಆಘಾತ ಉಂಟು ಮಾಡಿತ್ತು. ಬೀದಿಬದಿಯ ವ್ಯಾಪಾರ ಎತ್ತಂಗಡಿಯಾಗಿ ಈ ವ್ಯಾಪಾರಿಗಳ ಬದುಕು ಬೀದಿಪಾಲಾಯಿತು.

      ಈಗ ವ್ಯಾಪಾರ ನಡೆಸಲು ಅವಕಾಶ ಇದೆಯಾದರೂ, ವ್ಯಾಪಾರ ಶುರು ಮಾಡಲು ಮೂಲ ಬಂಡವಾಳವಿಲ್ಲದೆ ಬೀದಿ ಬದಿ ವ್ಯಾಪಾರಿಗಳು ಪರಿತಪಿಸುವಂತಾಯಿತು. ಶ್ರೀಮಂತರಿಗೆ ಲಕ್ಷ, ಕೋಟಿ ರೂ. ಸಾಲ ನೀಡುವ ರಾಷ್ಟ್ರೀಕೃತ ಬ್ಯಾಂಕುಗಳು ಬೀದಿಬದಿಯ ವ್ಯಾಪಾರಿಗಳಂತಹವರಿಗೆ ಕೈಗೆ ಎಟಕುವುದಿಲ್ಲ. ಸಾಲಸೌಲಭ್ಯ ನೀಡುವ ಮಾತೇ ಇಲ್ಲ. ಬ್ಯಾಂಕ್‍ಗಳ ನಿಯಮಾವಳಿಗಳನ್ನು ಅನುಸರಿಸಿ, ಬೇಕಾದ ಸೆಕ್ಯೂರಿಟಿ, ಶ್ಯೂರಿಟಿ ನೀಡುವ ಚೈತನ್ಯ ಬೀದಿಬದಿ ವ್ಯಾಪಾರಿಗಳಿಗಿಲ್ಲ.

     ಹೀಗಾಗಿ ಇವರು ಅಂತಹ ಬ್ಯಾಂಕ್‍ಗಳಿಂದ ಸಾಲ ಪಡೆಯುವುದು ದೂರದ ಮಾತು. ಆರ್ಥಿಕ ಮುಗ್ಗಟ್ಟಿನ್ನಿಂದ ಪರಿತಪಿಸುತ್ತಿರುವ ಬೀದಿಬದಿ ವ್ಯಾಪಾರಿಗಳು ಜೀವನೋಪಾಯಕ್ಕೆ ಅನ್ಯಮಾರ್ಗವಿಲ್ಲದೆ ಖಾಸಗಿ ಲೇವಾದೇವಿಗಾರರ ಎದುರು ಸಾಲಕ್ಕೆ ಕೈ ಚಾಚಬೇಕಾಗುತ್ತದೆ. ಖಾಸಗಿಯವರ ಮೀಟರ್ ಬಡ್ಡಿ, ದುಬಾರಿ ಬಡ್ಡಿಯ ಸಾಲ ಪಡೆದು ಇವರು ವ್ಯವಹಾರ ಆರಂಭಿಸಬೇಕು. ಇಂತಹವರಲ್ಲಿ ಸಾಲ ಪಡೆದು ವ್ಯವಹಾರ ವೃದ್ಧಿಸಿಕೊಂಡವರಿಗಿಂತ ಬಡ್ಡಿ ಕಟ್ಟಿ ಹೈರಾಣಾದವರೆ ಹೆಚ್ಚು.

      ಇಂತಹ ಒದ್ದಾಟದಲ್ಲಿರುವ ಬೀದಿಬದಿ ವ್ಯಾಪಾರಿಗಳನ್ನು ಹತ್ತಿರದಿಂದ ಕಂಡಿರುವ ರಾಜ್ಯ ಅಪೆಕ್ಸ್ ಬ್ಯಾಂಕ್ ಹಾಗೂ ತುಮಕೂರು ಡಿಡಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ, ಲಾಕ್‍ಡೌನ್‍ನಲ್ಲಿ ಬದುಕು ಕಳೆದುಕೊಂಡವರಿಗೆ ಬ್ಯಾಂಕಿನಿಂದ ಸರಳ ಸಾಲಸೌಲಭ್ಯ ನೀಡಿ, ಹೊಸ ಬದುಕು ಕಟ್ಟಿಕೊಳ್ಳಲು ನೆರವಾಗುವ ಪ್ರಯತ್ನ ಮಾಡಿದರು. ಸಣ್ಣ ಮತ್ತು ಅತಿಸಣ್ಣ ವ್ಯಾಪಾರಿಗಳಿಗೆ ಬಡವರ ಬಂಧು ಯೋಜನೆಯಡಿಯಲ್ಲಿ ಸಾಲ ನೀಡಿ ಅವರನ್ನು ಆರ್ಥಿಕವಾಗಿ ಪುನಶ್ಚೇತನಗೊಳಿಸುವ ಆಶಯ ವ್ಯಕ್ತಪಡಿಸಿದರು. ಕೆಎನ್‍ಆರ್ ಅಭಿಲಾಷೆಯನ್ನು ಅನುಮೋದಿಸಿದ ಬ್ಯಾಂಕಿನ ಆಡಳಿತ ಮಂಡಳಿ, ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡಿ, ಬಡವರ ಬಂಧು ಯೋಜನೆಗೆ ಹೆಚ್ಚು ಕಾಳಜಿವಹಿಸಿದರು.

