ತಿಪಟೂರು :
ತಾಲ್ಲೂಕಿನ ಹೊನ್ನವಳ್ಳಿಯಲ್ಲಿ ಹೋಬಳಿ ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ನಿಂದ ಮಂಗಳವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.
ನವೆಂಬರ್ ಅಥವಾ ಡಿಸೆಂಬರ್ನಲ್ಲಿ ಸಮ್ಮೇಳನ ನಡೆಸಲು ತೀರ್ಮಾನಿಸಲಾಯಿತು. ಈ ಸಂಬಂಧ ಹಲವು ಕ್ಷೇತ್ರದವರು ಪಾಲ್ಗೊಂಡು ಚರ್ಚಿಸಿದರು. ಸಮ್ಮೇಳನದ ರೂಪುರೇಷ ಕುರಿತು ನಿರ್ಧರಿಸಲು ಅ.29ರಂದು ಬೆಳಗ್ಗೆ 11ಕ್ಕೆ ಹೊನ್ನವಳ್ಳಿಯ ಶ್ರೀರಾಮ ಮಂದಿರದಲ್ಲಿ ಪೂರ್ವಭಾವಿ ಸಭೆ ನಡೆಸಲು ನಿಶ್ಚಯಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಆರ್. ಪುರುಷೋತ್ತಮ್ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಉಪಾಧ್ಯಕ್ಷೆ ಶಂಕರಮ್ಮ, ತಾಲ್ಲೂಕು ಕಸಾಪ ಅಧ್ಯಕ್ಷ ಕೆ. ಬಾಲಕೃಷ್ಣ, ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಂ.ಡಿ. ಶಿವಕುಮಾರ್, ನಿವೃತ್ತ ಪ್ರಾಂಶುಪಾಲ ಮರುಳಪ್ಪ, ನಿವೃತ್ತ ಸಿಡಿಪಿಒ ಚಂದ್ರರಾಜೇ ಅರಸ್, ಕಸಾಪ ಹೋಬಳಿ ಘಟಕ ನಿರ್ದೇಶಕರಾದ ವರದರಾಜು, ಎಚ್.ಆರ್. ಶಂಕರನಾರಾಯಣ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪೂರ್ವಭಾವಿ ಸಭೆ : ಇದೇ ಮೊದಲ ಸಮ್ಮೇಳನವಾದ್ದಾರಿಂದ ಅರ್ಥಪೂರ್ಣವಾಗಿ ಮತ್ತು ಅದ್ಧೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ. ಎಲ್ಲರಿಂದ ಸಲಹೆಗಳನ್ನು ಪಡೆದು ಪಾಲಿಸಲಾಗುವುದು. ಆಸಕ್ತ ಎಲ್ಲರಿಂದ ನೆರವು, ಸಹಕಾರ ಪಡೆಯಲಾಗುವುದು. ವಿವಿಧ ಜನಪ್ರತಿನಿಧಿಗಳು, ಸಂಘಟನೆಗಳ ಮುಖಂಡರು, ವಿವಿಧ ಇಲಾಖೆ ಅಧಿಕಾರಿಗಳು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಹಕಾರಿ ಸಂಘಗಳ ಪದಾಧಿಕಾರಿಗಳು, ಕನ್ನಡ ಅಭಿಮಾನಿಗಳು, ಸ್ತ್ರೀಶಕ್ತಿ ಸಂಘಗಳ ಪ್ರಮುಖರು ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಸಲಹೆ, ಸೂಚನೆ ನೀಡಬೇಕು ಎಂದು ಹೊನ್ನವಳ್ಳಿ ಹೋಬಳಿ ಘಟಕದ ಅಧ್ಯಕ್ಷ ಬಸವರಾಜು ಕೋರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








