ಮಂಗಳೂರು
ನಗರದ ಪಂಪ್ ವೆಲ್ ಬಳಿ ಇರುವ ಇಂಡಿಯಾನ ಆಸ್ಪತ್ರೆಯಿಂದ ಮೃತ ವ್ಯಕ್ತಿಯೊಬ್ಬರ ಅಂಗಾಂಗಗಳನ್ನು ತುರ್ತು ಅವಶ್ಯಕತೆ ಇರುವ ರೋಗಿಗಳಿಗೆ ಮರು ಜೋಡಣೆ ಮಾಡುವ ಸಲುವಾಗಿ ಶುಕ್ರವಾರ ಸಂಜೆ ಬೆಂಗಳೂರಿಗೆ ಮತ್ತು ಮಣಿಪಾಲಕ್ಕೆ ರವಾನಿಸಲಾಯಿತು.
ಟ್ರಾಫಿಕ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿಯಂತ್ರಿಸಿ ಆಂಬೂಲೆನ್ಸ್ ಸಾಗುವ ರಸ್ತೆಯನ್ನು ” ಗ್ರೀನ್ ಕಾರಿಡಾರ್ ‘ ಮಾಡುವ ಮೂಲಕ ಆಂಬೂಲೆನ್ಸ್ ಮಾತ್ರ ಸಂಚರಿಸಲು ವ್ಯವಸ್ಥೆ ಕಲ್ಪಿಸಿ ಅಂಗಾಂಗಗಳನ್ನು ಸಾಗಿಸಲಾಯಿತು. ಕಾಸರಗೋಡು ಜಿಲ್ಲೆಯ ಚಂದ್ರಶೇಖರ್ ( 48 ವರ್ಷ. ) ಅವರು ಮೇ.11 ರಂದು ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡು ಮಂಗಳೂರಿನ ಇಂಡಿಯಾನ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಯಿಂದ ಚೇತರಿಸಿಕೊಳ್ಳದ ಚಂದ್ರಶೇಖರ್ ಅವರ ಬ್ರೈನ್ ಡೆಡ್ ಆಗಿದೆ ಎಂದು ಗುರುವಾರ ರಾತ್ರಿ ಘೋಷಿಸಲಾಗಿತ್ತು. . ಆದರೆ ಅವರ ದೇಹದ ಇತರ ಅಂಗಾಂಗಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದವು , ಈ ಹಿನ್ನೆಲೆಯಲ್ಲಿ ಚಂದ್ರಶೇಖರ್ ಅವರ ಬಂಧುಗಳು ಮೃತರ ಅಂಗಾಗಗಳನ್ನು ಅಗತ್ಯವಿರುವ ರೋಗಿಗಳಿಗೆ ದಾನ ಮಾಡಲು ಮುಂದಾದರು.
ಅದರಂತೆ ಅಗತ್ಯ ಪ್ರಕ್ರಿಯೆಯನ್ನು ಪೂರೈಸಿ ಶುಕ್ರವಾರ ಸಂಜೆ ಹೃದಯದ ಕವಾಟಗಳನ್ನು ಹಾಗೂ ಕರುಳನ್ನು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ಕಳುಹಿಸಲಾಯಿತು. ಸಂಜೆ 4.30ಕ್ಕೆ ಆಸ್ಪತ್ರೆಯಿಂದ ಅಂಬ್ಯೂಲೆನ್ಸ್ ಮೂಲಕ ರಸ್ತೆ ಮಾರ್ಗವಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಕಳುಹಿಸಿಕೊಡಲಾಯಿತು. ಅಲ್ಲಿಂದ ವಿಮಾನ ಮೂಲಕ ಬೆಂಗಳೂರಿಗೆ ಕಳುಹಿಸಿಕೊಡಲಾಯಿತು.
ಎರಡನೇ ಅಂಬ್ಯೂಲೆನ್ಸ್ ಮೂಲಕ ಒಂದು ಕಿಡ್ನಿಯನ್ನು ಮಣಿಪಾಲ ಕೆ.ಎಂ.ಸಿ.ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು. ಇನ್ನೊಂದು ಕಿಡ್ನಿಯನ್ನು ಇಂಡಿಯಾನ ಆಸ್ಪತ್ರೆಯಲ್ಲಿಯೇ ರೋಗಿಯೊಬ್ಬರಿಗೆ ಮರುಜೋಡಿಸಲಾಯಿತು. ಕಣ್ಣುಗಳನ್ನು ಸ್ಥಳೀಯ ಆಸ್ಪತ್ರೆಗೆ ನೀಡಲು ನಿರ್ಧರಿಸಲಾಗಿದೆ.ಅಂಗಾಂಗಗಳನ್ನು ದಾನ ಮಾಡಲು ತೀರ್ಮಾನಿಸಿದ ಚಂದ್ರಶೇಖರ್ ಅವರ ಬಂಧುಗಳ ತೀರ್ಮಾನಕ್ಕೆ ಬಾರೀ ಶ್ಲಾಘನೆ ವ್ಯಕ್ತವಾಗಿದೆ.