       ಇದರ ಪರಿಣಾಮ ಇಂದು ಜಿಲ್ಲೆಯ ಸಾವಿರಾರು ಬೀದಿಬದಿ ವ್ಯಾಪಾರಿಗಳಿಗೆ ಡಿಡಿಸಿ ಬ್ಯಾಂಕ್ ಎರಡು ಕೋಟಿ ರೂ.ಗಳಿಗೂ ಹೆಚ್ಚು ಸಾಲ ವಿತರಣೆ ಮಾಡಿದೆ. ವ್ಯಾಪಾರಿಗಳು ನಿರಾತಂಕವಾಗಿ ತಮ್ಮ ವ್ಯಾಪಾರ ಆರಂಭಿಸಿದ್ದಾರೆ.ಕೊರೊನಾ ಲಾಕ್‍ಡೌನ್‍ನಲ್ಲಿ ಸಂಕಷ್ಟಕ್ಕೀಡಾದವರಿಗೆ ಸರ್ಕಾರದ ಜೊತೆಗೆ ಅನೇಕ ದಾನಿಗಳು ತಿಂಗಳುಗಟ್ಟಲೆ ಊಟ, ತಿಂಡಿ ವಿತರಿಸಿ ನೆರವಾದರು. ಹಲವರು ಆಹಾರ ಧಾನ್ಯಗಳ ಕಿಟ್ ಹಂಚಿಕೆ ಮಾಡಿ ಕಷ್ಟದಲ್ಲಿದ್ದವರಿಗೆ ಸಹಾಯಹಸ್ತ ಚಾಚಿದರು. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಕೆ.ಎನ್.ರಾಜಣ್ಣನವರು ಒಂದು ಹೆಜ್ಜೆ ಮುಂದೆ ಯೋಚಿಸಿ, ಆಹಾರವಲ್ಲದೆ ಬೀದಿಬದಿಯ ವ್ಯಾಪಾರಿಗಳು ಬದುಕು ಕಟ್ಟಿಕೊಳ್ಳಲು ನೆರವಾಗಬೇಕು ಎಂದು ಬಯಸಿದ್ದರು.

       ಲಾಕ್‍ಡೌನ್ ಸಂದರ್ಭದಲ್ಲಿ ಆದಾಯ ಕಳೆದುಕೊಂಡು ಜೀವನ ನಡೆಸುವುದೇ ಕಷ್ಟವಾಗಿತ್ತು. ಈ ಸ್ಥಿತಿಯಲ್ಲಿ ಬೀದಿಬದಿ ವ್ಯಾಪಾರಿಗಳು ತಮ್ಮ ಕೈಯಲ್ಲಿದ್ದ ಹಣ ಖರ್ಚು ಮಾಡಿಕೊಂಡು ಖಾಲಿಯಾಗಿದ್ದರು. ಇವರು ಮತ್ತೆ ವ್ಯಾಪಾರ ಶುರು ಮಾಡಲು ಖಾಸಗಿ ಲೇವಾದೇವಿದಾರರಿಂದ ಸಾಲ ಪಡೆಯಬೇಕು, ಅವರು ಹೇಳುವ ಬಡ್ಡಿ ಕಟ್ಟಬೇಕು. ಇದಕ್ಕೆಲ್ಲಾ ಮುಕ್ತಿ ದೊರಕಿಸಬೇಕು ಎಂದು ಡಿಸಿಸಿ ಬ್ಯಾಂಕಿನಿಂದ ಬೀದಿಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ನೀಡಬೇಕು ಎಂದು ನಿರ್ಧಾರ ಮಾಡಿದ್ದಾಗಿ ಕೆ.ಎನ್.ರಾಜಣ್ಣನವರು ಹೇಳಿದರು.

