ಹುಳಿಯಾರು
ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಖಾಲಿ ಇರುವ ಬಿಸಿನೆಸ್ ಸೈನ್ಸ್ ಹಾಗೂ ಅಕೌಂಟೆನ್ಸಿ ಉಪನ್ಯಾಸಕ ಹುದ್ದೆಗಳಿಗೆ ಅರೆಕಾಲಿಕ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುಂತೆ ಕಾಲೇಜು ಅಭಿವೃದ್ಧಿ ಸಮಿತಿ ತೀರ್ಮಾನಿಸಿತು.
ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಾಸಕ ಜೆ.ಸಿ.ಮಾಧುಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಲೇಜು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಮಾಡಲಾಯಿತು.
ಕಳೆದ ವರ್ಷವೂ ಸಹ ಅರೆಕಾಲಿಕ ಉಪನ್ಯಾಸಕರನ್ನು ನೇಮಕ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಪಠ್ಯ ಬೋಧಿಸಿದ ರೀತಿಯಲ್ಲೇ ಈ ವರ್ಷವೂ ನೇಮಕ ಮಾಡುವಂತೆ ಅನುಮತಿ ಕೊಡಲಾಯಿತ್ತಲ್ಲದೆ ಡಿ ಗ್ರೂಪ್ ನೌಕರರನ್ನೂ ಸಹ ನೇಮಕ ಮಾಡಿಕೊಳ್ಳುವಂತೆ ಪ್ರಾಚಾರ್ಯರಿಗೆ ಅನುಮತಿ ಕೊಡಲಾಯಿತು.
ಹೈಸ್ಕೂಲ್ ಮತ್ತು ಕಾಲೇಜಿಂದ ಒಟ್ಟು 1500 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದು 2 ಕೊಳವೆ ಬಾವಿಯಲ್ಲಿ ಒಂದು ಕೆಟ್ಟಿದ್ದು ಮತ್ತೊಂದರಲ್ಲಿ ನೀರು ಕಡಿಮೆಯಾಗಿ ನಿತ್ಯ 1 ಗಂಟೆ ನೀರು ಬಂದರೆ ಅದೇ ಹೆಚ್ಚಾಗಿದೆ. ಇದರಿಂದ ಮಕ್ಕಳಿಗೆ ಕುಡಿಯುವ ನೀರು ಸೇರಿದಂತೆ ಬಿಸಿಯೂಟಕ್ಕೂ ನೀರಿನ ಸಮಸ್ಯೆ ಸೃಷ್ಠಿಯಾಗಿದ್ದು ಹೊಸ ಕೊಳವೆ ಬಾವಿ ಕೊರೆಯುವಂತೆ ಪ್ರಾಚಾರ್ಯರು ಮನವಿ ಮಾಡಿದ್ದು ಶಾಸಕರು ತಕ್ಷಣ ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸರ್ಕಾರಿ ಎಲ್‍ಕೆಜಿಗೆ ಇನೂರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು ಸರ್ಕಾರದ ನಿಯಮದಲ್ಲಿ 30 ಮಂದಿಗೆ ಮಾತ್ರ ಅವಕಾಶವಿದ್ದು ಮತ್ತೊಂದು ವಿಭಾಗ ತೆರೆದು ಪೋಷಕರಿಗೆ ಅನುಕೂಲ ಕಲ್ಪಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು ಎಂಪಿಎಸ್ ಶಾಲೆಯಲ್ಲಿ ಕೊಠಡಿಗಳ ಕೊರತೆ ಇರುವುದರಿಂದ ಸರ್ಕಾರದ ನಿಯಮದಂತೆ 30 ಮಂದಿಗೆ ಮಾತ್ರ ಲಾಟರಿ ಮೂಲಕ ಆಯ್ಕೆ ಮಾಡಲು ತೀರ್ಮಾನಿಸಲಾಯಿತು.
ಕಳೆದ ವರ್ಷದಂತೆ ಕಾಲೇಜು ಅಭಿವೃದ್ಧಿಗೆ ವಿದ್ಯಾರ್ಥಿಗಳಿಂದ 500 ರೂ. ಸಂಗ್ರಹಿಸುವಂತೆಯೂ ವರ್ತಕ ನಟರಾಜ್ ಅವರ ಸಹಕಾರದೊಂದಿಗೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸುವಂತೆಯೂ, ಚಿಕ್ಕನಾಯಕನಹಳ್ಳಿ ರೋಟರಿಯಿಂದ ಪೀಠೋಪಕರಣದ ನೆರವು ಪಡೆಯುವಂತೆಯೂ ತೀರ್ಮಾನಿಸಲಾಯಿತು.
ಪ್ರಾಚಾರ್ಯ ಪ್ರಸನ್ನಕುಮಾರ್, ಉಪಪ್ರಾಂಶುಪಾಲೆ ಇಂದಿರಾ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆಂಕೆರೆ ನವೀನ್, ವಸಂತ್ ಕುಮಾರ್, ಸೀತರಾಮಯ್ಯ, ದಿನೇಶ್, ಸುವರ್ಣಮ್ಮ, ಲಕ್ಷ್ಮೀ, ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.