ಬೆಂಗಳೂರು
ನಗರದ ದಕ್ಷಿಣ ಹಾಗೂ ಆಗ್ನೇಯ ವಿಭಾಗದ ಜನ ಸಂದಣಿ ಕಡಿಮೆಯಿರುವ ಪ್ರದೇಶಗಳಲ್ಲಿ ಬೈಕ್‍ನಲ್ಲಿ ಸಂಚರಿಸುತ್ತ ಒಂಟಿ ಮಹಿಳೆಯನ್ನು ಗುರುತಿಸಿ ಸರಗಳವು ಮಾಡುತ್ತಿದ್ದ ಇಬ್ಬರು ಕುಖ್ಯಾತ ಸರಗಳ್ಳರನ್ನು ಬಂಧಿಸಿರುವ ಆಗ್ನೇಯ ವಿಭಾಗದ ಪೊಲೀಸರು 22 ಲಕ್ಷ ರೂ ಮೌಲ್ಯದಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ.
ಕಮ್ಮನಹಳ್ಳಿಯ ಜಾನಕಿರಾಮ್ ಲೇಔಟ್‍ನ ಅರುಣ್ (27), ಹಳೆಬೈಯ್ಯಪ್ಪನಹಳ್ಳಿಯ ರಾಜೇಶ್ ಅಲಿಯಾಸ್ ಚೋಟು (26) ಬಂಧಿತ ಸರಗಳ್ಳರಾಗಿದ್ದಾರೆ ಬಂಧಿತರಿಂದ ಶಾಲಿವಾನ್ ಬೈಕ್ ಹಾಗೂ 728 ಗ್ರಾಂ ತೂಕದ ಮಾಂಗಲ್ಯ ಸರಗಳು, ಚಿನ್ನದ ಸರಗಳು ಸೇರಿ 22 ಲಕ್ಷ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿಗಳು ಹೆಚ್‍ಎಸ್‍ಆರ್ ಲೇಔಟ್, ರಾಮಮೂರ್ತಿನಗರ, ತಿಲಕ್ ನಗರ, ಕೋರಮಂಗಲ, ಮತ್ತಿತರ ಕಡೆಗಳಲ್ಲಿ ಬೈಕ್‍ನಲ್ಲಿ ಸಂಚರಿಸುತ್ತ ಒಂಟಿ ಮಹಿಳೆಯರ ಸರಗಳವು ಮಾಡಿ ಪರಾರಿಯಾಗುತ್ತಿದ್ದರು. ಈ ಸಂಬಂಧ ರಚಿಸಲಾಗಿದ್ದ ಹೆಚ್‍ಎಸ್‍ಆರ್ ಲೇಔಟ್ ಪೊಲೀಸರ ವಿಶೇಷ ತಂಡ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ಕೃತ್ಯಕ್ಕೆ ಬಳಸುತ್ತಿದ್ದ ಸುಜುಕಿ ಶಾಲಿವಾನ್ ಬೈಕ್ ಹಾಗೂ 728 ಗ್ರಾಂ ತೂಕದ ಮಾಂಗಲ್ಯ ಸರಗಳು, ಚಿನ್ನದ ಸರಗಳು ಸೇರಿ 22 ಲಕ್ಷ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡು ಹೆಚ್‍ಎಸ್‍ಆರ್ ಲೇಔಟ್, ಕೋರಮಂಗಲ, ಬೇಗೂರು, ಹುಳಿಮಾವು, ತಿಲಕ್ ನಗರ, ರಾಮಮೂರ್ತಿನಗರ, ಬಾಣಸವಾಡಿ, ವೈಟ್ ಫೀಲ್ಡ್, ಮಾರತ್ ಹಳ್ಳಿ, ಜೆಪಿ ನಗರ ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಿ ನಡೆದಿದ್ದ 20 ಸರಗಳವು ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ ಎಂದು ಅವರು ತಿಳಿಸಿದರು.
ಆರೋಪಿಗಳು ಹಿಂದೆ ಕೂಡ ಸರಗಳವು ಕೃತ್ಯದಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದು ಮೋಜಿನ ಜೀವನ ನಡೆಸಲು ಮತ್ತೆ ಸರಗಳವು ಕೃತ್ಯಕ್ಕಿಳಿದಿದ್ದರು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








