ಮೀನು ಹಿಡಿಯಲು ಹೋಗಿ ಮೃತಪಟ್ಟವರ ಶವಪತ್ತೆ

ಕುಣಿಗಲ್

  ಮೀನು ಹಿಡಿಯಲು ಹೋಗಿ ತೆಪ್ಪ ಮುಳುಗಿ ನೀರುಪಾಲಾಗಿ ಕಣ್ಮರೆಯಾಗಿದ್ದ ಇಬ್ಬರು ಯುವಕರ ಶವಗಳ ಪತ್ತೆಮಾಡಲು ಶ್ರಮಿಸಿದ ಅಗ್ನಿಶಾಮಕ ತಂಡ, ಪೊಲೀಸರು ಹಾಗೂ ಬೋಟ್ ತಂಡದ ಜೊತೆ ಶಾಸಕ ಡಾ.ರಂಗನಾಥ್ ಕೂಡ ಶವ ಪತ್ತೆಕಾರ್ಯದಲ್ಲಿ ತೊಡಗುವ ಮೂಲಕ ಕಾರ್ಯಾಚರಣೆ ಯಶಸ್ವಿಯಾಗಿದೆ.

   ಡೊಡ್ಡಕೆರೆಯಲ್ಲಿ ಮೀನು ಹಿಡಿಯಲು ಮೂರು ದಿನದ ಹಿಂದೆ ಶನಿವಾರ ತಡರಾತ್ರಿಯಲ್ಲಿಯೇ ಬಾಗೇನಹಳ್ಳಿ ವೆಂಕಟೇಶ (28) ಮತ್ತು ಕೊತ್ತಗೆರೆಯ ಆದಿಲ್‍ಪಾಷ (24) ಎಂಬ ಇಬ್ಬರು ಯುವಕರು ತೆಪ್ಪದಲ್ಲಿ ಹೋದ ಸಂದರ್ಭದಲ್ಲಿ ತೆಪ್ಪಮಗುಚಿ ಬಿದ್ದು ಮೂರು ದಿನಗಳ ನಂತರ ಶವಗಳು ಕೊಕ್ಕರೆಕಲ್ಲಿನ ಬಳಿ ಪತ್ತೆಯಾಗಿವೆ.

    ಶೋಧಕಾರ್ಯದಲ್ಲಿ ನಿರತರಾಗಿದ್ದ ಬೆಂಗಳೂರು ಬೋಟ್ ತಂಡ ಭಾನುವಾರ ಬಂದು ಕಾರ್ಯಾಚರಣೆ ಪ್ರಾರಂಭಿಸಿದ್ದು ಸಿಗದಿದ್ದಾಗ ಸೋಮವಾರ ಮುಂಜಾನೆಯಿಂದಲೇ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಆದರೆ ಮಧ್ಯಾಹ್ನದ ವೇಳೆಗೆ ಕೆರೆಯ ಹೌಸಿಂಗ್‍ಬೋರ್ಡ್ ಕಡೆಗೆ ಹೋದಾಗ ಬೋಟ್ ಕೆಟ್ಟು ನಿಂತ ಪರಿಣಾಮ ಸುಮಾರು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ನಂತರ ಸ್ಥಳಕ್ಕೆ ತಹಸೀಲ್ದಾರ್ ವಿಶ್ವನಾಥ್ ಅವರು ಕೂಡ ಬಂದು ಪರಿಶೀಲಿಸಿ ಮಾರ್ಗದರ್ಶನ ನೀಡಿ ತೆರಳಿದರು.

    ರಿಪೇರಿಯಾದ ಬೋಟ್ ಪುನಃ ಕಾರ್ಯಾಚರಣೆಯಲ್ಲಿ ತೊಡಗಿದ್ದು ಕೆರೆಯ ಸುತ್ತ ಸುಮಾರು 6-7 ಸುತ್ತುಸುತ್ತಿದರೂ ಶವ ಪತ್ತೆಯಾಗಿರಲಿಲ್ಲ. ಸುಮಾರು ಮೂರುವರೆಗಂಟೆಯ ವೇಳೆಗೆ ಶಾಸಕ ಡಾ.ರಂಗನಾಥ್ ಅವರು ಆಗಮಿಸಿ ಅವರು ಕೂಡ ಬೋಟ್‍ನಲ್ಲಿ ಶವಪತ್ತೆ ಕಾರ್ಯಚರಣೆಯಲ್ಲಿ ಪಾಲ್ಗೊಂಡು ಕೊಕ್ಕರೆ ಕಲ್ಲಿನ ಭಾಗಕ್ಕೆ ತೆರಳಿದಾಗ ಅಲ್ಲಿ ಬಲೆಯೊಳಗೆ ಸಿಕ್ಕಿಹಾಕಿಕೊಂಡಿದ್ದ ಆದಿಲ್‍ಪಾಷಾ ಶವ ಪತ್ತೆಯಾಗಿದ್ದು ಆ ಮೃತದೇಹವನ್ನು ಕೆರೆಯ ದಡಕ್ಕೆ ತರಲಾಯಿತು. ಪುನಃ ಅದೇ ಸ್ಥಳದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿ ಒಂದು ಗಂಟೆಗಳ ಕಾಲ ಶೋಧಿಸಿದ ನಂತರ ವೆಂಕಟೇಶನ ಶವ ಪತ್ತೆಯಾಯ್ತು.

    ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಶವಪರೀಕ್ಷೆ ನಡೆಸಿದ ನಂತರ ಪೋಷಕರಿಗೆ ಒಪ್ಪಿಸಲಾಯಿತು. ಕಾರ್ಯಾಚರಣೆಯ ವೇಳೆ ಶಾಸಕರೂ ಭಾಗವಹಿಸಿದ್ದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಯಿತು. ಅಗ್ನಿಶಾಮಕ ತಂಡ, ಪೊಲೀಸರು ಹಾಗೂ ಬೋಟ್ ತಂಡಗಳು ಕೆರೆಯಲ್ಲಿ ಕಾರ್ಯಾಚರಣೆ ಮಾಡುತ್ತಿರುವ ವಿಷಯ ತಿಳಿದ ಸಾವಿರಾರು ಜನ ಬಾರಿ ಕುತೂಹಲದೊಂದಿಗೆ ನೋಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮೃತರ ಪೋಷಕರು ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್, ಜೆಡಿಎಸ್ ಮುಖಂಡ ಜಗದೀಶ್ ಹಾಗೂ ವಿವಿಧ ರಾಜಕಾರಣಿಗಳು ಮೃತರ ಕುಟುಂಬಕ್ಕೆ ಸಾಂತ್ವಾನ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link