ತುಮಕೂರು
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ್ನು ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಸೂಪರ್ ಸೀಡ್ ಮಾಡಿರುವ ಸರ್ಕಾರದ ಕ್ರಮವನ್ನು ಖಂಡಿಸಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಡಿಸಿಸಿ ಬ್ಯಾಂಕ್ ನೌಕರರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸೇರಿದಂತೆ ತಾಲ್ಲೂಕು ಕೇಂದ್ರ, ಹೋಬಳಿ ಕೇಂದ್ರಗಳ ಶಾಖೆ ಮುಂಭಾಗ ಕಪ್ಪುಪಟ್ಟಿ ಧರಿಸಿ ಜಮಾಯಿಸಿದ ಬ್ಯಾಂಕ್ ನೌಕರರು ಬ್ಯಾಂಕ್‍ನ ಆಡಳಿತ ಮಂಡಳಿಯನ್ನು ರದ್ದುಮಾಡಿ ಸೂಪರ್ ಸೀಡ್ ಮಾಡಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಡಿಸಿಸಿ ಬ್ಯಾಂಕ್ ನೌಕರರ ಯೂನಿಯನ್ ಕಾರ್ಯದರ್ಶಿ ಮಧುಸೂದನ್ ಮಾತನಾಡಿ, ಕೂಡಲೇ ರದ್ದುಪಡಿಸಿರುವ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಮತ್ತೆ ಅಧಿಕಾರ ನೀಡಬೇಕು. ಕೇವಲ ರಾಜಕೀಯ ದ್ವೇಷಕ್ಕೋಸ್ಕರ ಇಡೀ ಜಿಲ್ಲೆಯ ರೈತ ಸಮೂಹದ ಮೇಲೆ ಬರೆ ಎಳೆಯುವುದು ಸರಿಯಲ್ಲ ಎಂದರು.
ಮಾಜಿ ಶಾಸಕ ಕೆ.ಎನ್. ರಾಜಣ್ಣನವರು ಬ್ಯಾಂಕ್ ಅಧ್ಯಕ್ಷರಾದ ಮೇಲೆ ಕೋಟ್ಯಂತರ ರೂ. ಠೇವಣಿ ಸಂಗ್ರಹಿಸುವುದರ ಜತೆಗೆ ಇತರೆ ಸಹಕಾರ ಬ್ಯಾಂಕ್‍ಗಳಿಗೆ ಸರಿಸಮನಾಗಿ ಬೆಳೆಸಿದ್ದಾರೆ. ರೈತರಿಗೆ ಸಾಲ ಸೌಲಭ್ಯ ಸೇರಿದಂತೆ ಬ್ಯಾಂಕ್‍ನಿಂದ ವಿವಿಧ ಸೌಲಭ್ಯಗಳನ್ನು ಒದಗಿಸಿಕೊಟ್ಟು ಅವರ ಆರ್ಥಿಕ ಮಟ್ಟ ಸುಧಾರಣೆಗೆ ಚೈತನ್ಯದ ಚಿಲುಮೆಯಾಗಿದ್ದಾರೆ. ಹೀಗಿದ್ದರೂ ಸಹ ಯಾರೋ ಒಬ್ಬರ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ರೀತಿ ಬ್ಯಾಂಕ್ ಸೂಪರ್ ಸೀಡ್ ಮಾಡಿರುವುದು ಖಂಡನಾರ್ಹ ಎಂದರು.
ಡಿಸಿಸಿ ಬ್ಯಾಂಕ್‍ನಿಂದ ಈವರೆಗೆ 5317 ಮಂದಿ ರೈತರಿಗೆ 1549.63 ಲಕ್ಷ ರೂ. ಸಾಲ ಮನ್ನಾ ಮಾಡಲಾಗಿದೆ. ಇದು ಸರ್ಕಾರದ ಸಾಲ ಮನ್ನಾ ಯೋಜನೆ ಹೊರತುಪಡಿಸಿ ಮಾಡಿರುವ ಸಾಲ ಮನ್ನಾ ಆಗಿದೆ ಎಂದರು.
ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕ ಕೃಷ್ಣಮೂರ್ತಿ ಮಾತನಾಡಿ, ಬ್ಯಾಂಕ್ ಆರಂಭದ ದಿನಗಳಲ್ಲಿ ಇದ್ದ ಸ್ಥಿತಿಗತಿಗೂ ಇಂದು ಇರುವ ಸ್ಥಿತಿಗತಿಗೂ ಅಜ-ಗಜ ಅಂತರ ಇದೆ. ಇದಕ್ಕೆ ಪ್ರಮುಖ ಕಾರಣರು ಕೆ.ಎನ್. ರಾಜಣ್ಣ ಅವರು. ರೈತರಿಗೆ ಸಾಲ ಸೌಲಭ್ಯ ಒದಗಿಸಲು ಮಾತ್ರ ಸೀಮಿತವಾಗಿದ್ದ ಬ್ಯಾಂಕ್‍ನ್ನು ಇಂದು ಇತರೆ ಸಹಕಾರಿ ಬ್ಯಾಂಕ್‍ಗಳಿಗೆ ಸರಿ ಸಮನಾಗಿ ಬೆಳೆಸಿ ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದಾರೆ ಎಂದರು.
ಕೆ.ಎನ್. ರಾಜಣ್ಣನವರು ರೈತರಿಗೆ ಋಣಮುಕ್ತ ಸಾಲ ಯೋಜನೆ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಕೂಡಲೇ ಸರ್ಕಾರ ತನ್ನ ನಿರ್ಧಾರವನ್ನು ವಾಪಸ್ ಪಡೆದು ಆಡಳಿತ ಮಂಡಳಿಯನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿದರು.
ಡಿಸಿಸಿ ಬ್ಯಾಂಕ್‍ನ ನೌಕರರು ಇಂದು ಕಪ್ಪುಪಟ್ಟಿ ಧರಿಸಿ ಸಂಜೆವರೆಗೆ ಕಾರ್ಯನಿರ್ವಹಿಸಲಿದ್ದಾರೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್‍ಗೆ ಆಗಮಿಸಿದ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್ ಅವರಿಗೆ ನೌಕರರು ಮನವಿ ಸಲ್ಲಿಸಿ ಸರ್ಕಾರಕ್ಕೆ ಕಳುಹಿಸಿಕೊಡುವಂತೆ ಕೋರಿದರು. ಪ್ರತಿಭಟನೆಯಲ್ಲಿ ಬ್ಯಾಂಕ್ ನೌಕರರಾದ ಪ್ರಕಾಶ್, ನರಸಿಂಹಮೂರ್ತಿ, ಲಕ್ಷ್ಮಯ್ಯ, ಲತಾ, ಸಿದ್ದಪ್ಪ, ನರೇಂದ್ರ, ಚಂದ್ರಕುಮಾರ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
