ಶಿರಾ:
ಹಸಿದು ಬಂದಿದ್ದ ಪ್ರಯಾಣಿಕರು ತಿಂಡಿಯನ್ನು ತಿನ್ನಲೆಂದು ಶಿರಾ ಬೈಪಾಸ್ ರಸ್ತೆಯೊಂದರ ಬಳಿಯಲ್ಲಿದ್ದ ಹೋಟೆಲ್‍ವೊಂದರ ಬಳಿ ಬಸ್ ನಿಲ್ಲಿಸಿ ತಿಂಡಿ ತಿನ್ನುತ್ತಿರುವಾಗ ತಿಂಡಿಯಲ್ಲಿ ಹಲ್ಲಿಯೊಂದು ಪತ್ತೆಯಾಗಿ ಪ್ರಯಾಣಿಕರು ಗಾಬರಿಗೊಂಡು ವಾಂತಿ ಮಾಡಿಕೊಂಡು ಭಯಬೀತರಾದ ಘಟನೆ ಶಿರಾ ಬೈಪಾಸ್ ರಸ್ತೆಯ ಅರಸು ಹೋಟೆಲ್‍ನಲ್ಲಿ ನಡೆದಿದೆ ಎನ್ನಲಾಗಿದೆ.
ಮಹಾರಾಷ್ಟ್ರದ ಸುಮಾರು 60ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗುರುವಾರ ಬೆಂಗಳೂರಿನಲ್ಲಿ ನಡೆಯುವ ರವಿಶಂಕರ ಗುರೂಜಿ ಅವರ ಕಾರ್ಯಕ್ರಮಕ್ಕೆಂದು ಹೋಗುತ್ತಿದ್ದಾಗ ಶಿರಾ ಬೈಪಾಸ್ ರಸ್ತೆಯಲ್ಲಿದ್ದ ಅರಸು ಹೋಟೆಲ್ ಬಳಿ ತಿಂಡಿ ತಿನ್ನಲೆಂದು ಬಸ್ಸನ್ನು ನಿಲ್ಲಿಸಿದರು ಎನ್ನಲಾಗಿದೆ.
ಬಸ್ಸಿನಲ್ಲಿ ಬಂದಿದ್ದ ಅನೇಕ ಹಿರಿಯರು, ಮಕ್ಕಳು ಹಾಗೂ ಅನೇಕ ಕುಟುಂಬಗಳು ತಿಂಡಿಯನ್ನು ತಿನ್ನತೊಡಗಿದರು. ಕೆಲವರು ತಿಂಡಿ ತಿಂದು ಕೈತೊಳೆದುಕೊಂಡು ಬಸ್ಸಿನತ್ತ ಹೊರಟರೆ ಮತ್ತಲವರು ತಿಂಡಿ ತಿಂದ ನಂತರ ವಿಶ್ರಾಂತಿಗಾಗಿ ಓಡಾಡುತ್ತಿದ್ದರು. ಇನ್ನೂ ಕೆಲವರು ತಿಂಡಿಯನ್ನು ತಿನ್ನುತ್ತಲೇ ಇದ್ದರು.
ಇದ್ದಕ್ಕಿದ್ದಂತೆ ರಮೇಶ್ ಎಂಬ ಪ್ರಯಾಣಿಕರು ತಾವು ತಿನ್ನುತ್ತಿದ್ದ ತಿಂಡಿಯಲ್ಲಿ ಮೃತಪಟ್ಟ ಹಲ್ಲಿಯೊಂದು ಕಂಡ ಕೂಡಲೇ ಗಾಬರಿಯಾಗಿ ತಿಂಡಿಯಲ್ಲಿ ಹಲ್ಲಿ ಸತ್ತಿದೆ ಯಾರೂ ತಿನ್ನಬೇಡಿ ಎಂದು ಕೂಗಿಕೊಂಡರು. ಕೆಲವರು ಭಯದಿಂದ ತಿಂಡಿಯನ್ನು ಅಲ್ಲಿಯೇ ಬಿಟ್ಟು ವಾಂತಿ ಮಾಡಿಕೊಂಡರೆ ಮತ್ತಲವರು ತಿಂಡಿ ವಿಷಪೂರಿತವಾದರೆ ಪಾಡೇನೂ ಎಂದು ಗಾಬರಿಗೊಂಡರಲ್ಲದೆ. ಹೋಟೆಲ್ ಮಾಲೀಕರ ವಿರುದ್ಧ ಎಲ್ಲರೂ ಮುಗಿಬಿದ್ದರು.
ಅದೃಷ್ಠವಶಾತ್ ಯಾರಿಗೂ ಅಪಾಯವಾಗದಿದ್ದಾಗ ಪ್ರಯಾಣಿಕರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು ಎನ್ನಲಾಗಿದೆ. ಸದರಿ ವಿಷಯ ತಿಳಿದ ನಗರ ಠಾಣಾ ಸಿ.ಪಿ.ಐ. ರಂಗಸ್ವಾಮಿ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದಾಗ ಪ್ರಯಾಣಿಕರು ಬೆಂಗಳೂರಿಗೆ ತೆರಳಿದ್ದನ್ನು ಕಂಡು ಹೋಟೆಲ್ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ. ಹೋಟೆಲ್‍ನಲ್ಲಿ ಶುಚಿತ್ವ ಕಾಪಾಡದಿರುವುದೇ ಈ ಅನಾಹುತಕ್ಕೆ ಕಾರಣ ಎನ್ನಲಾಗಿದ್ದು ಕೂಡಲೇ ಹೋಟೆಲ್ ಬಂದ್ ಮಾಡುವಂತೆ ಹೋಟೆಲ್ ಮಾಲೀಕರಿಗೆ ಸೂಚನೆ ನೀಡಿದರು ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