       ಯಾರಿಗೆ ಹಣದ ಅವಶ್ಯಕತೆ ಇರುವುದೋ ಅವರಿಗೆ ಒಂದರಿಂದ ಹತ್ತು ಸಾವಿರ ರೂ.ವರೆಗೆ ಸಾಲ ನೀಡಲಾಗುವುದು. ಎಷ್ಟೇ ಜನ ಸಾಲ ಕೋರಿ ಬಂದರೂ ಕೊಡಲು ಸಿದ್ಧ. ಬಡವರ ಬಂಧು ಯೋಜನೆಯ ಬಡ್ಡಿ ಹಣವನ್ನು ಸರ್ಕಾರ ಭರಿಸುವ ಸಾಧ್ಯತೆ ಇದ್ದು, ಹಾಗಾದರೆ, ವ್ಯಾಪಾರಿಗಳು ಕಟ್ಟಿದ ಬಡ್ಡಿ ಹಣವನ್ನು ವಾಪಸ್ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದರು.

      ಸರಳ ನಿಯಮ ರೂಪಿಸಿ, ಬೀದಿಬದಿ ವ್ಯಾಪಾರಿಗಳಿಗೆ ಆಧಾರ ರಹಿತ ಸಾಲ ವಿತರಣೆ ಮಾಡಲಾಗುತ್ತಿದೆ. ಜಿಲ್ಲೆಯ ಡಿಸಿಸಿ ಬ್ಯಾಂಕಿನ ಎಲ್ಲಾ 34 ಶಾಖೆಗಳಲ್ಲೂ ಈ ಯೋಜನೆ ಚಾಲನೆಯಲ್ಲಿದೆ, ಆಯಾ ಶಾಖೆ ವ್ಯಾಪ್ತಿಯ ವ್ಯಾಪಾರಿಗಳಿಗೆ ನೀಡಲಾಗುತ್ತಿದೆ. ಸಾಲದ ಹೊರೆ, ಬಡ್ಡಿಯ ಶೋಷÀಣೆಗೆ ಒಳಗಾಗದಂತೆ ನಿತ್ಯ ಪಿಗ್ಮಿ ಕಟ್ಟಿ, ಮರುಪಾವತಿ ಮಾಡಿ ಸಾಲ ಮುಕ್ತರಾಗುವ ಯೋಜನೆ ಇದು. ಈ ವರ್ಷ ಜಿಲ್ಲೆಯ ಬೀದಿ ಬದಿ ವ್ಯಾಪಾರಿಗಳಿಗೆ ಡಿಡಿಸಿ ಬ್ಯಾಂಕ್ ಎರಡು ಕೋಟಿ ರೂ.ಗಳಿಗೂ ಹೆಚ್ಚು ಸಾಲ ವಿತರಣೆ ಮಾಡಿದೆ. ರಾಜ್ಯದ ಯಾವುದೇ ಡಿಡಿಸಿ ಬ್ಯಾಂಕ್ ಬಡವರ ಬಂಧು ಯೋಜನೆಯಲ್ಲಿ ಇಷ್ಟೊಂದು ಪ್ರಮಾಣದ ಸಾಲ ನೀಡಿಲ್ಲ.

       ಇದು ತುಮಕೂರು ಡಿಡಿಸಿ ಬ್ಯಾಂಕಿನ ಹೆಗ್ಗಳಿಕೆ.ತುಮಕೂರು ಡಿಡಿಸಿ ಬ್ಯಾಂಕ್ 2019-20ನೇ ಸಾಲಿಗೆ ಬಡವರ ಬಂಧು ಯೋಜನೆಯಡಿಯಲ್ಲಿ ಒಂದು ಸಾವಿರ ರೂ.ನಿಂದ ಹತ್ತು ಸಾವಿರ ರೂ.ಗಳವರೆಗೆ ಒಟ್ಟು 880 ಬೀದಿಬದಿ ವ್ಯಾಪಾರಿಗಳನ್ನು ಗುರುತಿಸಿ 83,22,800 ರೂ.ಗಳನ್ನು ಮಂಜೂರು ಮಾಡಿತ್ತು. ಎಲ್ಲಾ ಫಲಾನುಭವಿಗಳು ಪಡೆದಿರುವ ಸಾಲವನ್ನು ಉಪಯೋಗಿಸಿಕೊಂಡು ಸಕಾಲದಲ್ಲಿ ಪೂರ್ಣ ಮರುಪಾವತಿ ಮಾಡಿದ್ದಾರೆ ಎಂಬುದೂ ವಿಶೇಷ.

       ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬೀದಿಬದಿ ವ್ಯಾಪಾರಸ್ಥರು ಈ ಸಾಲದ ಸೌಲಭ್ಯವನ್ನು ಉಪಯೋಗಿಸಿಕೊಂಡು ಜೀವನದ ಮಾರ್ಗ ರೂಪಿಸಿಕೊಳ್ಳಲು ಸಾಲ ಕೋರಿ ಬಂದಲ್ಲಿ ಹತ್ತು ಕೋಟಿ ರೂ.ಗಳ ಸಾಲ ನೀಡಲು ಬ್ಯಾಂಕಿನ ಆಡಳಿತ ಮಂಡಳಿ ಗುರಿ ಹಾಕಿಕೊಂಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap