ತುಮಕೂರು
ಸರ್ಕಾರಿ ದಾಖಲಾತಿಯ ಪ್ರಕಾರ ಆ ವ್ಯಕ್ತಿ `ಮೃತ’ಪಟ್ಟಿದ್ದಾರೆ. `ಮರಣ ಪ್ರಮಾಣಪತ್ರ’ವೂ ಇದೆ. ಆದರೆ ಆ ವ್ಯಕ್ತಿಯೇ “ನಾನು ಬದುಕಿದ್ದೇನೆ… ನನ್ನ ಜಮೀನನ್ನು ಉಳಿಸಿಕೊಡಿ” ಎಂದು ಅರ್ಜಿ ಹಿಡಿದುಕೊಂಡು ಎದುರಿಗೆ ನಿಂತಲ್ಲಿ….!!!
-ಹೀಗೊಂದು ಪ್ರಸಂಗ ತುಮಕೂರು ನಗರದಲ್ಲಿ ನಡೆದಿದೆ. ನಗರದ ತುಮಕೂರು ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಗುರುವಾರ ಬೆಳಗ್ಗೆ ತುಮಕೂರು ಲೋಕಾಯುಕ್ತದಿಂದ ಲೋಕಾಯುಕ್ತ ಡಿವೈಎಸ್ಪಿ ಸಿ.ಆರ್. ರವೀಶ್ ಅವರ ನೇತೃತ್ವದಲ್ಲಿ ಸಾರ್ವಜನಿಕ ಸಂಪರ್ಕ ಸಭೆ ಏರ್ಪಟ್ಟಿತ್ತು. ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸುವ ಕಾರ್ಯಕ್ರಮ ಅದಾಗಿತ್ತು. ಅಲ್ಲಿ ವೃದ್ಧ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದಾಗ ಈ ಕುತೂಹಲಕರ ಪ್ರಕರಣ ಬೆಳಕಿಗೆ ಬಂದಿದೆ.
ಅವರ ಹೆಸರು ಬಾಷಾಸಾಬ್. ವಯಸ್ಸು ಸುಮಾರು 70 ವರ್ಷಗಳು. ಕೆ.ಎಸ್.ಆರ್.ಟಿ.ಸಿ.ಯ ನಿವೃತ್ತ ಚಾಲಕರು. ತುಮಕೂರು ತಾಲ್ಲೂಕು ನಾಗವಲ್ಲಿಯವರು. ಇವರು “ಮೃತಪಟ್ಟಿದ್ದಾರೆ” ಎಂದು 2006 ನೇ ಇಸವಿಯಲ್ಲೇ “ಮರಣ ಪ್ರಮಾಣಪತ್ರ” (ಡೆತ್ ಸರ್ಟಿಫಿಕೇಟ್) ನೀಡಲಾಗಿದೆ! “ಮರಣ ಪ್ರಮಾಣಪತ್ರ”ದ ಆಧಾರದ ಮೇಲೆ ಇವರ ಜಮೀನನ್ನು ಮತ್ತೊಬ್ಬರ ಹೆಸರಿಗೆ ಖಾತೆ ಮಾಡಿಕೊಡಲಾಗಿದೆ! ಅಷ್ಟೇ ಅಲ್ಲದೆ “ಮೃತನ” ಸಹಿಯನ್ನು ಸಹ ಯಾವುದೋ ದಾಖಲೆಗೆ ನಕಲಿ ಮಾಡಲಾಗಿದೆ! ಇವೆಲ್ಲ ವಿವರವನ್ನುಳ್ಳ ಅರ್ಜಿಯೊಂದಿಗೆ ಆಗಮಿಸಿದ ಬಾಷಾಸಾಬ್ ಅವರು “ಸ್ವಾಮಿ, ನಾನಿನ್ನೂ ಬದುಕಿದ್ದೇನೆ.
ನನಗೆ ಸೇರಿರುವ 18 ಗುಂಟೆ ಜಮೀನನ್ನು ನನ್ನ ಹೆಸರಿಗೆ ಮಾಡಿಸಿಕೊಡಿ” ಎಂದು ಅಂಗಲಾಚಿದಾಗ ಅಲ್ಲಿದ್ದ ಲೋಕಾಯುಕ್ತ ಅಧಿಕಾರಿಗಳೇ ಬೆಚ್ಚಿಬೀಳುವಂತಾಯಿತು.
ಲೋಕಾಯುಕ್ತ ಅಧಿಕಾರಿಗಳು ಆ ಹಿರಿಯ ನಾಗರಿಕನ ಅಳಲನ್ನು ಆಲಿಸಿದರು. ಲೋಕಾಯುಕ್ತದ ಕಾನೂನಿನ ಪ್ರಕಾರ ನಿರ್ದಿಷ್ಟ ಪಡಿಸಿರುವ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕೆಂದು ಮಾಹಿತಿ ನೀಡಿ, ಸದರಿ ನಮೂನೆಯ ಪ್ರತಿಯನ್ನು ವಿತರಿಸಿದರು. ಅದನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದರು. ಇದಕ್ಕೆ ಒಪ್ಪಿ ಅವರು ತೆರಳಿದ್ದಾರೆ. ಅವರು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿದ ಬಳಿಕ, ಲೋಕಾಯುಕ್ತ ಅಧಿಕಾರಿಗಳು ಮುಂದಿನ ಪ್ರಕ್ರಿಯೆ ಆರಂಭಿಸುವರು.
ಒಟ್ಟು 6 ಅರ್ಜಿಗಳು
ಲೋಕಾಯುಕ್ತ ನಡೆಸಿದ ಈ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಒಟ್ಟು 6 ಅರ್ಜಿಗಳು ಸಲ್ಲಿಕೆಯಾಗಿವೆ. ನಮೂನೆ 1 ಮತ್ತು 2 ಕ್ಕೆ ಅನ್ವಯವಾಗುವಂತೆ 2 ಅರ್ಜಿಗಳು, ತಾಲ್ಲೂಕು ಕಚೇರಿಗೆ ಸಂಬಂಧಿಸಿದ 2 ಅರ್ಜಿಗಳು, ಬೆಸ್ಕಾಂಗೆ ಸೇರಿದ ಒಂದು ಅರ್ಜಿ ಸಂದಾಯವಾಗಿವೆ. ಗ್ರಾಮ ಪಂಚಾಯಿತಿ ಹಂತದ ಸಮಸ್ಯೆಗೆ ಸಂಬಂಧಿಸಿದ ಒಂದು ಅರ್ಜಿಗೆ ಸ್ಥಳದಲ್ಲೇ ಪರಿಹಾರ ದೊರಕಿಸಲಾಗಿದೆ. ತಾಲ್ಲೂಕು ಕಚೇರಿ ಮತ್ತು ಬೆಸ್ಕಾಂಗೆ ಸೇರಿದ ಅರ್ಜಿಗಳಿಗೆ ಮುಂದಿನ 15 ದಿನಗಳಲ್ಲಿ ಪರಿಹಾರ ದೊರಕಿಸಿಕೊಡುವುದಾಗಿ ಸ`Éಯಲ್ಲಿದ್ದ ಸಂಬಂಧಿಸಿದ ಅಧಿಕಾರಿಗಳು ಭರವಸೆ ನೀಡಿದರು.
ಸಮಸ್ಯೆ ಉದ್ಭವಿಸದು
ಸಾರ್ವಜನಿಕ ಸಂಪರ್ಕ ಸಭೆಯನ್ನು ಆರಂಭಿಸುವಾಗ ಪ್ರಾಸ್ತಾವಿಕವಾಗಿ ಮಾತನಾಡಿದ ಲೋಕಾಯುಕ್ತ ಡಿವೈಎಸ್ಪಿ ಸಿ.ಆರ್.ರವೀಶ್ ಅವರು, `ಪ್ರತಿಯೊಬ್ಬ ನೌಕರನಿಗೂ ಸರ್ಕಾರವು ವೇತನ ನೀಡುತ್ತದೆ. ಇದನ್ನು ನೆನಪಿನಲ್ಲಿಟ್ಟುಕೊಂಡು ಕಾನೂನಿನ ಪ್ರಕಾರ ಕಾರ್ಯನಿರ್ವಹಿಸಿದರೆ ಯಾರಿಗೂ ಸಹ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.
ಎಲ್ಲ ಅಧಿಕಾರಿಗಳೂ ಕೆಟ್ಟವರೇನಲ್ಲ. ಸೇವಾ ಮನೋ ಭಾವದಿಂದಲೇ ಎಲ್ಲರೂ ಸರ್ಕಾರಿ ಸೇವೆಗೆ ಬಂದಿರುತ್ತಾರೆ. ಯಾವುದೋ ವಿಷಮ ಪರಿಸ್ಥಿತಿಯಲ್ಲಿ ಸಮಸ್ಯೆಗೆ ಸಿಲುಕಿಬಿಡುವಂತಾಗುತ್ತದೆ. ಹಾಗೆಂದು ಎಲ್ಲ ಅಧಿಕಾರಿಗಳೂ ಹಾಗೆಯೇ ಇರುತ್ತಾರೆಂದೂ ಹೇಳಲಾಗದು’ ಎಂದು ಮಾರ್ಮಿಕವಾಗಿ ಹೇಳಿದ ಅವರು, ಕೆಲವರು ಮಾಡುವ ತಪ್ಪಿನಿಂದ ಇಡೀ ಅಧಿಕಾರಿ ವೃಂದಕ್ಕೆ ಕೆಟ್ಟ ಹೆಸರು ಬರುವಂತಾಗುತ್ತಿದೆ ಎಂದರು.
ಪ್ರತಿ ತಿಂಗಳ 5 ನೇ ತಾರೀಕಿನಂದು ಇಂತಹ ಸಾರ್ವಜನಿಕ ಸಂಪರ್ಕ ಸಭೆಯನ್ನು ನಡೆಸಲಾಗುವುದು. ಸಾರ್ವಜನಿಕರು ತಮ್ಮ ದೂರನ್ನು ಸಲ್ಲಿಸಬಹುದು. ಈಗಲೂ ಲೋಕಾಯುಕ್ತವು ಹಾಲಿ ಇರುವ ಕಾನೂನಿನ ಪ್ರಕಾರವೇ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.
ಸಭೆಯ ಆರಂಭದಲ್ಲಿ ತುಮಕೂರು ತಾಲ್ಲೂಕು ತಹಸೀಲ್ದಾರ್ ಯೋಗಾನಂದ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹ ಣಾಧಿಕಾರಿ ಜೈಪಾಲ್ ಇದ್ದರು. ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಲೋಕಾಯುಕ್ತ ಇನ್ಸ್‍ಪೆಕ್ಟರ್‍ಗಳಾದ ಎಚ್.ವಿ.ಸುರೇಶ್ ಮತ್ತು ಗಂಗಾಧರ್ ಮತ್ತು ಲೋಕಾಯುಕ್ತ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